ದುಬೈ: 'ಇಸ್ರೇಲ್ ಸೇನೆಯು ಲೆಬನಾನ್‌ನಿಂದ ಹಿಂದೆ ಸರಿಯಬೇಕು ಎಂಬ ಅಂಶವೂ ಅಮೆರಿಕದ ಜತೆಗಿನ ಶಾಂತಿ ಒಪ್ಪಂದದ ಭಾಗವಾಗಿರಲಿದೆ' ಎಂದು ಇರಾನ್ ಮಂಗಳವಾರ ಹೇಳಿದೆ.
ಆದರೆ, ಲೆಬನಾನ್‌ನಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿರುವುದು ಶಾಂತಿ ಒಪ್ಪಂದದ ಅಂಶಗಳ ಕುರಿತು ಪ್ರಶ್ನೆಗಳು ಏಳುವಂತೆ ಮಾಡಿದೆ.
ಇರಾನ್ ವಿರುದ್ಧದ ಯುದ್ಧ ಕೊನೆಗೊಳಿಸುವ ಶಾಂತಿ ಒಪ್ಪಂದದ ಅಂಶಗಳನ್ನು ಅಂತಿಮಗೊಳಿಸಲಾಗಿದ್ದು, ಜೂನ್ 19ರಂದು ಸಹಿ ಹಾಕಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದರು.
'ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸುವುದು ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸುತ್ತದೆ. ಲೆಬನಾನ್‌ನಲ್ಲಿ ಯುದ್ಧ ಅಂತ್ಯಗೊಳ್ಳುವುದು ಕೂಡಾ ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಭಾಗವಾಗಿದೆ' ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಟೆಹರಾನ್‌ನಲ್ಲಿ ವಿದೇಶಿ ರಾಜತಾಂತ್ರಿಕರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಈಗಿನ ಯುದ್ದದ ಸಂದರ್ಭದಲ್ಲಿ ಲೆಬನಾನ್‌ನಲ್ಲಿ ಅಕ್ರಮಿಸಿಕೊಂಡಿರುವ ಪ್ರದೇಶಗಳಿಂದ ಇಸ್ರೇಲ್ ಸೇನೆ ಸಂಪೂರ್ಣವಾಗಿ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಯುದ್ಧ ಕೊನೆಗೊಂಡಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ' ಎಂದಿದ್ದಾರೆ.
ಇಸ್ರೇಲ್ ಪಡೆಗಳು ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕೆಂಬ ಅಂಶವು ಶಾಂತಿ ಒಪ್ಪಂದದ ಭಾಗವಾಗಿದೆಯೇ ಎಂಬ ಬಗ್ಗೆ ಅಮೆರಿಕ ಇದುವರೆಗೆ ಏನನ್ನೂ ಹೇಳಿಲ್ಲ. 'ನಾವು ಅಮೆರಿಕ-ಇರಾನ್ ನಡುವಿನ ಒಪ್ಪಂದದ ಭಾಗವಾಗಿಲ್ಲ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಹೇಳಿದ್ದರು.

