ಕಾಸರಗೋಡು: ಶಾಲಾ ಮೈದಾನ ಜಲಾವೃತವಾಗುತ್ತಿರುವುದರಿಂದ ತಮ್ಮ ಕ್ರೀಡಾಚಟುಟಿಕೆಗಳಿಗೆ ಅಡಚಣೆಯುಂಟಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಅಳಲತ್ತುಕೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿ ತಕ್ಷಣ ಸ್ಪಂದಿಸಿ, ಮೈದಾನ ಸ್ಥಿತಿಗತಿ ಅಧ್ಯಯನ ನಡೆಸಿ ಸಮಸ್ಯೆ ಪರಿಹರಿಸುವಂತೆ ಕ್ರೀಡಾಮಂಡಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಯ ತಕ್ಷಣದ ಸ್ಪಂದನೆಯಿಂದ ವಿದ್ಯಾರ್ಥಿಗಳ ಮೊಗದಲ್ಲಿಮಂದಹಾಸ ಮೂಡುವಂತಾಯಿತು.
ಇದು ಕಾಸರಗೋಡುಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಉದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದದಲ್ಲಿಕೇಳಿ ಬಂದ ಆಗ್ರಹವಾಗಿತ್ತು.
'ನಮಸ್ತೆ ಕಲೆಕ್ಟರ್' ಕಾರ್ಯಕ್ರಮದನ್ವಯ ಉದಿನೂರು ಜಿಎಚ್‍ಎಸ್‍ಎಸ್‍ನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ಒಟ್ಟು ಸೇರಿ ಜಿಲ್ಲಾಧಿಕಾರಿಯೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅಹವಾಲು ಮುಂದಿಟ್ಟರು.
ಶಾಲಾ ಮೈದಾನದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಿ, ಮೈದಾನ ನವೀಕರಿಸುವುದು ಮತ್ತು ಅದನ್ನು ಶೀಘ್ರ ಕಾರ್ಯರೂಪಕ್ಕೆ ತರುವನಿಟ್ಟಿನಲ್ಲಿ ಸ್ಪೋಟ್ರ್ಸ್ ಫೌಂಡೇಶನ್ ಕೇರಳಕ್ಕೆ ಜವಾಬ್ದಾರಿ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಉದಿನೂರ್ ಜಿಎಚ್‍ಎಸ್‍ಎಸ್‍ನಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನಿರಿಸಲು ಶೆಡ್ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಮೈದಾನದ ಸನಿಹದಲ್ಲಿರುವ ಪಂಚಾಯಿತಿ ಭೂಮಿಯನ್ನು ಹಂಚಿಕೆ ಮಾಡಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಸೈಕಲ್ ಶೆಡ್ ನಿರ್ಮಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು. ಅಪೂರ್ಣ ಶಾಲಾ ಕಟ್ಟಡದ ಪ್ರಸ್ತುತ ಪರಿಸ್ಥಿತಿಯನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳಲು ಶಿಕ್ಷಣ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಮಸ್ತೆ ಕಲೆಕ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮ್ಮ ಪ್ರಬುದ್ಧ ಪ್ರಶ್ನೆಗಳ ಮೂಲಕ ಜಿಲ್ಲಾಧಿಕಾರಿ ಗಮನಸೆಳೆದಿದ್ದರು. ಪರಿಸರದ ಸಮತೋಲನವನ್ನು ಕಾಯ್ದುಕೊಂಡು ಅಭಿವೃದ್ಧಿಕಾರ್ಯ ನಡೆಸುವ ವಿಧಾನ, ಯುವ ಪೀಳಿಗೆಯನ್ನು ವ್ಯಸನದಿಂದ ಮುಕ್ತಗೊಳಿಸಲು ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಕ್ರಮ, ಎಂಡೋಸಲ್ಫಾನ್ ಸಮಸ್ಯೆ ಇರುವ ಕಾಸರಗೋಡಿನಲ್ಲಿ ರಾಸಾಯನಿಕ ಕೀಟನಾಶಕಗಳ ನಿಯಂತ್ರಣವನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ ಮುಂತಾದ ಪ್ರಶ್ನೆಗಳನ್ನು ಮಕ್ಕಳು ಕೇಳಿ, ಜಿಲ್ಲಾಧಿಕಾರಿಯಿಂದ ಉತ್ತರ ಗಿಟ್ಟಿಸಿಕೊಂಡರು.
ಉದಿನೂರು ಜಿಎಚ್‍ಎಸ್‍ಎಸ್‍ನ 8ರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು 'ನಮಸ್ತೆ ಕಲೆಕ್ಟರ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿದ್ಯಾರ್ಥಿಗಳು ಮತ್ತು ಜಿಲ್ಲಾಡಳಿತದ ನಡುವಿನ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ'ನಮಸ್ತೆ ಕಲೆಕ್ಟರ್' ಅಭಿಯಾನ ಆರಂಭಿಸಿದೆ.



