​ವಿಜ್ಞಾನ ಉಪಕರಣಗಳಿಗೆ ಜಿಎಸ್ಟಿ ವಿನಾಯಿತಿ ರದ್ದತಿಯಿಂದ ವಿಜ್ಞಾನಿಗಳಲ್ಲಿ ಆತಂಕ

                 ನವದೆಹಲಿ :ಸರಕಾರಿ ಅನುದಾನಿತ ಸಂಶೋಧನಾ ಸಂಸ್ಥೆಗಳು ಖರೀದಿಸುವ ವೈಜ್ಞಾನಿಕ ಮತ್ತು ತಾಂತ್ರಿಕ ಉಪಕರಣಗಳಿಗೆ ಶೇ.5ರಷ್ಟಿದ್ದ ಜಿಎಸ್ಟಿ ವಿನಾಯಿತಿ ದರವನ್ನು ಸರಕಾರವು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ ಹಲವಾರು ವಿಜ್ಞಾನಿಗಳು ತಮ್ಮ ಸಂಶೋಧನೆಯ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.

               ವೈಜ್ಞಾನಿಕ ಉಪಕರಣಗಳ ಮೇಲಿನ ಜಿಎಸ್ಟಿ ಜು.18ರಿಂದ ಶೇ.18ಕ್ಕೆ ಏರಿಕೆಯಾಗಿದೆ,ಅಂದರೆ ನಮ್ಮ ಅನುದಾನವು ಶೇ.13ರಷ್ಟು ಕಡಿಮೆಯಾಗಿದೆ ಎಂದು ಸರಕಾರಿ ಸಂಸ್ಥೆಯೊಂದರ ವಿಜ್ಞಾನಿಯೋರ್ವರು ಹೇಳಿದರು.
           ಜಿಎಸ್ಟಿ ಏರಿಕೆಯು ಮೈಕ್ರೋಪಿಪೆಟ್ಗಳು ಮತ್ತು ರಾಸಾಯನಿಕದಂತಹ ಪ್ರಾಥಮಿಕ ಸರಕುಗಳಿಂದ ಹಿಡಿದು ಮೈಕ್ರೋಟೋಮ್ನಂತಹ ಅತ್ಯಾಧುನಿಕ ಯಂತ್ರಗಳವರೆಗೆ ಎಲ್ಲ ವೈಜ್ಞಾನಿಕ ಉಪಕರಣಗಳ ಬೆಲೆಗಳನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
          ಈ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಪ್ರಧಾನಿಯವರನ್ನು ಕೋರಿಕೊಳ್ಳುವಂತೆ ಅನುದಾನ ಪೂರೈಕೆ ಸಂಸ್ಥೆಗಳಿಗೆ ಟ್ವೀಟ್ ಮೂಲಕ ಕರೆ ನೀಡಿರುವ ಸಿಎಸ್‌ಐಆರ್ ಇನ್ಸ್ಟಿಟ್ಯೂಟ್ ಆಫ್ ಮೈಕ್ರೋಬಿಯಲ್ ಟೆಕ್ನಾಲಜಿಯ ಪ್ರಧಾನ ವಿಜ್ಞಾನಿ ಡಾ.ಅಮಿತ ಟುಲಿ ಅವರು,ಇಲ್ಲದಿದ್ದರೆ ವಿಜ್ಞಾನಕ್ಕೆ ಹೊಡೆತ ಬೀಳುತ್ತದೆ ಎಂದಿದ್ದಾರೆ.
              2017 ನವಂಬರ್ ನಲ್ಲಿ ಸರಕಾರವು ಸಾರ್ವಜನಿಕ ಅನುದಾನಿತ ಸಂಶೋಧನಾ ಸಂಸ್ಥೆಗಳು ಮತ್ತು ಪ್ರಯೋಗಶಾಲೆಗಳಲ್ಲಿಯ ವೈಜ್ಞಾನಿಕ ಮತ್ತು ತಾಂತ್ರಿಕ ಉಪಕರಣಗಳಿಗೆ ಶೇ.5ರ ವಿನಾಯಿತಿ ಜಿಎಸ್ಟಿ ದರವನ್ನು ಪ್ರಕಟಿಸಿತ್ತು.
          ಜಿಎಸ್ಟಿ ಪರಿಷ್ಕರಣೆಯತ್ತ ಗಮನ ಸೆಳೆದಿರುವ ಹಲವಾರು ವಿಜ್ಞಾನಿಗಳು,ಇದು ದೇಶದಲ್ಲಿ ಈಗಾಗಲೇ ಕಡಿಮೆ ಅನುದಾನಿತ ವೈಜ್ಞಾನಿಕ ಸಂಶೋಧನೆ ಕ್ಷೇತ್ರದ ಸಂಕಟಗಳನ್ನು ಇನ್ನಷ್ಟು ಹೆಚ್ಚಿಸಿದೆ ಎಂದಿದ್ದಾರೆ.
              ಯಥಾಸ್ಥಿತಿಯನ್ನು ಬದಲಿಸುವಲ್ಲಿ ಕೋವಿಡ್ ಸಹ ವಿಫಲಗೊಂಡಿದೆ ಎಂದು ಹೇಳಿದ ಐಸಿಎಂಆರ್ನ ಮಾಜಿ ಅಧಿಕಾರಿಯೋರ್ವರು, ಜಿಎಸ್ಟಿ ಇರಲಿ ಅಥವಾ ಜಿಎಸ್ಟಿ ಇಲ್ಲದಿರಲಿ,ವೈದ್ಯಕೀಯ ಸಂಶೋಧನೆಗೆ ಹೆಚ್ಚು ಹಣದ ಅಗತ್ಯವಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
             ಸಂಶೋಧನಾ ಉಪಕರಣಗಳ ಮೇಲಿನ ವಿನಾಯಿತಿ ಜಿಎಸ್ಟಿ ದರವನ್ನು ಹಿಂದೆಗೆದುಕೊಂಡಿರುವುದು ಈಗಾಗಲೇ ಅನುದಾನದ ಕೊರತೆಯಿಂದ ಬಳಲುತ್ತಿರುವ ಸಂಶೋಧನಾ ಪರಿಸರ ವ್ಯವಸ್ಥೆಗೆ ತೀವ್ರ ಹೊಡೆತವಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸಂಶೋಧಕರಾಗಿರುವ ಅರಿಂದಮ್ ಘೋಷ್ ಟ್ವೀಟಿಸಿದ್ದಾರೆ.
                 ಸಂಶೋಧನೆಗಳನ್ನು ನಡೆಸಲು ವಿಜ್ಞಾನಿಗಳಿಗೆ ಲಭ್ಯವಿರುವ ಸೀಮಿತ ಸಂಪನ್ಮೂಲಗಳತ್ತ ಬೆಟ್ಟು ಮಾಡಿದ ದಿಲ್ಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿಯ ವಿಜ್ಞಾನಿ ಅರ್ನಾಬ್ ಮುಖ್ಯೋಪಾಧ್ಯಾಯ ಅವರು,ಜಿಎಸ್ಟಿ ಏರಿಕೆಯಿಂದ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಅನುದಾನಗಳಲ್ಲಿ ಹೆಚ್ಚಳವನ್ನು ಮಾಡಬೇಕು ಎಂದು ಆಗ್ರಹಿಸಿದರು.
          ಈ ನಡುವೆ,ಜಿಎಸ್ಟಿ ದರವನ್ನು ಹೆಚ್ಚಿಸಿರುವ ಬಗ್ಗೆ ಅಗತ್ಯಕ್ಕಿಂತಲೂ ಹೆಚ್ಚಿನ ಕಳವಳ ವ್ಯಕ್ತವಾಗುತ್ತಿದೆ ಎಂದು ಕೆಲವು ವಿಜ್ಞಾನಿಗಳು ಭಾವಿಸಿದ್ದಾರೆ.
               'ನೂತನ ಜಿಎಸ್ಟಿ ದರಗಳು ದೀರ್ಘಾವಧಿಯಲ್ಲಿ ಸಂಶೋಧನೆಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ನಾನು ಭಾವಿಸಿಲ್ಲ. ನಮ್ಮ ಹೆಚ್ಚಿನ ಸಂಶೋಧನಾ ಉಪಕರಣಗಳನ್ನು ಸರಕಾರದ ಹಣದಿಂದ ಖರೀದಿಸಲಾಗುತ್ತದೆ,ಹೀಗಾಗಿ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಒಂದು ಜೇಬಿನಲ್ಲಿಯ ದುಡ್ಡನ್ನು ತೆಗೆದು ಇನ್ನೊಂದು ಜೇಬಿನಲ್ಲಿ ಇಟ್ಟಂತಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯಂತಹ ಅನುದಾನವನ್ನು ಒದಗಿಸುವ ಏಜೆನ್ಸಿಗಳಿಂದ ಹಣವನ್ನು ಪಡೆಯುವ ಕೆಲವು ಯೋಜನೆಗಳಿವೆ ಮತ್ತು ಈ ಏಜೆನ್ಸಿಗಳು ಹೆಚ್ಚುವರಿ ಹೊರೆಯನ್ನು ಭರಿಸಬೇಕಾಗುತ್ತದೆ,ಆದರೆ ಸಂಶೋಧನೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸಿಲ್ಲ 'ಎಂದು ಹೆಸರು ಹೇಳಿಕೊಳ್ಳಲು ಬಯಸದ ಐಸಿಎಂಆರ್ನ ನಿರ್ದೇಶಕರೋರ್ವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries