ರಾಷ್ಟ್ರಪತಿ ಚುನಾವಣೆ 2022: ವಿಪಕ್ಷಗಳ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ ಆಯ್ಕೆಗೆ ಕಸರತ್ತು!

 ನವದೆಹಲಿ: ರಾಷ್ಟ್ರಪತಿ ಚುನಾವಣೆ 2022ರ ಆಭ್ಯರ್ಥಿ ಆಯ್ಕೆ ಕಸರತ್ತು ಮುಂದುವರೆಸಿರುವ ಕಾಂಗ್ರೆಸ್ ನೇತೃತ್ವದ ಬಿಜೆಪಿಯೇತರ ಪಕ್ಷಗಳು ಇದೀಗ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾರತ್ತ ತಮ್ಮ ಚಿತ್ತ ನೆಟ್ಟಿವೆ.

           ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗುವುದರಿಂದ ಹಿಂದೆ ಸರಿದ ಬೆನ್ನಲ್ಲೇ ಈಗ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಮತ್ತು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರು ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪ್ರಸ್ತಾಪವನ್ನು ಸೋಮವಾರ ತಿರಸ್ಕರಿಸಿದ್ದಾರೆ. ಈ ಹಿಂದೆ ವಿಪಕ್ಷಗಳ ಜಂಟಿ ರಾಷ್ಟ್ರಪತಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೋಪಾಲಕೃಷ್ಣ ಗಾಂಧಿ ಹೆಸರು ಬಲವಾಗಿ ಕೇಳಿ ಬಂದಿತ್ತು. ಆದರೆ ಅವರು ಇದೀಗ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದೇ ರೀತಿ ಫಾರೂಕ್ ಅಬ್ದುಲ್ಲಾ ಮತ್ತು ಶರದ್ ಪವಾರ್ ಕೂಡ ಈ ಹಿಂದೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. 

ಈ ಕುರಿತು ಸ್ಪಷ್ಟನೆ ನೀಡಿರುವ ಗೋಪಾಲಕೃಷ್ಣ ಗಾಂಧಿ ಅವರು, ಉನ್ನತ ಹುದ್ದೆಗೆ ಪರಿಗಣಿಸಿರುವುದು ಶ್ಲಾಘನೀಯ. ವಿರೋಧ ಪಕ್ಷವು ರಾಷ್ಟ್ರೀಯ ಒಮ್ಮತವನ್ನು ಉತ್ತೇಜಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಮತ್ತು ನನಗಿಂತ ಉತ್ತಮವಾಗಿ ಇದನ್ನು ಸಾಧಿಸಬಲ್ಲ ಇತರರು ಇದ್ದಾರೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.  

ದೆಹಲಿಯಲ್ಲಿ 17 ವಿರೋಧ ಪಕ್ಷಗಳ ನಡುವೆ ನಡೆದ ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಜಂಟಿಯಾಗಿ ನಿರ್ಧರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರೋಧ ಪಕ್ಷದ ನಾಯಕರ ಸಭೆ ಕರೆದಿದ್ದರು. 

ಯಶ್ವಂತ್ ಸಿನ್ಹಾರತ್ತ ಎಲ್ಲರ ಚಿತ್ತ

 ಗೋಪಾಲಕೃಷ್ಣ ಗಾಂಧಿ ಅವರು ಪ್ರಸ್ತಾವನೆಯನ್ನು ತಿರಸ್ಕರಿಸಿದ ನಂತರ, ಮಾಜಿ ಹಣಕಾಸು ಸಚಿವ ಮತ್ತು ಟಿಎಂಸಿ ನಾಯಕ ಯಶವಂತ್ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಲಾಗಿದೆ. ಈ ಸಭೆಗೆ ಮಮತಾ ಬ್ಯಾನರ್ಜಿ ಹಾಜರಾಗದಿದ್ದರೂ, ಜೂನ್ 21 ರಂದು ದೆಹಲಿಯಲ್ಲಿ ಶರದ್ ಪವಾರ್ ನೇತೃತ್ವದಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತು ಸಭೆ ನಡೆಯಲಿದೆ. ಟಿಎಂಸಿ ಮೂಲಗಳ ಪ್ರಕಾರ, ಪಕ್ಷದ ಪರವಾಗಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮತ್ತೊಂದೆಡೆ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಂಡಿಸಲು ಈಗ ಸಿದ್ಧತೆ ನಡೆದಿದೆ. ಯಶವಂತ್ ಸಿನ್ಹಾ ಪ್ರಸ್ತುತ ಟಿಎಂಸಿ ಪಕ್ಷದಲ್ಲಿದ್ದು, ಅವರು ಬಿಜೆಪಿಯ ಬದ್ಧ ವಿರೋಧಿ ಎಂದು ಪರಿಗಣಿಸಲಾಗಿದೆ. ಮಮತಾ ಬ್ಯಾನರ್ಜಿ ಜೊತೆಗಿನ ಮಾತುಕತೆಯ ವೇಳೆ ಯಶವಂತ್ ಸಿನ್ಹಾ ಅವರ ಹೆಸರನ್ನು ಹಲವು ರಾಜಕೀಯ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. ಆದರೆ, ನಾಳೆ ನಡೆಯಲಿರುವ ವಿರೋಧ ಪಕ್ಷದ ಸಭೆಯಲ್ಲಿ ಈ ಕುರಿತ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಒಮ್ಮೆ 1990 ರಲ್ಲಿ ಚಂದ್ರಶೇಖರ್ ಸಂಪುಟದಲ್ಲಿ ಮತ್ತು ನಂತರ ಮತ್ತೊಮ್ಮೆ ವಾಜಪೇಯಿ ಮಂತ್ರಿಮಂಡಲದಲ್ಲಿ ಸಿನ್ಹಾ ಅವರು ಎರಡು ಬಾರಿ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ವಾಜಪೇಯಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಸಹ ಹೊಂದಿದ್ದರು. ಜೂನ್ 15 ರಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಸಲು ಜೂನ್ 29 ಕೊನೆಯ ದಿನವಾಗಿದೆ. ಅಗತ್ಯವಿದ್ದಲ್ಲಿ ಜುಲೈ 18 ರಂದು ಮತದಾನ ನಡೆಯಲಿದ್ದು ಹಾಗೂ ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries