ಮಂಜೇಶ್ವರ: ತಲಪಾಡಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಹಲವರಿಗೆ ಗಾಯಗಳುಂಟಾಘಿದ್ದು, ಗಂಭೀರ ಗಾಯಗೊಂಡ ಆಟೋ ರಿಕ್ಷಾ ಚಾಲಕ ಕನ್ನಾವು ನಿವಾಸಿ ಅಬ್ಬುಲ್ ಅಜೀಜ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಘಿದೆ.
ಆಟೋರಿಕ್ಷಾ, ಕಾರು ಹಾಗೂ ದ್ವಿಚಕ್ರ ವಾಹನ ಸವಾರರೂ ಗಾಯಗೊಂಡಿದ್ದಾರೆ. ಕಾಸರಗೋಡು ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿಯೊಂದು ಆಟೋ ರಿಕ್ಷಾಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಬಲಕ್ಕೆ ತಿರುಗಿಸಿದಾಗ ಎದುರಿಂದ ಬರುತ್ತಿದ್ದ ಮತ್ತೊಂದು ಲಾರಿ ಹಾಗೂ ಮೂರು ಕಾರು, ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಸರಣಿ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆ ವಿಭಾಜಕಕ್ಕಾಗಿ ಇರಿಸಿದ್ದ ಕಾಂಕ್ರೀಟ್ ಡಿವೈಡರ್ ಬಿದ್ದು, ಕಾರಿಗೆ ಹಾನಿಯುಂಟಾಗಿದೆ.
ಆಟೋ ರಿಕ್ಷಾ ಪ್ರಯಾಣಿಕರಾದ ಹನೀಫ್ ಮತ್ತು ವೆಂಕಪ್ಪ ಹಾಗೂ ಇತರ ವಾಹನಗಳಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಜ್ಜುಗುಜ್ಜಾದ ವಾಹನಗಳನ್ನು ಕ್ರೇನಿನ ಸಹಾಯದಿಂದ ತೆರವುಗೊಳಿಸಲಾಯಿತು. ಅಪಘಾತಕ್ಕೆ ಕಾರಣವಾಗಿರುವ ಕಂಟೈನರ್ ಲಾರಿ ಚಾಲಕ, ಬೆಂಗಳೂರು ನಿವಾಸಿ ವಡಿವೇಳು ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪಘಾತದಿಂದ ತಾಸುಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಆರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ನಿಯಂತ್ರಣ ತಪ್ಪಿದ ಕೆಎಸ್ಸಾರ್ಟಿಸಿ ಬಸ್ ಡಿವೈಡರ್‍ಗೆ ಡಿಕ್ಕಿಯಾಗಿ ಉಂಟಾಗಿದ್ದ ಸರಣಿ ಅಪಘಾತದಲ್ಲಿ ಇವರು ಮೃತಪಟ್ಟಿದ್ದರು. ಈ ಪ್ರದೇಶದಲ್ಲಿ ವಾಹನಗಳು ಅತಿಯದ ವೇಗದಲ್ಲಿ ಸಂಚರಿಸುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿರುವುದಾಗಿ ಸ್ಥಳೀಯರು ದೂರುತ್ತಾರೆ.

