HEALTH TIPS

ಆರ್ಥಿಕ ಹಿಂಜರಿತಕ್ಕೆ ತಲ್ಲಣಿಸಲಿದೆ ಜಗತ್ತು: ಮುಂದಿನ ವರ್ಷ ಅಪಾಯ ಎಂದ ವಿಶ್ವ ಬ್ಯಾಂಕ್

 

             ನವದೆಹಲಿ: ಆರ್ಥಿಕ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಕಾರಣ ಮತ್ತು ಹಣದುಬ್ಬರವನ್ನು ತಗ್ಗಿಸಲು ಅನೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್​ಗಳು ವಿತ್ತೀಯ ನೀತಿಯನ್ನು ಬಿಗಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿತ ಉಂಟಾಗುವ ಸಂಭವ ಇದೆ ಎಂದು ವಿಶ್ವ ಬ್ಯಾಂಕ್​ನ ಹೊಸ ವರದಿ ಹೇಳಿದೆ.

ಉತ್ಪಾದನೆಯನ್ನು ಹೆಚ್ಚಿಸುವುದು, ಸರಬರಾಜು ಸರಪಳಿಯಲ್ಲಿನ ಲೋಪಗಳನ್ನು ನಿವಾರಿಸಿದರೆ ಆರ್ಥಿಕ ಹಿಂಜರಿತದ ಪರಿಣಾಮವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು ಸಲಹೆ ನೀಡಲಾಗಿದೆ. ಕೆಲವು ದೇಶಗಳಲ್ಲಿ ಆರ್ಥಿಕ ಹಿಂಜರಿತದ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಜಾಗತಿಕ ಹಣಕಾಸು ಬೆಳವಣಿಗೆ 1970ರ ನಂತರ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಹಲವು ದೇಶಗಳ ಆರ್ಥಿಕ ಪ್ರಗತಿಯಲ್ಲಿ ಈಗಾಗಲೇ ಇಳಿಕೆ ಕಂಡುಬರುತ್ತಿದೆ.

                ಹಲವು ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್​ಗಳ ಬಡ್ಡಿ ದರ ಶೇ.4 ಮೀರಿದೆ. 2021ಕ್ಕೆ ಹೋಲಿಕೆ ಮಾಡಿದರೆ ಇದು ದುಪ್ಪಟ್ಟಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಕೈಗೊಂಡಿರುವ ಈ ಕ್ರಮದಿಂದ ಆಹಾರ ಮತ್ತು ಇಂಧನ ತೈಲ ದರ ಶೇ.5 ಹೆಚ್ಚಳವಾಗಿದೆ. ಇವೆಲ್ಲದರ ಪರಿಣಾಮ ಆರ್ಥಿಕ ಹಿಂಜರಿತ ಉಂಟಾಗಬಹುದು ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ಭಾರತ, ಅಮೆರಿಕ, ಐರೋಪ್ಯ ದೇಶಗಳಲ್ಲಿ ಸಾಲದ ಮೇಲಿನ ಬಡ್ಡಿ ದರ ತೀವ್ರ ಪ್ರಮಾಣದಲ್ಲಿ ಹೆಚ್ಚಳ ಆಗಿದೆ.

                  ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಈ ಕ್ರಮವನ್ನು ಅನುಸರಿಸಲಾಗುತ್ತಿದೆ. ಆದರೆ, ಇದರ ಪರಿಣಾಮವೂ ಗಂಭೀರ ಸ್ವರೂಪದ್ದಾಗಿರುತ್ತದೆ. ಇಂಥ ಕ್ರಮದಿಂದ ಹೂಡಿಕೆ ಕಡಿಮೆಯಾಗುತ್ತದೆ. ಉದ್ಯೋಗದಲ್ಲಿ ಇಳಿಕೆ ಕಂಡುಬರುತ್ತದೆ. ಒಟ್ಟಾರೆ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ. ಇದು ಆರ್ಥಿಕ ಕುಸಿತಕ್ಕೆ ಪ್ರಮುಖ ಕಾರಣವಾಗಲಿದೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಹೇಳಿದ್ದಾರೆ.

              ಈಗಾಗಲೇ ಅನೇಕ ರಾಷ್ಟ್ರಗಳು ಆರ್ಥಿಕ ಹಿನ್ನಡೆ ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಜಾಗತಿಕ ಹಿಂಜರಿತ ಕಾಣಿಸಿಕೊಂಡರೆ ವಿಶ್ವದ ಅನೇಕ ರಾಷ್ಟ್ರಗಳು ಸಂಕಷ್ಟಕ್ಕೆ ತುತ್ತಾಗಲಿವೆ. ಮುಂದುವರಿಯುತ್ತಿರುವ ರಾಷ್ಟ್ರಗಳ ಮೇಲೆ ಇದರ ಪರಿಣಾಮ ಇನ್ನಷ್ಟು ಹೆಚ್ಚಾಗಿರಲಿದೆ. ಭಾರತದಂಥ ರಾಷ್ಟ್ರಗಳ ಜನರ ಮೇಲೆ ಅರ್ಥಿಕ ದುಷ್ಪರಿಣಾಮ ಗೋಚರವಾಗಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಹಿಂಜರಿತಕ್ಕೆ ಪ್ರಮುಖ ಕಾರಣಗಳು

  • ಬಹುತೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್​ಗಳು ದೊಡ್ಡ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಮಾಡಿರುವ ಕಾರಣ ಆರ್ಥಿಕ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ
  • ರಷ್ಯಾ-ಯೂಕ್ರೇನ್ ಯುದ್ಧ ಪರಿಣಾಮ ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾದ ಕಾರಣ ಆಹಾರ ಪದಾರ್ಥಸಹಿತ ಅನೇಕ ವಸ್ತುಗಳ ಬೆಲೆಗಳಲ್ಲಿ ಭಾರಿ ಏರಿಕೆ
  • ಚೀನಾದ ಹಲವು ಪ್ರಮುಖ ಪಟ್ಟಣಗಳಲ್ಲಿ ಮತ್ತೆ ಲಾಕ್​ಡೌನ್ ಹೇರಿಕೆ ಮಾಡಿರುವುದರಿಂದ ಬೇಡಿಕೆಯಲ್ಲಿ ಕುಸಿತ
  • ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಚಟುವಟಿಕೆಗೆ ಭಾರಿ ಹಿನ್ನಡೆ ಉಂಟಾಗಿರುವುದು

ಸೆನ್ಸೆಕ್ಸ್ ಕುಸಿತ

                               ಜಾಗತಿಕ ಆರ್ಥಿಕ ಹಿಂಜರಿತ ಭೀತಿ

               ಮುಂಬೈ: ಕೇಂದ್ರೀಯ ಬ್ಯಾಂಕ್​ಗಳ ದರ ಏರಿಕೆಯ ನಡುವೆ ಜಾಗತಿಕ ಆರ್ಥಿಕತೆ ಹಿಂಜರಿತದ ಕಾರಣ ಹೂಡಿಕೆದಾರರು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದೊಂದಿಗೆ ಶುಕ್ರವಾರ ಷೇರು ಮಾರುಕಟ್ಟೆ ಕುಸಿತ ಕಂಡಿತು. ಇದರಿಂದಾಗಿ ಹೂಡಿಕೆದಾರರು 6.18 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದರು. ದುರ್ಬಲ ರೂಪಾಯಿ ಮತ್ತು ವಿದೇಶಿ ನಿಧಿಯ ಹೊರಹರಿವು ಗಾಯದ ಮೇಲೆ ಬರೆ ಎಳೆದವು ಎಂದು ಷೇರು ವಹಿವಾಟುದಾರರು ಬೇಸರ ವ್ಯಕ್ತಪಡಿಸಿದರು.

                 ಬಿಎಸ್​ಇ ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳವು ಶುಕ್ರವಾರ 6,18,536.3 ಕೋಟಿ ರೂ.ಕುಸಿತ ಕಂಡಿತು. ಬಿಎಸ್​ಇ ಬೆಂಚ್​ವಾರ್ಕ್ ಶುಕ್ರವಾರ ಸತತ ಮೂರನೇ ದಿನವೂ ಕುಸಿದು, 1,730.29 ಪಾಯಿಂಟ್​ಗಳು ಅಥವಾ ಶೇಕಡ 2.85 ರಷ್ಟು ಕಡಿಮೆಯಾಗಿದೆ. ಮೂರು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು 7,02,371.88 ಕೋಟಿ ರೂ. ಕರಗಿದೆ.

              30 ಷೇರುಗಳ ಬಿಎಸ್​ಇ ಸೆನ್ಸೆಕ್ಸ್ 1,093.22 ಪಾಯಿಂಟ್ ಅಂದರೆ ಶೇ. 1.82 ಶೇಕಡ ಕುಸಿತ ಕಂಡು 58,840.79 ಕ್ಕೆ ಸ್ಥಿರವಾಯಿತು. ದಿನದ ಅವಧಿಯಲ್ಲಿ, ಇದು 1,246.84 ಪಾಯಿಂಟ್​ಗಳು ಅಥವಾ ಶೇಕಡ 2 ರಷ್ಟು ಕುಸಿದು 58,687.17 ಕ್ಕೆ ತಲುಪಿದೆ. ಅಂತೆಯೇ, ವಿಶಾಲವಾದ ಎನ್​ಎಸ್​ಇ ನಿಫ್ಟಿ 346.55 ಪಾಯಿಂಟ್​ಗಳು ಅಥವಾ 1.94 ರಷ್ಟು ಕುಸಿದು 17,530.85 ಕ್ಕೆ ಸ್ಥಿರವಾಯಿತು.

                 ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಅತಿಹೆಚ್ಚು ಕುಸಿತ (ಶೇ. 4.51 ರಷ್ಟು) ಕಂಡವು. ಹೆಚ್ಚು ಕುಸಿತ ಕಂಡ ಷೇರುಗಳ ಪೈಕಿ ಟೆಕ್ ಮಹಿಂದ್ರಾ, ಇನ್ಪೋಸಿಸ್, ವಿಪೋ›, ಟಿಸಿಎಸ್ ಮತ್ತು ನೆಸ್ಲೆ ಇಂಡಿಯಾ ಇದ್ದವು. ಇಂಡಸ್​ಇಂಡ್ ಬ್ಯಾಂಕ್ ಏಕೈಕ ಷೇರು ಲಾಭ ಪಡೆದುಕೊಂಡು, ಶೇ. 2.63 ಹೆಚ್ಚಳ ದಾಖಲಿಸಿತು. ವಾರದ ಆಧಾರದ ಮೇಲೆ, ಸೆನ್ಸೆಕ್ಸ್ 952.35 ಪಾಯಿಂಟ್ ಅಥವಾ ಶೇ. 1.59 ಕುಸಿತ ಕಂಡರೆ, ನಿಫ್ಟಿ 302.50 ಪಾಯಿಂಟ್ ಅಥವಾ ಶೇ. 1.69 ಇಳಿಕೆ ದಾಖಲಿಸಿತು. ವಾರದ ಅಂತಿಮ ದಿನವು ತೀಕ್ಷ ಮಾರಾಟಕ್ಕೆ ಸಾಕ್ಷಿಯಾಯಿತು ಮತ್ತು ಶೇಕಡಾ 2ರಷ್ಟು ನಷ್ಟವನ್ನು ಅನುಭವಿಸಿತು. ಮಾರಾಟದ ಒತ್ತಡವು ವ್ಯಾಪಕವಾಗಿ ಹರಡಿತು. ಇದರಲ್ಲಿ ಐಟಿ, ರಿಯಾಲ್ಟಿ ಮತ್ತು ಆಟೋ ಷೇರುಗಳು ಹೆಚ್ಚು ನಷ್ಟ ಅನುಭವಿಸಿದವು.

                  ಚಿನ್ನ 813 ರೂ. ಅಗ್ಗ: ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ದರ 10 ಗ್ರಾಂಗೆ 813 ರೂ. ಇಳಿಕೆಯಾಗಿ 49,447 ರೂ. ಆಗಿದೆ. ಈ ಮೂಲಕ 50 ಸಾವಿರ ರೂ.ಗಿಂತ ಕೆಳಕ್ಕೆ ಇಳಿದಿದೆ. ಇದು 6 ತಿಂಗಳ ಕನಿಷ್ಠ ಮಟ್ಟವಾಗಿದೆ. ಕಳೆದ ಒಂದು ವಾರದಲ್ಲಿ ಬಂಗಾರದ ಬೆಲೆ 1500 ರೂ. ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇದಕ್ಕೆ ಕಾರಣ ಎನ್ನಲಾಗಿದೆ. ಬೆಳ್ಳಿ ಪ್ರತಿ ಕೆಜಿಗೆ 1379 ರೂ. ಇಳಿಕೆ ಕಂಡು, 55 982 ರೂ. ಆಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries