HEALTH TIPS

ಪಿಎಫ್‌ಐ ನಿಷೇಧಿಸಲು ಕೇಂದ್ರ ಸರ್ಕಾರ ಸಜ್ಜು?

 

          ನವದೆಹಲಿ: ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮೇಲೆ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ.

               ಪಿಎಫ್‌ಐಯನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ಕಳೆದ ವರ್ಷ ಹೇಳಿದ್ದರು.

ಪಿಎಫ್‌ಐನ ಹಲವು ಕಾರ್ಯಕರ್ತರು ನಿಷೇಧಿತ ಸಂಘಟನೆ ಸಿಮಿಯ ಜತೆ ನಂಟು ಹೊಂದಿದ್ದವರು ಎಂದೂ ಅವರು ಹೇಳಿದ್ದರು.

                ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅಡಿಯಲ್ಲಿ ಪಿಎಫ್‌ಐ ಅನ್ನು ನಿಷೇಧಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು 2018ರಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ಕಿರಣ್‌ ರಿಜಿಜು ಹೇಳಿದ್ದರು.

                  ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಗಳ ಬಳಿಕ, ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರವು 2019ರ ಡಿಸೆಂಬರ್‌ನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

                 ದೇಶದ ವಿವಿಧ ಭಾಗಗಳಲ್ಲಿ ನಡೆದ ಹಿಂಸಾಕೃತ್ಯಗಳು, ಪ್ರತಿಭಟನೆಗಳು, ಹಣ ಅಕ್ರಮ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಘಟನೆಯ ಮೇಲೆ ನಿಗಾ ಇರಿಸಲಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಪಿಎಫ್‌ಐ, ಅದರ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

              2006ರಲ್ಲಿ ಪಿಎಫ್‌ಐ ಆರಂಭವಾಯಿತು. 1993ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ನ್ಯಾಷನಲ್‌ ಡೆವಲಪ್‌ಮೆಂಟ್‌ ಫ್ರಂಟ್ ಎಂಬ ಸಂಘಟನೆ ರಚಿಸಲಾಗಿತ್ತು. ಅದರ ಭಾಗವಾಗಿ ಪಿಎಫ್‌ಐ ಸ್ಥಾಪನೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

                ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದಲ್ಲಿ 20, ತಮಿಳುನಾಡಿನಲ್ಲಿ 10, ಅಸ್ಸಾಂನಲ್ಲಿ 9, ಉತ್ತರ ಪ್ರದೇಶದಲ್ಲಿ 8, ಆಂಧ್ರ ಪ್ರದೇಶದಲ್ಲಿ 5, ಮಧ್ಯ ಪ್ರದೇಶದಲ್ಲಿ 4, ಪುದುಚೇರಿ ಮತ್ತು ದೆಹಲಿಯಲ್ಲಿ ತಲಾ 3 ಮತ್ತು ರಾಜಸ್ಥಾನದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

                 ಇ.ಡಿ. ತನಿಖೆ: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆ, 2020ರ ದೆಹಲಿ ಗಲಭೆ,
ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ಗಲಭೆ ಸೃಷ್ಟಿಸುವುದಕ್ಕಾಗಿ ಹಣಕಾಸು ನೆರವು ನೀಡಿದ ಆರೋಪದ ಪ್ರಕರಣವನ್ನು ಇ.ಡಿ. ತನಿಖೆ ನಡೆಸುತ್ತಿದೆ. ಲಖನೌದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ನ್ಯಾಯಾಲಯದಲ್ಲಿ ಪಿಎಫ್‌ಐ ಮತ್ತು ಅದರ ಪದಾಧಿಕಾರಿಗಳ ಮೇಲೆ ಎರಡು ಆರೋಪಪಟ್ಟಿ ದಾಖಲಿಸಲಾಗಿದೆ.

                  ಜಾರಿ ನಿರ್ದೇಶನಾಲಯವು ಪಿಎಫ್‌ಐ ವಿರುದ್ಧ ಕಳೆದ ಫೆಬ್ರುವರಿಯಲ್ಲಿ ಮೊದಲ ಆರೋಪಪಟ್ಟಿ ಸಲ್ಲಿಸಿತ್ತು. ಎರಡನೇ ಆರೋಪಪಟ್ಟಿ ಈ ವರ್ಷ ಸಲ್ಲಿಕೆಯಾಗಿದೆ. ಅರಬ್‌ ಸಂಯುಕ್ತ ಸಂಸ್ಥಾನದಲ್ಲಿರುವ ಹೋಟೆಲ್‌ ಒಂದು ಪಿಎಫ್‌ನ ಹಣ ಅಕ್ರಮ ವರ್ಗಾವಣೆಯ ನೆಲೆಯಾಗಿ ಕೆಲಸ ಮಾಡುತ್ತಿದೆ ಎಂದು ಈ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

                             ಕೇಂದ್ರ ಗೃಹ ಸಚಿವ ಶಾ ಸಭೆ

            ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಸೇರಿದ 93 ಸ್ಥಳಗಳಲ್ಲಿ ಶೋಧ ನಡೆಸಿದ ಬೆನ್ನಿಗೇ ಹಿರಿಯ ಅಧಿಕಾರಿಗಳ ಜತೆಗೆ ಗುರುವಾರ ಸಭೆ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾಗ ಅಜಿತ್ ಡೊಭಾಲ್‌, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ, ಎನ್‌ಐಎ ಮಹಾನಿರ್ದೇಶಕ ದಿನಕರ್ ಗುಪ್ತಾ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

                                 ಪಿಎಫ್‌ಐ ಆಕ್ರೋಶ

                    ಎನ್‌ಐಎ ಕಾರ್ಯಾಚರಣೆಯ ವಿರುದ್ಧ ಪಿಎಫ್‌ಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪ‍ಡಿಸಿದ್ದಾರೆ. ಕೇರಳದಲ್ಲಿ ಶುಕ್ರವಾರ ಮುಂಜಾನೆಯಿಂದ ಮುಸ್ಸಂಜೆವರೆಗೆ ಬಂದ್‌ಗೆ ಕರೆ ಕೊಡಲಾಗಿದೆ. 'ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿರುವ ಮತಾಂಧ ಕೇಂದ್ರ ಸರ್ಕಾರವು ಭಿನ್ನಮತವನ್ನು ದಮನಿಸಲು ಯತ್ನಿಸುತ್ತಿದೆ' ಎಂದು ಪಿಎಫ್‌ಐ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್‌ ಸತ್ತಾರ್ ಹೇಳಿದ್ದಾರೆ.

                   ಬಂದ್‌ ಕರೆಯು ಅನಗತ್ಯವಾಗಿತ್ತು. ಬಂದ್‌ಗೆ ಕರೆ ಕೊಟ್ಟವರ ಮೇಲೆ ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದೆ, ಪಿಎಫ್‌ಐ ಬಂದ್‌ಗೆ ಕರೆ ಕೊಟ್ಟಾಗಲೆಲ್ಲ ಗಲಭೆ ನಡೆದಿದೆ ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ಹೇಳಿದ್ದಾರೆ.

                 ಕಾನೂನು ಜಾರಿ ಸಂಸ್ಥೆಗಳು ಪಿಎಫ್‌ಐ ಮೇಲೆ ಕೈಗೊಂಡ ಕ್ರಮಗಳ ಕುರಿತಂತೆ ಯುವ ಜನರು ಶಾಂತಿಯಿಂದ ಇರಬೇಕು ಎಂದು ಮುಸ್ಲಿಮರಿಗೆ ಸಂಬಂಧಿಸಿದ ಹಲವು ಸಂಸ್ಥೆಗಳು ಮನವಿ ಮಾಡಿಕೊಂಡಿವೆ.

                               'ಹಿಂಸೆಯಿಂದ ಜನರಲ್ಲಿ ಭಯ ಬಿತ್ತಿದ ಪಿಎಫ್‌ಐ'

               ವಿವಿಧ ಸ್ವರೂಪದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪಿಎಫ್‌ಐ ತೊಡಗಿಸಿಕೊಂಡಿದೆ ಎಂದು ಎನ್‌ಐಎ ಗುರುವಾರ ಆರೋಪಿಸಿದೆ. 'ಇತರ ಧಾರ್ಮಿಕ ನಂಬಿಕೆಯ ಜನರನ್ನು ಅತ್ಯಂತ ನಿರ್ದಯವಾಗಿ ಹತ್ಯೆ ಮಾಡುವುದು, ಗಣ್ಯರನ್ನು ಗುರಿಯಾಗಿಸಿ ದಾಳಿ ಎಸಗಲು ಸ್ಫೋಟಕಗಳನ್ನು ಸಂಗ್ರಹಿಸುವುದು, ಸಾರ್ವಜನಿಕರ ಆಸ್ತಿಯನ್ನು ನಾಶ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಭಯದ ಭಾವನೆ ಹುಟ್ಟುಹಾಕುವ ಕೆಲಸವನ್ನು ಪಿಎಫ್‌ಐ ಮಾಡಿದೆ' ಎಂದು ಎನ್‌ಐಎ ಆರೋಪಿಸಿದೆ.

               'ಪಿಎಫ್‌ಐ ಮೇಲೆ ಐದು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದರ ಭಾಗವಾಗಿ ಪಿಎಫ್‌ಐನ ಪ್ರಮುಖ ಸದಸ್ಯರನ್ನು ಬಂಧಿಸಲಾಗಿದೆ' ಎಂದು ಎನ್‌ಐಎ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries