ನವದೆಹಲಿ: ಪೂರ್ವ ದೆಹಲಿಯ ವಿನೋದ್ ನಗರದ ಸರ್ಕಾರಿ ಶಾಲೆಯೊಂದರ 10 ವರ್ಷದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಶಾಲೆಗೆ ಪುಸ್ತಕ ತರಲಿಲ್ಲ ಎಂಬ ಕಾರಣಕ್ಕೆ ಶಿಕ್ಷೆಯಾಗಿ ಆಕೆಯನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.
ಆಗಸ್ಟ್ 27ರಂದು ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿನಿಯ ಆರೋಗ್ಯ ಹದಗೆಟ್ಟ ಬಳಿಕ ಶಾಲಾ ಆಡಳಿತ ಮಂಡಳಿಯು ಆಕೆಯ ತಾಯಿ ಅಂಜಲಿಗೆ ಕರೆ ಮಾಡಿ ವಿಷಯ ತಿಳಿಸಿತ್ತು.
'ನಾವು ಶಾಲೆ ಬಳಿ ಹೋಗುವಷ್ಟರಲ್ಲಿ ಮಗಳು ತೀವ್ರ ಅಸ್ವಸ್ಥಗೊಂಡು ಬಿಸಿಲಿನಲ್ಲಿ ನಿಂತಿರುವುದು ಕಂಡುಬಂತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ' ಎಂದು ಅಂಜಲಿ ತಿಳಿಸಿದ್ದಾರೆ.
ಘಟನೆ ಖಂಡಿಸಿ ವಿದ್ಯಾರ್ಥಿನಿಯ ಪೋಷಕರು ಮತ್ತು ಸ್ಥಳೀಯರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬಿಜೆಪಿ ಶಾಸಕ ರವೀಂದ್ರ ಸಿಂಗ್ ನೇಗಿ ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

