HEALTH TIPS

ವಾಕ್ ಸ್ವಾತಂತ್ರ್ಯಕ್ಕೆ ಇನ್ನಷ್ಟು ನಿರ್ಬಂಧ ಸೇರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

                   ವದೆಹಲಿ:ಸಂವಿಧಾನದ 19(2) ವಿಧಿಯಡಿಯಲ್ಲಿ ಈಗಾಗಲೇ ನಮೂದಿಸಲಾಗಿರುವ ನಿರ್ಬಂಧಗಳನ್ನು ಹೊರತುಪಡಿಸಿ, ವಾಕ್ ಸ್ವಾತಂತ್ರ್ಯಕ್ಕೆ ಇನ್ನಷ್ಟು ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

                     ಜನಪ್ರತಿನಿಧಿಯ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳಿಗೆ ನಿರ್ಬಂಧಗಳನ್ನು ವಿಧಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ, ವಿ. ರಾಮಸುಬ್ರಮಣಿಯನ್, ಎಸ್.ಎ. ನಝೀರ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಐವರು ಸದಸ್ಯರ ಸಂವಿಧಾನ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

     2016ರ ಜುಲೈಯಲ್ಲಿ ಉತ್ತರಪ್ರದೇಶದ ಬುಲಾಂದ್ಶಹರ್ ನಗರದಲ್ಲಿ ವ್ಯಕ್ತಿಯೊಬ್ಬರ ಪತ್ನಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ವ್ಯಕ್ತಿ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ಪ್ರಶ್ನೆ ತಲೆದೋರಿತ್ತು. ಈ ಪ್ರಕರಣವನ್ನು ದಿಲ್ಲಿಗೆ ವರ್ಗಾಯಿಸಬೇಕು ಹಾಗೂ ಆ ಸಮಯದಲ್ಲಿ ಸಚಿವರಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಝಮ್ ಖಾನ್ ವಿರುದ್ಧ ಮೊದಲ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೋರಲಾಗಿತ್ತು.

                     ಅತ್ಯಾಚಾರವು ''ರಾಜಕೀಯ ಪಿತೂರಿ''ಯಾಗಿದೆ ಎಂಬುದಾಗಿ ಖಾನ್ ಹೇಳಿದ್ದರು. ಉತ್ತರಪ್ರದೇಶದ ನ್ಯಾಯಾಲಯವೊಂದು ಈ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡಿತ್ತು. ಜನ ಪ್ರತಿನಿಧಿಯೊಬ್ಬರು ತನ್ನ ವಾಕ್ ಸ್ವಾತಂತ್ರ್ಯವನ್ನು ಬಳಸಿ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿ ಹೇಳಿಕೆ ನೀಡಬಹುದೇ ಎನ್ನುವುದನ್ನು ತೀರ್ಮಾನಿಸುವಂತೆ ಕೋರಿ ಈ ವಿಷಯವನ್ನು ಸಂವಿಧಾನ ಪೀಠಕ್ಕೆ ಕಳುಹಿಸಲಾಗಿತ್ತು.

                   ಮಂಗಳವಾರ, ಸುಪ್ರೀಂ ಕೋರ್ಟ್ ಎರಡು ಭಿನ್ನ ತೀರ್ಪುಗಳನ್ನು ನೀಡಿತು. ನ್ಯಾಯಮೂರ್ತಿ ನಾಗರತ್ನ ಭಿನ್ನಮತದ ತೀರ್ಪು ನೀಡಿದರು. ಆದರೂ, ಸಂವಿಧಾನದ 19(2) ವಿಧಿಯಡಿಯಲ್ಲಿ ಈಗಾಗಲೇ ಇರುವ ನಿರ್ಬಂಧಗಳಿಗೆ ಹೆಚ್ಚುವರಿಯಾಗಿ ಯಾವುದೇ ನಿರ್ಬಂಧಗಳನ್ನು ವಿಧಿಸುವಂತಿಲ್ಲ ಎಂಬ ಬಹುಮತದ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.

                    ಓರ್ವ ಸಚಿವರ ಹೇಳಿಕೆಯು, ಜನಪ್ರತಿನಿಧಿಯೊಬ್ಬರು ಮಾಡಬೇಕಾದ ಕೆಲಸವನ್ನು ಮಾಡದಿರುವ ಮತ್ತು ಮಾಡಬಾರದ ಕೆಲಸವನ್ನು ಮಾಡಿದ ತಪ್ಪಿಗೆ ಸಮವಾದರೆ, ಆಗ ಆ ರಾಜಕಾರಣಿಯ ಕೃತ್ಯವನ್ನು ಅವರ ಸಾಂವಿಧಾನಿಕ ಜವಾಬ್ದಾರಿಯ ವೈಫಲ್ಯ ಎಂಬುದಾಗಿ ಪರಿಗಣಿಸಲಾಗುತ್ತದೆ ಎಂದು ಮಂಗಳವಾರ ಬಹುಮತದ ತೀರ್ಪು ನೀಡಿದ ನ್ಯಾ. ರಾಮಸುಬ್ರಮಣಿಯನ್ ಹೇಳಿದರು.

                    ಆದರೂ, ನಾಗರಿಕರ ಹಕ್ಕುಗಳ ಬಗ್ಗೆ ಸಚಿವರೊಬ್ಬರು ನೀಡುವ ಬರಿಯ ಹೇಳಿಕೆಯನ್ನು ಅವರ ಸಾಂವಿಧಾನಿಕ ಜವಾಬ್ದಾರಿಯ ವೈಫಲ್ಯ ಎಂಬುದಾಗಿ ಕರೆಯಲು ಸಾಧ್ಯವಾಗದು ಎಂದು ಅವರು ಹೇಳಿದರು.

                ಭಿನ್ನಮತದ ತೀರ್ಪು ನೀಡಿದ ನ್ಯಾ. ನಾಗರತ್ನ, ಸಚಿವರೊಬ್ಬರು ಸಚಿವನ ನೆಲೆಯಲ್ಲಿ ಅಗೌರವಯುತ ಹೇಳಿಕೆಯನ್ನು ನೀಡಿದರೆ ಅದನ್ನು ಸರಕಾರದ ಹೇಳಿಕೆ ಎಂಬುದಾಗಿ ಪರಿಗಣಿಸಬಹುದು ಎಂದು ಹೇಳಿದರು. ಆದರೆ, ಸಚಿವರು ವೈಯಕ್ತಿಕ ನೆಲೆಯಲ್ಲಿ ಹೇಳಿಕೆ ನೀಡಿದರೆ ಅದಕ್ಕೆ ಸರಕಾರ ಜವಾಬ್ದಾರವಲ್ಲ ಎಂದು ಅವರು ಅಭಿಪ್ರಾಯಪಟ್ಟರು.


ಒಂದೇ ದಿನ ಯೆರವಡಾ ಜೈಲಿನ ಮೂವರು ಕೈದಿಗಳ ಸಾವು,ಕುಟುಂಬಗಳಿಂದ ಪ್ರತಿಭಟನೆ

ಪುಣೆ,ಜ.3: ಇಲ್ಲಿಯ ಯೆರವಡಾ ಸೆಂಟ್ರಲ್ ಜೈಲಿನಲ್ಲಿಯ ಮೂವರು ವಿಚಾರಣಾಧೀನ ಕೈದಿಗಳು ಡಿ.31ರಂದು ಸ್ಥಳೀಯ ಸಸೂನ್ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು,ಅವರ ಕುಟುಂಬ ಸದಸ್ಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಮೂವರು ಕೈದಿಗಳು ಪ್ರತ್ಯೇಕ ಕಾಯಿಲೆಗಳಿಂದಾಗಿ ಸಸೂನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ ಓರ್ವ ಎಚ್‌ಐವಿ ಪಾಸಿಟಿವ್ ಆಗಿದ್ದರೆ ಇನ್ನೋರ್ವ ಯಕೃತ್ತು ರೋಗದಿಂದ ಬಳಲುತ್ತಿದ್ದ. ಮೂರನೇ ಕೈದಿಗೆ ಹೃದಯ ಸಂಬಂಧಿತ ಸಮಸ್ಯೆಯಿತ್ತು ಎಂದು ತಿಳಿಸಿದ ಪೊಲೀಸ್ ಅಧಿಕಾರಿ ಅಶೋಕ ಕಾಟೆ,ಈ ಬಗ್ಗೆ ಆಕಸ್ಮಿಕ ಸಾವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

ಆದರೆ ಈ ಹೇಳಿಕೆಯನ್ನು ತಿರಸ್ಕರಿಸಿರುವ ಮೃತರ ಕುಟುಂಬಗಳು, ಅವರ ಸಾವುಗಳಿಗೆ ಕಾರಣಗಳ ಕುರಿತು ವಿವರವಾದ ವಿಚಾರಣೆಗೆ ಆಗ್ರಹಿಸಿದ್ದಾರೆ.

ಸೋಮವಾರ ಮೃತ ಮೂವರು ವಿಚಾರಣಾಧೀನ ಕೈದಿಗಳ ಕುಟುಂಬ ಸದಸ್ಯರು ಜೈಲು ಆವರಣದ ಹೊರಗೆ ಪ್ರತಿಭಟನೆ ನಡೆಸಿದ್ದರು. ಜೈಲಿನಲ್ಲಿಯ ತಮ್ಮವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದ ಬಗ್ಗೆ ತಮಗೆ ಮಾಹಿತಿಯನ್ನು ನೀಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕೈದಿಗಳ ಪೈಕಿ ರಂಗನಾಥ ದಾತಾಲ್ ಎಂಬಾತನನ್ನು ಡಿ.28ರಂದು ಹಾಗೂ ಸಂದೇಶ ಗೊಂದೇಕರ್ ಮತ್ತು ಶಾರುಖ್ ಶೇಖ್ ಅವರನ್ನು ಡಿ.31ರಂದು ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಎಲ್ಲ ಮೂವರೂ ಅದೇ ದಿನ ಮೃತಪಟ್ಟಿದ್ದರು.

ಯೆರವಡಾ ಜಗತ್ತಿನ ಬೃಹತ್ ಜೈಲುಗಳಲ್ಲೊಂದಾಗಿದ್ದು ಎಲ್ಗಾರ್ ಪರಿಷದ್ ಪ್ರಕರಣದ ಹಲವು ವಿಚಾರಣಾಧೀನ ಕೈದಿಗಳನ್ನೂ ಇಲ್ಲಿರಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries