ಭಾರತ ಕೇಂದ್ರಿತ ಕೃಷಿ ಅನುಸರಿಸಿ: ರೈತರಿಗೆ ಭಾಗವತ್‌ ಕರೆ

 ನಾಗ್ಪುರ: ನಮ್ಮ ಜಿಡಿಪಿ ಹೆಚ್ಚಿಸುವಂತಹ 'ಭಾರತ ಕೇಂದ್ರಿತ' ಕೃಷಿ ವಿಧಾನವನ್ನು ಅನುಸರಿಸುವಂತೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೋಮವಾರ ರೈತರಿಗೆ ಕರೆ ನೀಡಿದರು.

ಕೇಂದ್ರದ ಪಶುವಿಜ್ಞಾನ ರಾಷ್ಟ್ರೀಯ ಅಕಾಡೆಮಿ ಮತ್ತು ಮಹಾರಾಷ್ಟ್ರ ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಿದ್ದ ವಾರ್ಷಿಕ ಘಟಿಕೋತ್ಸವ ಮತ್ತು ವೈಜ್ಞಾನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

'ಕ್ರಿ.ಶ. 1700ರವರೆಗೂ ವಿಶ್ವದಲ್ಲೇ ನಮ್ಮ ಆರ್ಥಿಕತೆ ಅಗ್ರಸ್ಥಾನದಲ್ಲಿತ್ತು. ನಮ್ಮದು ಕೃಷಿ ಆರ್ಥಿಕತೆ ಅವಲಂಬನೆಯ ದೇಶ. ನಾವು 'ಭಾರತ್ ಕೇಂದ್ರಿತ ವಿಧಾನ' ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ನಮ್ಮ ದೇಶದ ಪುರಾತನವಾದ ಸ್ಥಳೀಯ ಜ್ಞಾನದ ಕೃಷಿ ಮತ್ತು ಪಶುಸಂಗೋಪನೆ ವಿಧಾನವನ್ನು ರೈತರು ಅನುಸರಿಸಬೇಕು. ಇಂತಹ ಸ್ಥಳೀಯ ಜ್ಞಾನವನ್ನು ಪರಿಶೀಲಿಸದೆ ಅವೈಜ್ಞಾನಿಕವೆಂದು ತಿರಸ್ಕರಿಸುವುದು ತಪ್ಪು' ಎಂದರು.

'ಆಧುನಿಕ ಕೃಷಿ ವಿಜ್ಞಾನದಲ್ಲಿ ಅಡ್ಡ ಪರಿಣಾಮಗಳಿವೆ. ಆದರೆ ನಮ್ಮ ಪ್ರಾಚೀನ ಕೃಷಿ ಜ್ಞಾನ ಮತ್ತು ಪಶುಸಂಗೋಪನೆ ವಿಧಾನಗಳಲ್ಲಿ ಅಡ್ಡ ಪರಿಣಾಮಗಳಿಲ್ಲ. ಸ್ಥಳೀಯ ಜ್ಞಾನದ ಸಂಶೋಧನೆ ಮತ್ತು ಬಳಕೆಗೆ ಗಮನ ಹರಿಸಬೇಕು. ಯಾಂತ್ರೀಕೃತ ಬೇಸಾಯವು ಹೆಚ್ಚು ಕಾಲ ಉಳಿಯುವುದಿಲ್ಲ. ಇಂದಿಗೂ ಶೇ 65ರಷ್ಟು ರೈತರು ಸಣ್ಣ ಜಮೀನಿನಲ್ಲಿ ಕೃಷಿ ಮಾಡುತ್ತಾರೆ. ಯಾಂತ್ರೀಕೃತ ಕೃಷಿ ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ರಸಗೊಬ್ಬರ, ಬಿತ್ತನೆ ಬೀಜ ಇತ್ಯಾದಿಯಿಂದ ರೈತ ಸಾಲದ ಸುಳಿಗೆ ಸಿಲುಕಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರೈತರು ಅರ್ಥಮಾಡಿಕೊಳ್ಳಬಲ್ಲ ಸುಸ್ಥಿರ ಕೃಷಿ ವಿಧಾನವನ್ನು ಕಲಿಸಬೇಕು' ಎಂದು ಭಾಗವತ್‌ ಸಲಹೆ ನೀಡಿದರು.

ರೈತರು ಎದುರಿಸುತ್ತಿರುವ ಭಾಷಾ ನಿರ್ಬಂಧದ ಕುರಿತು ಮಾತನಾಡಿದ ಭಾಗವತ್‌, 'ಪಶುಸಂಗೋಪನೆಯ ಹೆಚ್ಚಿನ ಮಾಹಿತಿ ಇಂಗ್ಲಿಷ್‌ನಲ್ಲಿದೆ. ಹೊಸ ಶಿಕ್ಷಣ ನೀತಿಯು ತಾಂತ್ರಿಕ ವಿಷಯಗಳಲ್ಲಿ ಸ್ಥಳೀಯ ಭಾಷೆಯ ಬಳಕೆಯನ್ನು ಒಳಗೊಂಡಿದೆ. ನಾವು ಈ ಜ್ಞಾನವನ್ನು ಸ್ಥಳೀಯ ಭಾಷೆಗಳಲ್ಲಿ ಪಸರಿಸಬೇಕಿದೆ' ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್‌ ರೂಪಾಲಾ, ಮೋಹನ್‌ ಭಾಗವತ್ ಮತ್ತು ರಾಜ್ಯ ಸಚಿವ ಸುನೀಲ್ ಕೇದಾರ್ ಅವರಿಗೆ ಗೌರವ ಫೆಲೋಶಿಪ್ ನೀಡಿ ಗೌರವಿಸಲಾಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries