HEALTH TIPS

ಶ್ರದ್ಧೆಯಿಂದಲೇ ಜ್ಞಾನಪ್ರಾಪ್ತಿ

             ಗುರುಕುಲಕ್ಕೆ ವಿದ್ಯಾಭ್ಯಾಸಕ್ಕೆಂದು ಬಂದ ಶಿಷ್ಯಂದಿರ ಶ್ರದ್ಧೆಯನ್ನು ಪರೀಕ್ಷಿಸಲು ಗುರುಗಳು ಮನಮಾಡಿದರು.

            ನಾಲ್ವರು ಶಿಷ್ಯಂದಿರಾದ ಧನಂಜಯ, ವಿಜಯ, ಸುಜಯ ಮತ್ತು ಶ್ರೀಧಾಮರನ್ನು ಕರೆದು- 'ನೀವೆಲ್ಲ ಈ ದಿನ ಪೂಜೆಗೆ ಬೆಟ್ಟದ ತುದಿಯಲ್ಲಿರುವ ಹೂವುಗಳನ್ನು ತಂದು ಕೊಡಬೇಕು' ಎಂದು ಹೇಳಿದರು. ಶಿಷ್ಯಂದಿರು ಹೂಗಳನ್ನು ತರಲು ಉತ್ಸಾಹದಿಂದಲೇ ಹೋದರು. ಅಷ್ಟೊತ್ತಿಗೆ ಜೋರಾಗಿ ಗಾಳಿಯೊಂದಿಗೆ, ಮಳೆ ಸುರಿಯಿತು. ಧನಂಜಯನಿಗೆ ಹೆದರಿಕೆ ಆಯಿತು. 'ನಾನು ಬರಲ್ಲ' ಅಂತ ಹೇಳಿದ. ಉಳಿದ ಮೂವರು ಛತ್ರಿಯನ್ನು ಹಿಡಿದುಕೊಂಡು ಮುನ್ನಡೆದರು. ಸ್ವಲ್ಪ ದೂರ ಸಾಗಿದ ಮೇಲೆ ಗಾಳಿ, ಮಳೆಯೇನೋ ನಿಂತಿತು, ಆದರೆ ಹಾವೊಂದು ಎದುರಾಯಿತು. ವಿಜಯನಿಗೆ ನಡುಕ ಉಂಟಾಯಿತು. 'ನಾ ಮುಂದೆ ಬರಲ್ಲ' ಅಂತ ಹೇಳಿ ಅಲ್ಲೇ ಹತ್ತಿರದಲ್ಲಿದ್ದ ಮರದ ಮೇಲೆ ಹತ್ತಿ ಕುಳಿತ. ಉಳಿದ ಇಬ್ಬರು ಹಾವು ತನ್ನ ಪಾಡಿಗೆ ಹೋಗುವುದನ್ನು ಕಾದು ಆನಂತರ ಮುನ್ನಡೆದರು. ಆವಾಗ ದೂರದಿಂದ ಕರಡಿಯ ಗುಂಪೊಂದು ಇವರತ್ತ ಧಾವಿಸಿ ಬರುತ್ತಿರುವುದನ್ನು ಕಂಡರು. ಕೂಡಲೇ ಅಲ್ಲೇ ಇರುವ ಪೊದೆಯ ಹಿಂದೆ ಅವಿತು ಕುಳಿತುಕೊಂಡರು. ಕರಡಿಯ ಗುಂಪು ಮುಂದೆ ಹೋಯಿತು. 'ಇನ್ನು ಮುಂದೆ ಯಾವ ತೊಂದರೆ ಬರತ್ತದೋ ಏನೋ… ನಾನು ಬರಲ್ಲ' ಎಂದು ಸುಜಯ ಹಿಂದೆ ಸರಿದ.

               ಶ್ರೀಧಾಮ ಮಾತ್ರ ಧೃತಿಗೆಡದೆ ಗುರುವನ್ನು ಮನದಲ್ಲೇ ಪ್ರಾರ್ಥಿಸುತ್ತ, ದಿಟ್ಟತನದಿಂದ ಬೆಟ್ಟದ ತುದಿಗೆ ತಲುಪಿದ. ಗುರುಗಳು ಹೇಳಿದ ಹೂಗಳನ್ನು ಗಿಡದಿಂದ ಕೀಳಿ ತಾನು ತಂದಿದ್ದ ಬುಟ್ಟಯೊಳಗೆ ತುಂಬಿದ. ಈಗಾಗಲೇ ಅರ್ಧದಾರಿಯಿಂದ ಮರಳಿ ಬಂದ ಶಿಷ್ಯಂದಿರು ಗುರುಗಳ ಆಶ್ರಮದಲ್ಲಿ ಶ್ರೀಧಾಮನ ಬರವಿಕೆಗಾಗಿ ಕಾದು ಕುಳಿತರು. ಅಷ್ಟೊತ್ತಿಗೆ ಶ್ರೀಧಾಮನು ಬಂದು, ಹೂವಿರುವ ಬುಟ್ಟಿಯನ್ನು ಗುರುಗಳ ಕೈಗೆ ಕೊಟ್ಟ. ಗುರುಗಳು, 'ನಿನಗೆ ಇವರಿಗೆಲ್ಲ ಎದುರಾದ ಸಂಕಷ್ಟಗಳು ಬರಲಿಲ್ಲವೇ?' ಎಂದು ಪ್ರಶ್ನಿಸಿದರು. 'ಗುರುಗಳೇ, ನನಗೂ ಆ ಎಲ್ಲ ಸಂಕಷ್ಟಗಳು ಎದುರಾದವು. ಆದರೂ ಆ ಅಡತಡೆಗಳನ್ನು ಮೀರಿ ನನ್ನ ಚಿತ್ತವನ್ನು ಗುರಿಯತ್ತ ಇರಿಸಿದೆ. ಹಾಗಾಗಿ ನೀವು ಹೇಳಿದ ಹಾಗೆ ಪೂಜೆಗೆ ಬೇಕಾದ ಹೂಗಳನ್ನು ತಂದೆ' ಎಂದ. ಪ್ರೀತಿಯಿಂದ ಶ್ರೀಧಾಮನ ಬೆನ್ನು ತಟ್ಟಿದ ಗುರುಗಳು ಎಲ್ಲ ಶಿಷ್ಯಂದಿರನ್ನು ಉದ್ದೇಶಿಸಿ ಹೇಳಿದರು, 'ನಾನು ನಿಮ್ಮ ಕಲಿಕಾಸಕ್ತಿ ಮತ್ತು ಶ್ರದ್ಧೆಯನ್ನು ಪರೀಕ್ಷಿಸಲು ನಿಮಗೊಂದು ಸವಾಲನ್ನು ಕೊಟ್ಟೆ. ಆದರೆ ಶ್ರೀಧಾಮ ಮಾತ್ರ ಆ ಸವಾಲನ್ನು ಎದುರಿಸಿ ಬಂದ. ಜ್ಞಾನವೇ ಜೀವನದ ನಿಜವಾದ ಸಂಪತ್ತು. ಜ್ಞಾನದಾಹವನ್ನು ನೀಗಿಸಲು ಅಪರಿಮಿತ ಆಸಕ್ತಿ ಮತ್ತು ಅಗಾಧವಾದ ಶ್ರದ್ಧೆ ಬೇಕು. ಈಜು ಬಾರದವನಿಗೆ ಈಜು ಬರುತ್ತದೆ ಎಂದು ಪ್ರಮಾಣಪತ್ರ ಕೊಟ್ಟರೆ ಏನು ಪ್ರಯೋಜನ? ಕಲಿತ ವಿದ್ಯೆಯಿಂದ ತನಗೂ ಸಮಾಜಕ್ಕೂ ಪ್ರಯೋಜನವಾಗಬೇಕು. ವಿದ್ಯೆಯನ್ನು ಕರಗತ ಮಾಡಿಕೊಂಡು ಅದನ್ನು ಜೀವನದಲ್ಲಿ ಆಳವಡಿಸಿಕೊಂಡಾಗ ಜೀವನ ಸಾರ್ಥಕ' ಎಂದ ಗುರುಗಳು ವಿದ್ಯಾಭ್ಯಾಸದ ಮಹತ್ವವನ್ನು ಎಲ್ಲ ಶಿಷ್ಯಂದಿರಿಗೆ ಮನವರಿಕೆ ಮಾಡಿದರು. ನಿಜ, ಶ್ರದ್ಧೆಯ ಶಕ್ತಿಯೇ ಬದುಕಿಗೆ ಭರವಸೆ ತುಂಬಬಲ್ಲದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries