ಶಿಕ್ಷಕರ ನೇಮಕಾತಿ ಹಗರಣ: ಅರ್ಪಿತಾ ಮುಖರ್ಜಿಯ ನಾಲ್ಕು ವಾಹನಗಳಿಗಾಗಿ ಇ.ಡಿ ಶೋಧ

 

                ಕೋಲ್ಕತ್ತ: ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಅರ್ಪಿತಾ ಮುಖರ್ಜಿ ಅವರ ನಾಲ್ಕು ವಾಹನಗಳಿಗಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

                ಕೋಲ್ಕತ್ತದ ಡೈಮಂಡ್ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಅರ್ಪಿತಾ ಮುಖರ್ಜಿ ನಿವಾಸದ ಪಾರ್ಕಿಂಗ್ ಪ್ರದೇಶದಿಂದ ನಾಲ್ಕು ವಾಹನಗಳು ನಾಪತ್ತೆಯಾಗಿವೆ ಎನ್ನಲಾಗಿದೆ.

                  ಜುಲೈ 22ರಂದು ಅರ್ಪಿತಾ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು.

              ಇ.ಡಿ ಮೂಲಗಳ ಪ್ರಕಾರ, ಡೈಮಂಡ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ವಾಹನ ನಿಲುಗಡೆಗೆ ಐದು ಸ್ಲಾಟ್‌ಗಳನ್ನು ಅರ್ಪಿತಾ ಕಾಯ್ದಿರಿಸಿಕೊಂಡಿದ್ದರು. ದಾಖಲೆಗಳ ಪ್ರಕಾರ, ಜುಲೈ 22ರಂದು ಇ.ಡಿ ಅಧಿಕಾರಿಗಳು ದಾಳಿ ನಡೆಸುವುದಕ್ಕೂ ಮುನ್ನ ಎರಡು ಮರ್ಸಿಡಿಸ್ ಬೆಂಜ್ ವಾಹನಗಳು, ಒಂದು ಹೋಂಡಾ ಸಿಟಿ, ಒಂದು ಹೋಂಡಾ ಸಿಆರ್-ವಿ ಹಾಗೂ ಆಡಿ ಎ4 ಅಲ್ಲಿ ನಿಲುಗಡೆಯಾಗಿದ್ದವು. ಆದರೆ, ಅಧಿಕಾರಿಗಳು ದಾಳಿ ನಡೆಸಿದಾಗ ನಾಲ್ಕು ವಾಹನಗಳು ನಾಪತ್ತೆಯಾಗಿದ್ದವು ಎಂದು ಇ.ಡಿ ಮೂಲಗಳು ಹೇಳಿವೆ.

                  ಒಂದು ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಅನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿದೆ. ಅದನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಉಳಿದ ನಾಲ್ಕು ವಾಹನಗಳ ಪತ್ತೆಗೆ ಶ್ರಮಿಸುತ್ತಿದ್ದೇವೆ. ಕಾಂಪ್ಲೆಕ್ಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

             ನಾಪತ್ತೆಯಾಗಿರುವ ವಾಹನಗಳಲ್ಲಿ ನಗದು, ಚಿನ್ನ ಅಥವಾ ಇತರ ಬೆಲೆಬಾಳುವ ವಸ್ತುಗಳು ಇದ್ದಿರಬಹುದು ಎಂದೂ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

              ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅಚ್ಚರಿ ವ್ಯಕ್ತಪಡಿಸಿದ್ದು, ಇ.ಡಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇ.ಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹೀಗಾಗಿದೆ. ಇಂಥ ಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸುವಾಗ ಅವರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ.

                 ಈ ಮಧ್ಯೆ, ಬಂಧಿತ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಜೋಕಾದಲ್ಲಿನ ಇಎಸ್‌ಐ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಹಾಜರುಪಡಿಸಲಾಗಿದೆ.

                   ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಜುಲೈ 22ರಂದು ಪಶ್ಚಿಮ ಬಂಗಾಳದ ಹಲವೆಡೆ ಶೋಧ ನಡೆಸಿದ್ದ ಇ.ಡಿ. ಅಧಿಕಾರಿಗಳು ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ ಅವರನ್ನು ಬಂಧಿಸಿದ್ದರು. ಅರ್ಪಿತಾ ಮುಖರ್ಜಿ ಮನೆಯಿಂದ ಅಧಿಕಾರಿಗಳು ಕೋಟ್ಯಂತರ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದರು. ಈ ಹಣ ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಎಂದು ಅರ್ಪಿತಾ ಮುಖರ್ಜಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ಬಳಿಕ ವರದಿ ಮಾಡಿದ್ದವು.

                        ಶಿಕ್ಷಕರ ನೇಮಕಾತಿ ಹಗರಣದ ಆರೋಪಿಯಾಗಿರುವ ಕಾರಣ, ಪಶ್ಚಿಮ ಬಂಗಾಳದ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಅವರನ್ನು ಮಮತಾ ಬ್ಯಾನರ್ಜಿ ಸರ್ಕಾರವು ಸಚಿವ ಸ್ಥಾನದಿಂದ ಗುರುವಾರ ವಜಾಗೊಳಿಸಿತ್ತು. ಪಾರ್ಥ ಚಟರ್ಜಿ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಸಿಪಿಐ(ಎಂ) ಆರೋಪಿಸಿದ್ದ ಬೆನ್ನಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries