HEALTH TIPS

ಜೆಇಇ, ನೀಟ್ ಆಕಾಂಕ್ಷಿಗಳ 'ನಂಬಿಕೆಯ ಗೋಡೆ'

 

             ಕೋಟಾ : 'ದಯವಿಟ್ಟು ನೀಟ್-2023 ಪರೀಕ್ಷೆಯಲ್ಲಿ ನಾನು ಆಯ್ಕೆಯಾಗಲಿ', 'ಪ್ರೀತಿಯ ದೇವರೇ ನನಗೆ ಏಕಾಗ್ರತೆ ಕೊಡು', 'ದೆಹಲಿ ಏಮ್ಸ್ ದಯವಿಟ್ಟು', 'ದೆಹಲಿ ಐಐಟಿ ನನಗೆ, ಗೂಗಲ್ ನನ್ನ ಸಹೋದರನಿಗೆ'...

                   ಇವು ಯಾವುದೇ ಡೈರಿಯಲ್ಲಿ ಬರೆದಿರುವ ಬರಹಗಳಲ್ಲ. ಇವು ನೀಟ್, ಐಐಟಿ ಆಕಾಂಕ್ಷಿಗಳು ದೇವಸ್ಥಾನವೊಂದರ ಗೋಡೆಯ ಮೇಲೆ ಬರೆದಿರುವ ಬರಹಗಳು!

                     'ಕೋಚಿಂಗ್ ಹಬ್' ಎಂದೇ ಖ್ಯಾತಿಯಾಗಿರುವ ರಾಜಸ್ಥಾನದ ಕೋಟಾ ನಗರಕ್ಕೆ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ಸಲುವಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕೋಚಿಂಗ್‌ಗೆ ಬರುತ್ತಾರೆ. ನಿತ್ಯದ ತರಬೇತಿ, ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲೇಬೇಕೆಂಬ ನಿರೀಕ್ಷೆ ಮತ್ತು ಒತ್ತಡದ ಭಾರದಲ್ಲಿರುವ ವಿದ್ಯಾರ್ಥಿಗಳು ಇಲ್ಲಿನ ತಲ್ವಂಡಿಯಲ್ಲಿರುವ ರಾಧಾಕೃಷ್ಣ ದೇವಸ್ಥಾನದ ಗೋಡೆಯ ಮೇಲೆ ತಮ್ಮ ಶೈಕ್ಷಣಿಕ ಯಶಸ್ಸಿಗೆ ಕೋರಿ ಮನವಿ ಬರೆಯುತ್ತಾರೆ.

                'ಈ ರೀತಿ ಗೋಡೆಯ ಮೇಲೆ ಬರೆಯುವುದು ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಬಲವಾದ ನಂಬಿಕೆಯಾಗಿಬಿಟ್ಟಿದೆ. ಅದು 'ನಂಬಿಕೆಯ ಗೋಡೆ' ಎಂದೇ ಪ್ರಸಿದ್ಧಿಯಾಗಿದೆ. ಹಾಗಾಗಿ, ಬರಹಗಳಿಂದ ತುಂಬಿರುವ ಗೋಡೆಗೆ ಪ್ರತಿ ಎರಡು ತಿಂಗಳಿಗೊಮ್ಮೆ ಬಣ್ಣ ಬಳಿಸುತ್ತೇವೆ' ಎನ್ನುತ್ತಾರೆ ರಾಧಾಕೃಷ್ಣ ದೇವಸ್ಥಾನದ ಅರ್ಚಕ ತ್ರಿಲೋಕ್ ಶರ್ಮಾ.

               'ಈ ವರ್ಷ ಇಲ್ಲಿನ ಕೋಚಿಂಗ್ ಸೆಂಟರ್‌ಗಳಲ್ಲಿ ದಾಖಲೆಯ ಮಟ್ಟದಲ್ಲಿ ಅಂದರೆ ಎರಡು ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ದೇವಸ್ಥಾನಕ್ಕೆ ನಿತ್ಯವೂ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ಕೊಡುತ್ತಾರೆ. ಆದರೆ, ಕಠಿಣ ಪರಿಶ್ರಮವಿದ್ದರೆ ಮಾತ್ರ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಹೇಳುತ್ತೇವೆ. ಬಳಿಕ ದೇವರ ಪ್ರಸಾದ ಕೊಟ್ಟು ಕಳುಹಿಸುತ್ತೇವೆ' ಎನ್ನುತ್ತಾರೆ ಅವರು.

             'ಬಹಳ ಹಿಂದೆ, ಕೆಲವು ವಿದ್ಯಾರ್ಥಿಗಳು ದೇವಸ್ಥಾನಕ್ಕೆ ಪ್ರಾರ್ಥನೆಗೆ ಬಂದಾಗ, ಅವರು ಐಐಟಿ, ಜೆಇಇ ಪರೀಕ್ಷೆಗಳಲ್ಲಿ ತಾವು ಆಯ್ಕೆಯಾಗುತ್ತೇವೆಯೇ ಎಂದು ದೇವರಲ್ಲಿ ಕೇಳಿಕೊಂಡಿದ್ದರು. ಕೆಲವು ತಿಂಗಳ ನಂತರ, ಇಬ್ಬರು ವಿದ್ಯಾರ್ಥಿಗಳ ಪೋಷಕರು ದೇವಸ್ಥಾನಕ್ಕೆ ಬಂದು ದೇಣಿಗೆ ನೀಡಲು ಮುಂದಾದರು. ಗೋಡೆಯ ಮೇಲೆ ಬರೆದ ತಮ್ಮ ಮಕ್ಕಳ ಪ್ರಾರ್ಥನೆ ಈಡೇರಿದೆ ಎಂದೂ ತಿಳಿಸಿದರು. ಅಲ್ಲಿಂದೀಚೆಗೆ ಈ ಗೋಡೆ ಜನಪ್ರಿಯವಾಯಿತು' ಎನ್ನುತ್ತಾರೆ ಅವರು.

                 'ಆರಂಭದಲ್ಲಿ ಈ ರೀತಿಯ ಗೋಡೆ ಬರಹಕ್ಕೆ ದೇವಸ್ಥಾನದ ಮಂಡಳಿ ಆಕ್ಷೇಪಿಸಿತ್ತು. ಆದರೆ, 2000ರಲ್ಲಿ ಈ ಗೋಡೆಯ ಮೇಲೆ ಬರೆದಿದ್ದ ಕೆಲವು ವಿದ್ಯಾರ್ಥಿಗಳು ಐಐಟಿ ಮತ್ತು ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಈ ಗೋಡೆಗೆ 'ನಂಬಿಕೆ ಗೋಡೆ' ಎಂದು ಹೆಸರಿಡಲಾಯಿತು. ಸ್ಥಳೀಯರು ಮತ್ತು ವಿದ್ಯಾರ್ಥಿಗಳ ನಂಬಿಕೆ ಗಟ್ಟಿಯಾಗಿದ್ದರಿಂದಾಗಿ ನಾವು ದೇವಾಲಯದಲ್ಲಿ ನಂಬಿಕೆಯ ಗೋಡೆಯನ್ನು ಉಳಿಸಿಕೊಂಡಿದ್ದೇವೆ' ಎಂದು ದೇವಸ್ಥಾನದ ಮತ್ತೊಬ್ಬ ಅರ್ಚಕ ಕಿಶನ್ ಬಿಹಾರಿ ತಿಳಿಸಿದರು.

              'ನಾನಿನ್ನೂ ಇಲ್ಲಿನ ನಂಬಿಕೆಯ ಗೋಡೆಯ ಮೇಲೆ ನನ್ನ ಆಸೆಯನ್ನು ಬರೆದಿಲ್ಲ. ನನ್ನ ಅಭ್ಯಾಸದಲ್ಲಿ ನನಗೆ ವಿಶ್ವಾಸವಿದೆ. ಆದರೆ, ತರಬೇತಿಯ ಅವಧಿಯಲ್ಲಿ ನಾನು ಒತ್ತಡಕ್ಕೆ ಒಳಗಾದಾಗ ನಾನು ಈ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸುತ್ತೇನೆ. ಧ್ಯಾನ ಮಾಡುತ್ತೇನೆ' ಎನ್ನುತ್ತಾರೆ ಮಧ್ಯಪ್ರದೇಶದ ನೀಟ್ ಆಕಾಂಕ್ಷಿ ಪ್ರಗತಿ ಸಾಹು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries