HEALTH TIPS

ರಾಮಮಂದಿರ|ಹೊಸ ಹುದ್ದೆಗೆ ಅರ್ಜಿ ಆಹ್ವಾನಿಸಿದ ಟ್ರಸ್ಟ್: ವೈಷ್ಣವ ಪಂಥದವರಿಗೆ ಅವಕಾಶ

 ಲಖನೌ: ರಾಮಮಂದಿರಕ್ಕೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ (ಸಿಇಒ) ನೇಮಕ ಪ್ರಕ್ರಿಯೆಯನ್ನು ಆರಂಭಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌, ಹೊಸ ಹುದ್ದೆಗೆ ಸೋಮವಾರ ಅರ್ಜಿಗಳನ್ನು ಆಹ್ವಾನಿಸಿದೆ. 


ಟ್ರಸ್ಟ್‌ ಹೊರಡಿಸಿರುವ ಅಧಿಸೂಚನೆಯಲ್ಲಿ, ಸಿಇಒಗೆ ನೀಡಲಾಗುವ ವೇತನದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

ಆದರೆ, ಹುದ್ದೆಗೆ ಕೆಲವೊಂದು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. 'ಜುಲೈ 18ರ ಸಂಜೆ 4ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು' ಎಂದಿದೆ.

'ಹಿಂದೂ ಧರ್ಮವನ್ನು ಆಚರಿಸುವವರು ಮತ್ತು ವೈಷ್ಣವ ಪಂಥಕ್ಕೆ ಸೇರಿದವರಾಗಿರುವುದು ಈ ಹುದ್ದೆಗೆ ಅಪೇಕ್ಷಣೀಯ ಅರ್ಹತೆಯಾಗಿದೆ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಿಇಒ ಅವರ ಆರಂಭಿಕ ಒಪ್ಪಂದವು ಮೂರು ವರ್ಷಗಳ ಅವಧಿಯದ್ದಾಗಿರುತ್ತದೆ. ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಒಪ್ಪಂದವನ್ನು ನವೀಕರಿಸಬಹುದು. ಅಯೋಧ್ಯೆಯು ಕರ್ತವ್ಯ ಸ್ಥಳವಾಗಿರಲಿದ್ದು, ವೇತನವನ್ನು ಪರಸ್ಪರ ಮಾತುಕತೆಯ ಮೂಲಕ ನಿರ್ಧರಿಸಲಾಗುತ್ತದೆ. ಎಲ್ಲ ಅರ್ಹತಾ ಮಾನದಂಡಗಳನ್ನು ಪೂರೈಸುವ, ನಿವೃತ್ತ ಜೀವನ ನಡೆಸುತ್ತಿರುವ ವ್ಯಕ್ತಿಗಳೂ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಹೊಸ ಸಿಇಒ ನೇಮಕಕ್ಕೆ ಮೂವರು ಸದಸ್ಯರ ಸಮಿತಿಯನ್ನು ಟ್ರಸ್ಟ್‌ ಕಳೆದ ವಾರ ರಚಿಸಿತ್ತು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಎನ್‌ಐಟಿ ರಾಯಪುರದ ಮಾಜಿ ಮುಖ್ಯಸ್ಥ ಸುರೇಶ್ ಹವಾರೆ ಅವರು ಸಮಿತಿಯಲ್ಲಿ ಇದ್ದಾರೆ.

'ಹೊಸದಾಗಿ ನೇಮಕಗೊಳ್ಳಲಿರುವಸಿಇಒ ಅವರ ಅಧಿಕಾರ ವ್ಯಾಪ್ತಿ ಮತ್ತು ಕರ್ತವ್ಯಗಳನ್ನು ನಿರ್ಧರಿಸುವ ಅಧಿಕಾರ ಟ್ರಸ್ಟ್‌ಗೆ ಮಾತ್ರ ಇರುತ್ತದೆ' ಎಂದು ರಾಮಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಭಾನುವಾರ ಹೇಳಿದ್ದರು. 'ಭಕ್ತರು ಟ್ರಸ್ಟ್‌ ಮೇಲೆ ಇಟ್ಟಿರುವ ನಂಬಿಕೆಯನ್ನು ಕಾಪಾಡುವುದೇ ಸಿಇಒ ಅವರ ಪ್ರಮುಖ ಜವಾಬ್ದಾರಿಯಾಗಿರುತ್ತದೆ' ಎಂದಿದ್ದರು.

ಎಫ್‌ಐಆರ್‌: 'ಕೋರ್ಟ್‌ಗೆ ಮೊರೆ'

ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣದಲ್ಲಿ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಮಾಜಿ ಟ್ರಸ್ಟಿಗಳಾದ ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗುವುದಾಗಿ ಫೈಜಾಬಾದ್ ವಕೀಲರ ಸಂಘ ಸೋಮವಾರ ತಿಳಿಸಿದೆ.

ಜುಲೈ 2ರಂದು ರಾಮ ಜನ್ಮಭೂಮಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಸಂಘದ ಸದಸ್ಯರು ಹೇಳಿದ್ದಾರೆ.

'ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಾವು ಪೊಲೀಸರಿಗೆ ಎರಡು ವಾರ ಸಮಯ ನೀಡಿದ್ದೆವು. ಸೋಮವಾರ ನಮ್ಮ ನಿಯೋಗವು ಪೊಲೀಸ್‌ ಠಾಣೆಗೆ ತೆರಳಿ ವಿಚಾರಿಸಿದಾಗ, ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ನಮ್ಮ ನಿಯೋಗವು ಅಯೋಧ್ಯೆಯ ಎಸ್‌ಎಸ್‌ಪಿ ಅವರನ್ನೂ ಭೇಟಿಯಾಯಿತು. ಎಫ್‌ಐಆರ್‌ ದಾಖಲಾಗಿಲ್ಲ ಎಂದು ಅವರು ತಿಳಿಸಿದರು. ಇದೀಗ ನ್ಯಾಯಾಲಯದ ಮೊರೆ ಹೋಗುತ್ತೇವೆ' ಎಂದು ಸಂಘದ ಸದಸ್ಯ ಅಫ್ತಾಬ್ ಖಾನ್ ಹೇಳಿದರು.

ಇತರ ಅರ್ಹತೆಗಳು

- ಅಭ್ಯರ್ಥಿಯು ಪದವೀಧರರಾಗಿರಬೇಕು ಮತ್ತು 50ರಿಂದ 70 ವರ್ಷ ವಯಸ್ಸಿನೊಳಗಿನವರಾಗಿರಬೇಕು

- ದೊಡ್ಡ ಕಂಪನಿಯ ಆಡಳಿತವನ್ನು ಕನಿಷ್ಠ 20 ವರ್ಷ ನಿರ್ವಹಿಸಿದ ಅನುಭವ ಹೊಂದಿರಬೇಕು

- ಹಿಂದೂಗಳ ದೊಡ್ಡ ಸಂಘಟನೆ ಅಥವಾ ದೇವಾಲಯದ ಆಡಳಿತವನ್ನು ನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು 


ಬದರಿನಾಥ ದೇವಾಲಯದಲ್ಲಿ ದೇಣಿಗೆ ಅಕ್ರಮ: ಆರೋಪಿ ಬಂಧನ

ಡೆಹ್ರಾಡೂನ್ (PTI): ಬದರಿನಾಥ ದೇವಸ್ಥಾನದಲ್ಲಿ ದೇಣಿಗೆಗೆ ಕನ್ನ ಹಾಕಿದ್ದ ಆರೋಪದ ಕಾರಣಕ್ಕೆ ಅಮಾನತುಗೊಂಡಿದ್ದ ಸಿಬ್ಬಂದಿ ಪ್ರಮೋದ್ ನೌಟಿಯಾಲ್‌ನನ್ನು ಉತ್ತರಾಖಂಡ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿತ್ತು. ಬದರಿನಾಥ- ಕೇದಾರನಾಥ ದೇವಸ್ಥಾನಗಳ ಸಮಿತಿಯಲ್ಲಿ (ಬಿಕೆಟಿಸಿ) ಆರೋಪಿಯು ಕಾರ್ಯನಿರ್ವಹಿಸುತ್ತಿದ್ದ.

ಬಿಕೆಟಿಸಿಯ ನಾಲ್ವರು ಸದಸ್ಯರು ಆಂತರಿಕ ವಿಚಾರಣೆ ನಡೆಸಿ, ಪ್ರಮೋದ್‌ ನೌಟಿಯಾಲ್ ತಪ್ಪಿತಸ್ಥ ಎಂಬ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ, ಆತನನ್ನು ಅಮಾನತುಗೊಳಿಸಲಾಗಿತ್ತು. ಪ್ರಕರಣದ ಕುರಿತು ತನಿಖೆ ನಡೆಸಲು ಉತ್ತರಾಖಂಡ ಸರ್ಕಾರ ಸಹ ಕಳೆದ ವಾರ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ.

ಬದರಿನಾಥ ದೇವಸ್ಥಾನದಲ್ಲಿ ದೇಣಿಗೆ ಹಣ ಎಣಿಸುವಾಗ ಅಕ್ರಮ ನಡೆದಿರುವುದಕ್ಕೆ ಸಂಬಂಧಿಸಿದವು ಎನ್ನಲಾದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. 'ಭೈರವ ಸೇನೆ' ಎಂಬ ಸಂಸ್ಥೆಯು ಈ ಅವ್ಯವಹಾರದ ಕುರಿತು ಪೊಲೀಸರಿಗೆ ದೂರು ನೀಡಿ, ತನಿಖೆಗೆ ಆಗ್ರಹಿಸಿತ್ತು.

ಪವನ್‌ ಖೇರಾ, ಕಾಂಗ್ರೆಸ್‌ ನಾಯಕಬಿಜೆಪಿ ಮತ್ತು ಆರ್‌ಎಸ್‌ಎಸ್‌, ದೇವಾಲಯಗಳನ್ನು ತಮ್ಮ 'ದೇಣಿಗೆ ಸಂಗ್ರಹ' ಕೇಂದ್ರಗಳನ್ನಾಗಿ ಪರಿವರ್ತಿಸಿವೆ. ಭಕ್ತರ ಹಣವನ್ನು ಬಿಜೆಪಿಯು ಪಕ್ಷದ ಕಚೇರಿ ನಿರ್ಮಾಣಕ್ಕೆ ಬಳಸುತ್ತಿದೆಯೇ? ಕೆ.ಸಿ. ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಮಮಂದಿರ ದೇಣಿಗೆಯ ದುರುಪಯೋಗದ ಬಗ್ಗೆ ಆರ್‌ಎಸ್‌ಎಸ್ ದುಃಖ ವ್ಯಕ್ತಪಡಿಸುವುದು, 'ಕಳ್ಳತನದ ಬಳಿಕ ಕಳ್ಳನು ಪಶ್ಚಾತ್ತಾಪ‍ ಪಡುವುದಕ್ಕೆ' ಸಮನಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries