HEALTH TIPS

ಮಳೆಯಿಂದ ಅಡಿಕೆ ರಕ್ಷಣೆ: ಇಲ್ಲಿದೆ ಕೃಷಿ ವಿಜ್ಞಾನ ಕೇಂದ್ರ ತಜ್ಞರ ಸಲಹೆ

  ಅಡಿಕೆ ಕರಾವಳಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆ. ಅಡಿಕೆಗೆ ಪ್ರತಿ ಮಳೆಗಾಲದಲ್ಲಿ ಕೊಳೆರೋಗ ಬರುವುದು ಸಾಮಾನ್ಯ. ಇದರಿಂದ ಶೇ20 ರಿಂದ ಶೇ 70ರಷ್ಟು ಬೆಳೆ ಹಾನಿಯಾಗುತ್ತಿದೆ. ಹೆಚ್ಚಿನ ರೈತರಿಗೆ ಅಡಿಕೆ ಮುಖ್ಯಬೆಳೆಯಾಗಿದ್ದು ಸಾಕಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ.

ಕೊಳೆರೋಗದ ನಿಯಂತ್ರಣದ ಬಗ್ಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ ಮತ್ತು ಡಾ. ಸಚಿನ್‌ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕೊಳೆರೋಗದ ಹಾನಿಯ ಲಕ್ಷಣಗಳು: ಪ್ರಾರಂಭದಲ್ಲಿ ಕಾಯಿಗಳ ಮೇಲೆ ಅಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಂಡು, ಅಡಿಕೆ ಉದುರುವುದು, ಕ್ರಮೇಣ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಭಾಗವನ್ನೆಲ್ಲಾ ಆವರಿಸಿ ಕಾಯಿಗಳು ಹೊಳಪು ಕಳೆದುಕೊಂಡು ಕೊಳೆಯುವುದು, ಕೊಳೆತ ಕಾಯಿಗಳ ಮೇಲೆ ಬಿಳಿ ಬಣ್ಣದ ಶಿಲೀಂಧ್ರ (ಬೂಸ್ಟ್) ಬೆಳವಣಿಗೆ ಕಂಡು ಬರುವುದು. ರೋಗ ತೀವ್ರಗೊಂಡಾಗ ಗೊಂಚಲು ಕೊಳೆತು ಕಪ್ಪಾಗುವುದು.

ತಡೆಯುವ ವಿಧಾನ: ಮಳೆಗಾಲದಲ್ಲಿ ಅಡಿಕೆ ಗೊನೆಗಳಿಗೆ, ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಶೇ.1ರ ಬೋರ್ಡೋ ದ್ರಾವಣವನ್ನು ಅಥವಾ ಶೇ 0.2 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ಅಥವಾ ಶೇ 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ಸೂಕ್ತ ಅಂಟಿನೊಂದಿಗೆ (ರಾಳ) ಬೆರೆಸಿ ಸಿಂಪರಣೆ ಮಾಡಿದರೆ ಮುಂದೆ ಬರುವ ಕೊಳೆರೋಗವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದು.

ಶೇ 1 ರ ಬೋರ್ಡೊ ದ್ರಾವಣ ಕೊಳೆರೋಗದ ಹತೋಟಿಯಲ್ಲಿ ಉತ್ತಮವಾದ ಶಿಲೀಂದ್ರನಾಶಕವಾಗಿದ್ದು ರೈತರು ವೈಜ್ಞಾನಿಕವಾಗಿ ತಯಾರಿಸಿ ಸಿಂಪಡಿಸಿದರೆ ಕೊಳೆರೋಗವನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು. ಮಾಹಿತಿಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಬಹುದು (9448950250).

ದ್ರಾವಣ ತಯಾರಿಕೆ ಮತ್ತು ಬಳಕೆ

ಪಾತ್ರೆಯಲ್ಲಿ ಒಂದು ಕಿ.ಗ್ರಾಂ ಮೈಲುತುತ್ತು (ತಾಮ್ರದ ಸಲ್ಫೇಟ್) ವನ್ನು 50 ಲೀ ನೀರಿನಲ್ಲಿ ಚೆನ್ನಾಗಿ ಕರಗಿಸಬೇಕು. ಇನ್ನೊಂದು ಪಾತ್ರೆಯಲ್ಲಿ ಒಂದು ಕಿ.ಗ್ರಾಂ ಸುಣ್ಣವನ್ನು 50 ಲೀ ನೀರಿನಲ್ಲಿ ಚೆನ್ನಾಗಿ ಕರಗಿಸಿ ಬೆರೆಸಬೇಕು ಮತ್ತು ಇದರ ಜತೆಯಲ್ಲಿ 150 ಗ್ರಾಂ ನಷ್ಟು ಅಂಟನ್ನು ಮಿಶ್ರ ಮಾಡಬೇಕು. ಎರಡು ದ್ರಾವಣವನ್ನು ಒಂದೇ ಸಾರಿ ಮೂರನೆ ಪಾತ್ರೆಗೆ ಸುರಿಯುತ್ತಾ ಕಲಕಿ ಮಿಶ್ರಣ ಮಾಡಬೇಕು. ಬೋರ್ಡೊ ದ್ರಾವಣದ ರಸಸಾರ (ಪಿ.ಎಚ್) 7 ಇರಬೇಕು. ಕಡಿಮೆಯಾಗಿದ್ದರೆ ಸಸ್ಯಗಳಿಗೆ ಹಾನಿಯಾಗುವುದು. ರಸಸಾರವನ್ನು ಶುದ್ಧ ಅರಸಿನ ಪುಡಿಯನ್ನು ಬಿಳಿ ಹಾಳೆಯ ಮೇಲೆ ಹರಡಿ, ಮಿಶ್ರವಾದ ಬೋರ್ಡೋ ದ್ರಾವಣದಲ್ಲಿ ಕಡ್ಡಿಯನ್ನು ಅದ್ದಿ ಅರಸಿನ ಪುಡಿಯ ಮೇಲೆ ಒಂದು ಹನಿಯನ್ನು ಹಾಕಿದಾಗ ಸುಣ್ಣದ ಪ್ರಮಾಣ ಅಧಿಕವಾಗಿದ್ದರೆ ಅರಸಿನವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಮೈಲುತುತ್ತು ಪ್ರಮಾಣ ಅಧಿಕವಾಗಿದ್ದರೆ ಕಂದು ಬಣ್ಣಕ್ಕೆ ತಿರುಗುತ್ತದೆ. ತಯಾರಿಸಿದ ಬೋರ್ಡೋ ದ್ರಾವಣವು ತಟಸ್ಥವಾಗಿದ್ದರೆ ಬಣ್ಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ತಟಸ್ಥ ರಸಸಾರವನ್ನು ಹೊಂದಿರುವ ಬೋರ್ಡೋ ದ್ರಾವಣವು ಸಿಂಪರಣೆಗೆ ಯೋಗ್ಯವಾಗಿರುತ್ತದೆ.


 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries