ಕಾಸರಗೋಡು: ನಗರದ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರೈಲ್ವೆ ನಿಲ್ದಾಣದ ಪಾರ್ಸೆಲ್ ಕಚೇರಿಯ ಮುಖ್ಯ ಕಾರ್ಮಿಕ ಹಾಗೂ ಪೆರಿಯ ರಾಜಪುರದ ಚೆರುಕ್ಕಪ್ಪಾರ ನಿವಾಸಿ ಕೆ. ಇಸ್ಮಾಯಿಲ್ (47) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ನಿಲ್ದಾಣದ ಡೋರ್‌ಮೆಟ್ರಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿ ನೀಡಿದ ದೂರಿನ ಆಧಾರದಲ್ಲಿ ಈ ಬಂಧನ ನಡೆದಿದೆ.
ಯುವತಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿದ ಇಸ್ಮಾಯಿಲ್, ಆಕೆಯನ್ನು ಸಮೀಪದ ಹಾಸಿಗೆಯತ್ತ ತಳ್ಳಿದ್ದಲ್ಲದೆ, ದೇಹ ಸ್ಪರ್ಶಿಸಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಯಿಂದ ತಪ್ಪಿಸಿಕೊಂಡ ಯುವತಿ, ಈ ವಿಷಯವನ್ನು ಇತರ ಸಿಬ್ಬಂದಿಗೆ ತಿಳಿಸಿ ಬಳಿಕ ರೈಲ್ವೆ ನಿಲ್ದಾಣದ ಪೊಲೀಸರಿಗೆ ದೂರು ನೀಡಿದ್ದಾರೆ.
ಎಸ್‌ಐ ಬಿ.ಕೆ. ರಾಜೀವ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ. ಬಳಿಕ ಆರೋಪಿಯನ್ನು ಕಾಞಂಗಾಡ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
(ಸಾಂದರ್ಭಿಕ ಚಿತ್ರ)

