HEALTH TIPS

Year Ender 2022 | ಮಹಿಳೆಯರ ಘನತೆ ಹೆಚ್ಚಿಸಿದ 'ಸುಪ್ರೀಂ'ನ 5 ತೀರ್ಪುಗಳಿವು

 

             ವದೆಹಲಿ:2022, ಭಾರತಕ್ಕೆ ಹಲವು ಸಿಹಿ ಹಾಗೂ ಕಹಿಗಳನ್ನು ನೀಡಿದ ವರ್ಷ. ನಿರುದ್ಯೋಗ, ಹಣದುಬ್ಬರ ಜನರನ್ನು ಹೆಚ್ಚಾಗಿ ಕಾಡಿದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದ ವರ್ಷವೂ ಹೌದು. ಏತನ್ಮಧ್ಯೆ ಈ ವರ್ಷ ಭಾರತೀಯ ಮಹಿಳೆಯರ ಪಾಲಿಗೆ ವಿಶೇಷ ಎಂದರೆ ಉತ್ಪ್ರೇಕ್ಷೆಯಾಗಲಾರದು.

                 ಈ ಬಾರಿ ಮಹಿಳೆಯರ ಪರ, ಅವರ ಸ್ವಾತಂತ್ರ್ಯದ ಪರ ಹಲವು ತೀರ್ಪುಗಳನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಅಂಥ ತೀರ್ಪುಗಳ ಪೈಕಿ ಪ್ರಮುಖ ಐದು ಇಲ್ಲಿವೆ.

1. ವೈವಾಹಿಕ ಅತ್ಯಾಚಾರ ತೀರ್ಪು

ಪತ್ನಿಯ ಅನುಮತಿ ಇಲ್ಲದೆ ಬಲವಂತದ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮ ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿತು. ಸೆ. 29 ರಂದು ಹೊರಬಂದ ಈ ತೀರ್ಪು, ಮಹಿಳಾ ಸ್ವಾತಂತ್ರ್ಯ, ಮಹಿಳೆಯರ ಆಯ್ಕೆ ಹಾಗೂ ಅವರ ಘನತೆಯನ್ನು ಮತ್ತಷ್ಟು ಎತ್ತಿ ಹಿಡಿಯಿತು.

ಪತ್ನಿಯ ಮೇಲೆ ಪತಿ ನಡೆಸುವ ಲೈಂಗಿಕ ದೌರ್ಜನ್ಯ ಅತ್ಯಾಚಾರಕ್ಕೆ ಸಮ ಎಂದು ಹೇಳಿದ್ದ ಸುಪ್ರಿಂ ಕೋರ್ಟ್‌, ವಿವಾಹಿತ ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಲು ಅನುಮತಿ ನೀಡಿತು. ಅಲ್ಲದೇ ವೈದ್ಯಕೀಯ ಗರ್ಭಪಾತ ಕಾನೂನಿನಡಿ, ವೈವಾಹಿಕ ಅತ್ಯಾಚಾರವೂ ಒಳಗೊಳ್ಳುತ್ತದೆ ಎಂದು ಹೇಳಿತ್ತು.

2. ಸುರಕ್ಷಿತ ಹಾಗೂ ಕಾನೂನಾತ್ಮಕ ಗರ್ಭಪಾತ ಪ್ರತೀ ಮಹಿಳೆಯ ಹಕ್ಕು

ಗರ್ಭ ಧರಿಸಿದ 20-24 ವಾರಗಳ ಒಳಗೆ ಗರ್ಭಪಾತ ಮಾಡಿಕೊಳ್ಳುವ ಹಕ್ಕು ಮಹಿಳೆಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಸುರಕ್ಷಿತ ಹಾಗೂ ಕಾನೂನಾತ್ಮಕ ಗರ್ಭಪಾತ ಪ್ರತೀ ಮಹಿಳೆಯ ಹಕ್ಕು ಎಂದ ಸುಪ್ರೀಂ ಕೋರ್ಟ್‌, ಗರ್ಭಪಾತ ಮಾಡಿಕೊಳ್ಳಲು ವಿವಾಹಿತೆ, ಅವಿವಾಹಿತೆ ಎನ್ನುವ ಭೇದವಿಲ್ಲ ಎಂದು ಹೇಳಿತ್ತು.

ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌, ಎ.ಎಸ್‌ ಬೋ‍‍ಪಣ್ಣ ಹಾಗೂ ಜೆ.ಬಿ ಪರ್ಡಿವಾಲ ಅವರಿದ್ದ ತ್ರಿಸದಸ್ಯ ಪೀಠ ಸೆಪ್ಟೆಂಬರ್‌ 29ರಂದು ತೀರ್ಪು ನೀಡಿತ್ತು. ಜತೆಗೆ ಅವಿವಾಹಿತೆ, ವಿವಾಹಿತೆ ಎಂದು ವಿಭಜಿಸುವುದು ಮಹಿಳೆಯರ ಸಮಾನತೆಯ ಹಕ್ಕಿಗೆ ವಿರುದ್ಧವಾದದ್ದು ಎಂದು ಹೇಳಿತ್ತು.

25 ವರ್ಷದ ಅವಿವಾಹಿತ ಮಹಿಳೆಯೊಬ್ಬರು 23 ವಾರ 5 ದಿನದ ಬಳಿಕ ಗರ್ಭಪಾತ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ತಿರಸ್ಕೃತವಾಗಿತ್ತು. ಬಳಿಕ ಸುಪ್ರೀಂ ಕೋರ್ಟ್‌ ಅವರಿಗೆ ಗರ್ಭಪಾತ ಮಾಡಲು ಅನುಮತಿಸಿತ್ತು. ಗರ್ಭಿಣಿಯಾದ ಬಳಿಕ ಮಹಿಳೆಯ ಜತೆಗಾರ ಕೊನೆ ಕ್ಷಣದಲ್ಲಿ ಮದುವೆಯಾಗಲು ನಿರಾಕರಿಸಿದ್ದ.

3. ಮಗುವಿನ ಉಪನಾಮ (Surname) ನಿರ್ಧರಿಸಲು ತಾಯಿಗೆ ಅವಕಾಶ

ತಾಯಿಯು ಮಗುವಿನ ಸ್ವಾಭಾವಿಕ ರಕ್ಷಕಿಯಾಗಿರುವುದರಿಂದ, ಮಗುವಿನ ಉಪನಾಮ ನಿರ್ಧರಿಸುವ ಹಕ್ಕು ತಾಯಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ನೀಡಿದ ತೀರ್ಪು, ಮಹಿಳಾ ಸ್ವಾತಂತ್ರ್ಯವನ್ನು ಮತ್ತಷ್ಟು ಎತ್ತಿ ಹಿಡಿಯಿತು. ಒಂದು ವೇಳೆ ತನ್ನ ಮೊದಲ ಗಂಡ ಮೃತಪಟ್ಟರೂ, ಹೊಸ ಕುಟುಂಬದಲ್ಲಿ ತನ್ನ ಮಗುವನ್ನು ಸೇರ್ಪಡೆಗೊಳಿಸುವುದು ಹಾಗೂ ಉಪನಾಮ ನಿರ್ಧರಿಸುವ ಹಕ್ಕು ತಾಯಿಗೆ ಇದೆ ಎಂದು ತೀರ್ಪು ನೀಡಿತ್ತು.

ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ಕೃಷ್ಣ ಮುರಳಿ ಅವರಿದ್ದ ಪೀಠ ಈ ತೀರ್ಪು ನೀಡಿತ್ತು. ತನ್ನ ಮಗುವನ್ನು ದತ್ತು ಕೊಡಲು ಕೂಡ ತಾಯಿಗೆ ಹಕ್ಕು ಇದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಮಗುವಿನ ಹಕ್ಕಿನ ವಿಚಾರದಲ್ಲಿ ತಂದೆಯಷ್ಟೇ ತಾಯಿಗೂ ಸಮಾನ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

4. ಟು ಫಿಂಗರ್‌ ಟೆಸ್ಟ್‌ ನಿಷೇಧ

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಖಾಸಗಿ ಅಂಗಕ್ಕೆ ಎರಡು ಬೆರಳು ಹಾಕಿ, ಕನ್ಯತ್ವ ಪರೀಕ್ಷೆ ಮಾಡಲಾಗುತ್ತಿದ್ದ, 'ಟು ಫಿಂಗರ್ ಟೆಸ್ಟ್‌' ಅನ್ನು ಅಕ್ಟೋಬರ್‌ 31 ರಂದು ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು. ಅಲ್ಲದೇ ಇನ್ನು ಮುಂದೆ ಇದು ಶಿಕ್ಷಾರ್ಹ ಅಪರಾಧ ಎಂದು ತೀರ್ಪಿತ್ತಿತ್ತು.

'ಈ ಪರೀಕ್ಷೆ ವಿಧಾನವನ್ನು ಈಗಲೂ ಪಾಲಿಸಿಕೊಂಡು ಬರುತ್ತಿರುವುದು ದುರದೃಷ್ಟಕರ' ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಬೇಸರ ವ್ಯಕ್ತಪಡಿಸಿತ್ತು. 'ಎರಡು ಬೆರಳುಗಳ ಪರೀಕ್ಷೆಯನ್ನು ಇನ್ನು ಮುಂದೆ ನಡೆಸಕೂಡದು. ಈ ಪರೀಕ್ಷೆಯಿಂದ ಮಹಿಳೆಯರ ಘನತೆಗೆ ಚ್ಯುತಿ ಉಂಟಾಗುತ್ತದೆ. ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ' ಎಂದು ನ್ಯಾಯಪೀಠ ಹೇಳಿತ್ತು.

ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಜಾರ್ಖಂಡ್‌ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಜಾರ್ಖಂಡ್‌ ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿತು. ಆರೋಪಿ ತಪ್ಪಿತಸ್ಥ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿತ್ತು.

5. ಮನೆ ನಿರ್ಮಾಣಕ್ಕೆ ಹಣ ಕೇಳುವುದು ವರದಕ್ಷಿಣೆಗೆ ಸಮ

ಗೃಹ ನಿರ್ಮಾಣಕ್ಕೆ ಪತ್ನಿಯ ಪೋಷಕರಿಂದ ಹಣ ಅಥವಾ ಸಾಲ ಕೇಳುವುದು ವರದಕ್ಷಿಣೆಗೆ ಸಮ ಎಂದು ಸುಪ್ರೀಂ ಕೋರ್ಟ್‌ ಜನವರಿ 12ರಂದು ತೀರ್ಪು ನೀಡಿತ್ತು. ವರದಕ್ಷಿಣೆ ಕಿರುಕುಳ ಸಂಬಂಧ ಸಾವಿಗೀಡಾದ ಮಹಿಳೆಯೊಬ್ಬರ ಬಗ್ಗೆ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿತ್ತು.

              ನ್ಯಾಯಮೂರ್ತಿ ಹಿಮಾ ಕೊಹ್ಲಿ ಹಾಗೂ ಎ.ಎಸ್‌ ಬೋಪಣ್ಣ ಅವರಿದ್ದ ಪೀಠ ಈ ತೀರ್ಪು ನೀಡಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries