ಜಿನೀವಾ (PTI): ಹಾಲಿ ಚಾಂಪಿಯನ್ ಡಿ. ಗುಕೇಶ್ ಮತ್ತು ಚಾಲೆಂಜರ್ ಜಾವೊಖಿರ್ ಸಿಂದರೋವ್ ನಡುವಿನ 2026ರ ಫಿಡೆ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಪಂದ್ಯವು ಸಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನ. 25ರಿಂದ ಡಿ. 15ರವರೆಗೆ ನಡೆಯಲಿದೆ.
ಭಾರತದ ಗುಕೇಶ್ ಮತ್ತು ಉಜ್ಬೇಕಿಸ್ತಾನದ ಸಿಂದರೋವ್ ಅವರಿಬ್ಬರಿಗೂ 20 ವರ್ಷವಾಗಿದ್ದು, ಇದು ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಆಟಗಾರರ ನಡುವಿನ ವಿಶ್ವ ಚಾಂಪಿಯನ್‌ಷಿಪ್ ಸ್ಪರ್ಧೆಯಾಗಲಿದೆ.
ಅನುಭವಿ ಚಾಂಪಿಯನ್‌ಗಳ ಪ್ರಭಾವವಿದ್ದ ಯುಗದಿಂದಲೇ ಹೊರಹೊಮ್ಮಿದ ಈ ಇಬ್ಬರು ಯುವ ತಾರೆಯರು ಫಿಡೆಯ ಅತ್ಯುನ್ನತ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಈ ಪಂದ್ಯವು ವಿಶ್ವ ಚೆಸ್‌ನಲ್ಲಿ ಹೊಸ ಬದಲಾವಣೆಯ ಪ್ರತಿಬಿಂಬವಾಗಿದೆ.
'ಭಾರತ, ಅಮೆರಿಕ ಮತ್ತು ಸೈಪ್ರಸ್ ಸೇರಿದಂತೆ ಹಲವು ದೇಶಗಳು ವಿಶ್ವ ಚಾಂಪಿಯನ್‌ಷಿಪ್ ಆತಿಥ್ಯ ವಹಿಸಲು ಅತೀವ ಆಸಕ್ತಿ ವ್ಯಕ್ತಪಡಿಸಿದ್ದವು' ಎಂದು ವಿಶ್ವ ಚೆಸ್ ಫೆಡರೇಷನ್ (ಫಿಡೆ) ಹಂಗಾಮಿ ಅಧ್ಯಕ್ಷ ವಿಶ್ವನಾಥನ್ ಆನಂದ್ ತಿಳಿಸಿದ್ದಾರೆ.
ವಿಶ್ವ ಚಾಂಪಿಯನ್‌ಷಿಪ್ ಪಂದ್ಯದಲ್ಲಿ 14 ಕ್ಲಾಸಿಕಲ್ ಸುತ್ತುಗಳು ನಡೆಯಲಿವೆ. ಮೊದಲು 7.5 ಅಂಕ ಗಳಿಸುವ ಆಟಗಾರ ವಿಜಯಿಯಾಗುತ್ತಾರೆ. ಎಲ್ಲಾ ಸುತ್ತುಗಳು ಮುಗಿಯುವ ಮುನ್ನವೇ ಯಾರಾದರೂ ಗೆಲುವಿನ ಗಡಿಯನ್ನು ತಲುಪಿದರೆ, ಉಳಿದ ಸುತ್ತುಗಳನ್ನು ಆಡಲಾಗುವುದಿಲ್ಲ. ಆದಾಗ್ಯೂ, ಕ್ಲಾಸಿಕಲ್ ಹಂತದ ಕೊನೆಯಲ್ಲಿ ಅಂಕ ಸಮನಾದರೆ, ಟೈಬ್ರೇಕ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.
'ವಿಶ್ವದ ಚೆಸ್ ಸಮುದಾಯವನ್ನು ಸ್ವಿಟ್ಜರ್ಲೆಂಡ್‌ಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ. ಸ್ಥಳೀಯ ಚೆಸ್ ಪ್ರಿಯರಿಗೆ ಪ್ರತ್ಯಕ್ಷವಾಗಿ ವಿಶ್ವದರ್ಜೆಯ ಚೆಸ್ ಸ್ಪರ್ಧೆಯನ್ನು ವೀಕ್ಷಿಸುವ ಅವಕಾಶ ಸಿಗಲಿದೆ. ಆನ್‌ಲೈನ್‌ನಲ್ಲಿಯೂ ಈ ಹಣಾಹಣಿಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ' ಎಂದು ಐದು ಬಾರಿಯ ಚಾಂಪಿಯನ್ ಆಗಿರುವ ಆನಂದ್ ತಿಳಿಸಿದರು.
ಗುಕೇಶ್ ಅವರು 2024ರಲ್ಲಿ (ಸಿಂಗಪುರ) ಗೆದ್ದ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದ್ದಾರೆ. ಸಿಂದರೋವ್ ಅವರು ಸೈಪ್ರಸ್‌ನಲ್ಲಿ ನಡೆದ 2026ರ ಫಿಡೆ ಕ್ಯಾಂಡಿಡೇಟ್ಸ್ ಟೂರ್ನಿಯನ್ನು ಗೆಲ್ಲುವ ಮೂಲಕ ಗುಕೇಶ್ ಅವರಿಗೆ ಸವಾಲು ಹಾಕುವ ಅರ್ಹತೆ ಗಿಟ್ಟಿಸಿಕೊಂಡರು.

