ನನ್ನ ತಂದೆಯ ಭಾವಚಿತ್ರ ಬಳಸಿ ಮತಯಾಚನೆ ಮಾಡಬೇಡಿ: ಶಿಂದೆ ಬಣದ ವಿರುದ್ಧ ಠಾಕ್ರೆ ಗರಂ

 

                ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ಶಿವಸೇನಾ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಗ್ದಾಳಿ ಮುಂದುವರಿಸಿದ್ದಾರೆ.

             ಶಿವಸೇನಾ ಮುಖವಾಣಿ 'ಸಾಮ್ನಾ'ದ ಸಂದರ್ಶನದಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ, ಬಂಡಾಯ ಶಾಸಕರನ್ನು 'ಕೊಳೆತ ಎಲೆಗಳು' ಎಂದು ಹೇಳಿಕೊಂಡಿದ್ದಾರೆ.

ಜತೆಗೆ ಆಸ್ಪತ್ರೆಯಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲೇ ನಮ್ಮ ಸರ್ಕಾರ ಉರುಳಿಸಲು ಕೆಲವು ಬಂಡಾಯ ಶಾಸಕರು ಸಂಚು ರೂಪಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

                'ನನ್ನ ಸರ್ಕಾರ ಹೋಯಿತು, ಮುಖ್ಯಮಂತ್ರಿ ಸ್ಥಾನ ಹೋಯಿತು. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದರೆ, ನನ್ನದೇ ಜನರು ದೇಶದ್ರೋಹಿಗಳಾಗಿ ಹೊರಹೊಮ್ಮಿದ್ದಾರೆ' ಎಂದು ಶಿಂದೆ ಮತ್ತು ಬಂಡಾಯ ಶಾಸಕರ ವಿರುದ್ಧ ಠಾಕ್ರೆ ಕಿಡಿಕಾರಿದ್ದಾರೆ.

                 ಇದೀಗ ನಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷದ ಮೇಲಿನ ನಮ್ಮ ಹಿಡಿತ ಕಸಿದುಕೊಳ್ಳುವ ಬಂಡಾಯಗಾರರು ಬೆದರಿಕೆಯೊಡ್ಡುತ್ತಿದ್ದಾರೆ. ಆದರೆ, ಪಕ್ಷದ ಚಿಹ್ನೆ ವಿಚಾರ ನಡೆಯುತ್ತಿರುವ ಕಾನೂನು ಸಮರದಲ್ಲಿ ಶಿವಸೇನಾ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

               ಬಂಡಾಯ ಶಾಸಕರು ನಮ್ಮ ಪಕ್ಷವನ್ನು ಒಡೆದಿದ್ದಾರೆ, ನನಗೆ ದ್ರೋಹ ಮಾಡಿದ್ದಾರೆ. ಅವರು ನಮ್ಮ ತಂದೆಯ (ಬಾಳಾ ಠಾಕ್ರೆ) ಭಾವಚಿತ್ರಗಳನ್ನು ಬಳಸಿ ಮತ ಭಿಕ್ಷೆ ಬೇಡುವುದನ್ನು ನಿಲ್ಲಿಸಬೇಕು ಎಂದು ಉದ್ಧವ್ ಗುಡುಗಿದ್ದಾರೆ.

                'ನಾನು ಯಾವಾಗಲೂ ವಾಸ್ತವದೊಂದಿಗೆ ಬದುಕುತ್ತೇನೆ. ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಕೆಲಕಾಲ ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯಬೇಕಾಯಿತು. ಪಕ್ಷವನ್ನು ನೋಡಿಕೊಳ್ಳಲು ನಾನು ನಿಮ್ಮನ್ನು (ಶಿಂದೆ) ನಂಬಿದ್ದೆ. ನೀವು ಆ ನಂಬಿಕೆಯನ್ನು ಮುರಿದಿದ್ದೀರಿ ಎಂದು ಶಿಂದೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಉದ್ಧವ್‌, ಏಕನಾಥ ಶಿಂದೆ ಬಣ ಸಕ್ರಿಯವಾಗಿ ನನ್ನ ವಿರುದ್ಧ ಪಿತೂರಿ ನಡೆಸಿತ್ತು' ಎಂದು ದೂರಿದ್ದಾರೆ. 

                ಠಾಕ್ರೆ ಮತ್ತು ಶಿವಸೇನಾವನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿರುವ ಶಿಂದೆ ಬಣಕ್ಕೆ ಒಂದು ಮಾತನ್ನು ಹೇಳಲು ಬಯಸುತ್ತೇನೆ, ನನ್ನ ತಂದೆಯ ಭಾವಚಿತ್ರ ಬಳಸಿಕೊಂಡು ಮತಯಾಚನೆ ಮಾಡಬೇಡಿ. ಪ್ರತಿಯೊಬ್ಬರೂ ತಮ್ಮ ಸ್ವಂತ ಪೋಷಕರ ಭಾವಚಿತ್ರಗಳನ್ನು ಬಳಸಿಕೊಂಡು ಮತಯಾಚನೆ ಮಾಡಬೇಕು. ದುರದೃಷ್ಟವಶಾತ್ ನನ್ನ ಪೋಷಕರು ಜೀವಂತವಾಗಿಲ್ಲ. ಆದರೆ, ಅವರು (ಬಂಡಾಯಗಾರರು) ನಮ್ಮ ಪೋಷಕರ ಆಶೀರ್ವಾದ ತೆಗೆದುಕೊಳ್ಳಬೇಕು. ನಿಮಗೆ ಸಮರ್ಪಣೆ ಇಲ್ಲ, ಕರ್ತವ್ಯ ಪ್ರಜ್ಞೆ ಇಲ್ಲ, ನೀವು ದೇಶದ್ರೋಹಿಗಳು ಎಂದು ಬಂಡಾಯ ಶಾಸಕರ ವಿರುದ್ಧ ಉದ್ಧವ್ ಕಟುವಾಗಿ ಟೀಕಿಸಿದ್ದಾರೆ.

                   ಶಿವಸೇನಾ ಪಕ್ಷದ 55 ಶಾಸಕರ ಪೈಕಿ ಕನಿಷ್ಠ 40 ಜನ ಶಾಸಕರು ಬಂಡಾಯ ನಾಯಕ ಶಿಂದೆ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೂನ್‌ 30ರಂದು ಶಿಂದೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries