HEALTH TIPS

ಆಹಾರ ಪದಾರ್ಥಕ್ಕೆ ತೆರಿಗೆ ಹೇರಿಕೆ- ಸರಿಯಾದ ಕ್ರಮವಲ್ಲ

           ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಇದುವರೆಗೆ ತೆರಿಗೆ ವಿನಾಯಿತಿ ಪಡೆದಿದ್ದ ಕೆಲವು ಆಹಾರ ಪದಾರ್ಥಗಳು ಇನ್ನು ಮುಂದೆ ತೆರಿಗೆ ವ್ಯಾಪ್ತಿಗೆ ಬರಲಿವೆ. ಜೂನ್‌ ತಿಂಗಳ ಕೊನೆಯ ವಾರದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಆಹಾರ ಪದಾರ್ಥಗಳನ್ನು ತೆರಿಗೆ ವ್ಯಾಪ್ತಿಗೆ ತರುವ ತೀರ್ಮಾನ ಕೈಗೊಳ್ಳಲಾಗಿದೆ.

               ತೀರ್ಮಾನಗಳು ಸೋಮವಾರದಿಂದ ಅನುಷ್ಠಾನಕ್ಕೆ ಬರಲಿವೆ. ಜಿಎಸ್‌ಟಿ ಅಡಿಯಲ್ಲಿ ಬ್ರ್ಯಾಂಡೆಡ್ ಆಹಾರ ಪದಾರ್ಥಗಳಿಗೆ ಮಾತ್ರ ಇದುವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಬ್ರ್ಯಾಂಡೆಡ್ ಅಲ್ಲದ, ಪ್ಯಾಕ್ ಮಾಡಲಾಗಿರುವ, ಲೇಬಲ್ ಇರುವ ಆಹಾರ ಪದಾರ್ಥಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿತ್ತು. ಇದರ ಹಿಂದೆ ತರ್ಕವೊಂದು ಇದ್ದಿರಬಹುದು. ಬ್ರ್ಯಾಂಡೆಡ್ ವಸ್ತುಗಳನ್ನು ಹೆಚ್ಚಾಗಿ ಖರೀದಿಸುವವರು ಹೆಚ್ಚಿನ ವರಮಾನವುಳ್ಳ ವರ್ಗಕ್ಕೆ ಸೇರಿದವರು; ಬ್ರ್ಯಾಂಡೆಡ್ ಅಲ್ಲದ ಹಾಗೂ ಸ್ಥಳೀಯ ತಯಾರಕರು ಸಿದ್ಧಪಡಿಸಿದ, ಪ್ಯಾಕ್ ಮಾಡಿರುವ ಆಹಾರ ಪದಾರ್ಥಗಳನ್ನು ಖರೀದಿಸುವವರು ಕಡಿಮೆ ವರಮಾನ ಉಳ್ಳವರು ಎಂಬ ಭಾವನೆ ಇದೆ. ಬ್ರ್ಯಾಂಡೆಡ್ ಆಹಾರ ಪದಾರ್ಥಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಿರುವುದನ್ನು ಈ ತರ್ಕದ ಆಧಾರದಲ್ಲಿ ಸಮರ್ಥಿಸಿಕೊಳ್ಳಬಹುದು. ಆದರೆ, ಬ್ರ್ಯಾಂಡೆಡ್ ಅಲ್ಲದ, ಪ್ಯಾಕ್ ಮಾಡಿರುವ ಹಾಗೂ ಲೇಬಲ್ ಇರುವ ಆಹಾರ ಪದಾರ್ಥಗಳಿಗೆ ಶೇಕಡ 5ರಷ್ಟು ತೆರಿಗೆ ವಿಧಿಸುವ ಕ್ರಮಕ್ಕೆ ಇಂತಹ ಯಾವುದೇ ತರ್ಕದ ಸಮರ್ಥನೆ ಇಲ್ಲ. ಕಡಿಮೆ ವರಮಾನವುಳ್ಳ, ಬ್ರ್ಯಾಂಡೆಡ್‌ ಅಲ್ಲದ ಪದಾರ್ಥಗಳನ್ನು ಖರೀದಿಸುವ ವರ್ಗದ ಮೇಲೆ ಈ ತೆರಿಗೆ ಹೇರಿಕೆಯು ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

                ಪರೋಕ್ಷ ತೆರಿಗೆಗಳ ವಿಚಾರವಾಗಿ ಬಹುದೊಡ್ಡ ಟೀಕೆಯೊಂದು ಇದೆ. ಈ ತೆರಿಗೆಗಳು ಬಡವ ಯಾರು, ಶ್ರೀಮಂತ ಯಾರು ಎಂಬ ವ್ಯತ್ಯಾಸವನ್ನು ಗಮನಿಸುವುದಿಲ್ಲ. ಇದು ಪರೋಕ್ಷ ತೆರಿಗೆಗಳ ಮಿತಿಯೂ ಹೌದು. ಬಡವನಿಗೂ ಶ್ರೀಮಂತನಿಗೂ ಒಂದೇ ತೆರಿಗೆ ಎಂದು ಹೇಳುತ್ತದೆ. ಆಹಾರ ಧಾನ್ಯವನ್ನು ಕೊಳ್ಳುವವ ಬಡವನಾಗಿರಲೀ ಶ್ರೀಮಂತನಾಗಿರಲೀ ಆತ ಒಂದೇ ಪ್ರಮಾಣದಲ್ಲಿ ಪರೋಕ್ಷ ತೆರಿಗೆ ಪಾವತಿ ಮಾಡಬೇಕು. ಆದರೆ, ಇದುವರೆಗೆ ಬ್ರ್ಯಾಂಡೆಡ್ ಆಹಾರ ಪದಾರ್ಥಗಳಿಗೆ ಮಾತ್ರ ತೆರಿಗೆ ವಿಧಿಸಿ, ಬ್ರ್ಯಾಂಡೆಡ್ ಅಲ್ಲದ ಆಹಾರ ಪದಾರ್ಥಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇರಿಸುವ ಮೂಲಕ ‍ಪರೋಕ್ಷ ತೆರಿಗೆ ವ್ಯವಸ್ಥೆಯ ಮಿತಿಯನ್ನು ಅಷ್ಟಿಷ್ಟಾದರೂ ಮೀರುವ ಯತ್ನವು ನಡೆದಿತ್ತು. ಅಂದರೆ, ಬ್ರ್ಯಾಂಡೆಡ್ ಆಹಾರ ಪದಾರ್ಥಗಳನ್ನು ಮಾತ್ರ ಖರೀದಿಸುವವರು ತೆರಿಗೆ ಪಾವತಿಸುತ್ತಿದ್ದರು. ಸ್ಥಳೀಯ ತಯಾರಕರ, ಬ್ರ್ಯಾಂಡೆಡ್ ಅಲ್ಲದ ಆಹಾರ ಪದಾರ್ಥಗಳನ್ನು ಮಾತ್ರ ಖರೀದಿಸುವ ಗ್ರಾಹಕರು ತೆರಿಗೆಯ ಹೊರೆ ಹೊತ್ತುಕೊಳ್ಳಬೇಕಿರಲಿಲ್ಲ. ಇನ್ನು ಮುಂದೆ ಈ ವ್ಯತ್ಯಾಸ ಮಾಯವಾಗಲಿದೆ. ಬಡವರೂ ಶ್ರೀಮಂತರೂ ತಾವು ಉಣ್ಣುವ ಆಹಾರ ಧಾನ್ಯಗಳಿಗೆ ಸಮಾನ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡಬೇಕಾದ ಸಂದರ್ಭ ಎದುರಾಗಿದೆ. ಅಕ್ಕಿ, ಗೋಧಿ, ಮೊಸರು, ಮಜ್ಜಿಗೆ ಪೌಷ್ಟಿಕಾಂಶಗಳ ದೃಷ್ಟಿಯಿಂದ ಮಹತ್ವದವು. ಇವು ಎಲ್ಲ ವರ್ಗಗಳ ಜನರಿಗೂ ಅನಿವಾರ್ಯ. ಇವುಗಳ ಮೇಲಿನ ತೆರಿಗೆಯು ಗ್ರಾಹಕನಿಗೆ ಅನಗತ್ಯ ಹೊರೆ. ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ವರ್ಷದಿಂದ ವರ್ಷಕ್ಕೆ ವರಮಾನ ಸಂಗ್ರಹವು ಉತ್ತಮವಾಗುತ್ತಿರುವ ಹೊತ್ತಿನಲ್ಲಿ, ಇದುವರೆಗೆ ವಿನಾಯಿತಿ ಪಡೆದಿದ್ದ ಆಹಾರ ಧಾನ್ಯಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಅಗತ್ಯ ಇರಲಿಲ್ಲ.

              ಜಿಎಸ್‌ಟಿ ಮಂಡಳಿಯ ಕ್ರಮಕ್ಕೆ ಸಹಜವಾಗಿಯೇ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿ ಅಕ್ಕಿ ಗಿರಣಿಗಳ ಸಂಘವು ಪ್ರತಿಭಟನೆ ದಾಖಲಿಸಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ವರ್ತಕರ ಸಂಘಗಳು ಬಂದ್‌ ಆಚರಿಸಿ ವಿರೋಧ ದಾಖಲಿಸಿವೆ. ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸುವುದನ್ನು ಸದ್ಯದ ಮಟ್ಟಿಗಾದರೂ ಮುಂದಕ್ಕೆ ಹಾಕಬೇಕು ಎಂದು  ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ  ಈಚೆಗೆ ಒತ್ತಾಯ ಮಾಡಿತ್ತು. ಈ ಎಲ್ಲ ಆಗ್ರಹಗಳು ಹಾಗೂ ವಿರೋಧಗಳನ್ನು ಸರ್ಕಾರಗಳು ಗಮನಕ್ಕೆ ತೆಗೆದುಕೊಳ್ಳಬೇಕು. ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಸತತ ಆರು ತಿಂಗಳುಗಳಿಂದ ಮಿತಿಯನ್ನು ಮೀರಿ ಬೆಳೆದಿದೆ. ಇದರಲ್ಲಿ ಆಹಾರ ಪದಾರ್ಥಗಳ ಹಣದುಬ್ಬರದ ಕೊಡುಗೆಯೂ ಇದೆ. ಪರಿಸ್ಥಿತಿ ಹೀಗಿರುವಾಗ, ಆಹಾರ ಧಾನ್ಯಗಳ ಮೇಲಿನ ಹೊಸ ತೆರಿಗೆಯು ಹಣದುಬ್ಬರ ಹೆಚ್ಚಳಕ್ಕೆ ಇಂಬು ಕೊಡುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ, ಹಣದುಬ್ಬರವು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗಾದರೂ ಆಹಾರ ಪದಾರ್ಥಗಳನ್ನು ಸರ್ಕಾರಗಳು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇರಿಸುವುದು ಯುಕ್ತ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries