HEALTH TIPS

ಕನ್ನಡ ಹೋರಾಟಗಾರ ಪುರುಷೋತ್ತಮ ಮಾಸ್ತರ್ ನಿಧನ


                   ಕಾಸರಗೋಡು: ಕನ್ನಡ ಹೋರಾಟಗಾರ, ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ಅವಿರತ ಹೋರಾಟ ನಡೆಸುತ್ತಾ ಬಂದಿರುವ ಗಡಿನಾಡ ಕನ್ನಡದ ಸಂತ ಬಿ. ಪುರುಷೋತ್ತಮ(84) ಮಂಗಳವಾರ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
            ಕರ್ನಾಟಕ ಏಕೀಕರಣ  ಹಾಗೂ ಕಾಸರಗೋಡು ವಿಲೀನೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಗಡಿನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಅವಿರತ ಶ್ರಮ ವಹಿಸಿದ್ದಾರೆ. ಕನ್ನಡ ಭಾಷೆಗಾಗಿ ನಡೆಸಿದ ಹೋರಾಟಕ್ಕಾಗಿ ಕಳೆದ ಫೆಬ್ರವರಿಯಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಪ್ರತಿಷ್ಠಾಪಿಸಿದ್ದ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದ್ದರು. 1938ರ ಏ. 13ರಂದು ಕಾಸರಗೋಡು ಅಣಂಗೂರಿನ ದಾಸಪ್ಪ-ಸರಸ್ವತೀ ದಂಪತಿ ಪುತ್ರನಾಗಿ ಜನಿಸಿದ ಇವರು ಕೂಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಸರ್ಕಾರಿ ಯುಪಿ ಶಾಲೆ, ಬಿ.ಇ.ಎಂ ಶಾಲೆ ಹಳೇ ವಿದ್ಯಾರ್ಥಿಯಾಗಿದ್ದರು. ಭಾಷೆ, ಸಾಹಿತ್ಯದ ಮೇಲಿನ ವಿಶೇಷ ಆಸಕ್ತಿಯಿಂದ ಖಾಸಗಿಯಾಗಿ ಭಾಷೆ-ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಉಜಿರೆಯಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಇವರು, ಕಾಸರಗೋಡಿನ ಚಿತ್ತಾರಿ, ಬಂಗ್ರಮಂಜೇಶ್ವರ, ಮಧೂರು, ಮಾಯಿಪ್ಪಾಡಿ ಸೇರಿದಂತೆ ನಾನಾ ಕಡೆ ಶಿಕ್ಷಕರಾಗಿ, ನಂತರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಂತರ ಕಣ್ಣೂರು ವಿಶ್ವ ವಿದ್ಯಾಲಯದ ವಿದ್ಯಾನಗರ ಚಾಲ ಕೇಂದ್ರದ ಬಿ-ಇಡಿ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
            ತಮ್ಮ ನಿವೃತ್ತಿಯ ಜೀವನವನ್ನು ಕನ್ನಡದ ಹೋರಾಟಕ್ಕೆ ಮೀಸಲಿರಿಸಿದ್ದ  ಪುರುಷೋತ್ತಮ ಅವರು ಕನ್ನಡದ ಕೆಲಸಗಳಿಗಾಗಿ ಹಲವು ಬಾರಿ ದೂರದ ತಿರುವನಂತಪುರದ ಸೆಕ್ರೆಟೇರಿಯೆಟ್‍ನ ಮೆಟ್ಟಿಲೇರಿದ್ದರು. ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾದಾಗಲೆಲ್ಲ ಧ್ವನಿಯೆತ್ತುತ್ತಿದ್ದ ಇವರು, ಕನ್ನಡಕ್ಕಾಗಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಕನ್ನಡಿಗರಿಗಾಗಿ ಹಲವಾರು ಸವಲತ್ತುಗಳನ್ನು ಸರ್ಕಾರದಿಂದ ದೊರಕಿಸಿಕೊಟ್ಟಿದ್ದರು. ಬಿ.ಪುರುಷೋತ್ತಮ ಅವರು ಜತೆಗೆ ಒಯ್ಯುತ್ತಿದ್ದ ಕೈಚೀಲದಲ್ಲಿ ಸದಾ ಮನವಿ, ಅರ್ಜಿಗಳ ಕಟ್ಟು ಇರುತ್ತಿತ್ತು. ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕಾಸರಗೋಡು ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗ ಸ್ಥಾಪನೆಗೂ ಶ್ರಮಿಸಿದ್ದರು. ಕಾಸರಗೋಡಿನ ಕನ್ನಡಿಗರಿಗೆ ಕಡ್ಡಾಯ ಮಲಯಾಳದ ಆದೇಶ ಬಂದಾಗ ಸರ್ಕಾರದ ವಿರುದ್ಧ ಸಿಡಿದೆದ್ದು, ಕನ್ನಡ ಸಂಸ್ಥೆಗಳನ್ನು ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸಿದ್ದರು.ಕನ್ನಡಕ್ಕಾಗಿ ನಿರಂತರ ಕಾನೂನಿನ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ ಕುಣಿಕುಳ್ಳಾಯ, ಡಾ. ಕಯ್ಯಾರ ಕಿಞಣ್ಣ ರೈ ಮುಂತಾದ ದಿಗ್ಗಜರ ಒಡನಾಡಿಯಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries