ನವದೆಹಲಿ: 'ದೇಶದಾದ್ಯಂತ ವಾಣಿಜ್ಯ, ಡಿಜಿಟಲ್, ಕಾನೂನು ಹಾಗೂ ಆಡಳಿತಾತ್ಮಕ ಚಟುವಟಿಕೆಗಳಲ್ಲಿ 2027ರ ಮಾರ್ಚ್ ತಿಂಗಳಿನಿಂದ ಭಾರತೀಯ ಪ್ರಮಾಣಿತ ಸಮಯ (ಐಎಸ್‌ಟಿ) ದಾಖಲಿಸುವುದನ್ನು ಕಡ್ಡಾಯಗೊಳಿಸಿ ಕಾನೂನು ಮಾಪನ ಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ)ನಿಯಮಗಳು-2026ರ ಅಡಿಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಖಾತೆ ಸಚಿವಾಲಯವು ಕಾನೂನು ಮಾಪನಶಾಸ್ತ್ರ ಕಾಯ್ದೆ ಸೆಕ್ಷನ್ 52ರ ಅಡಿಯಲ್ಲಿ ಆಗಸ್ಟ್ 27ರಂದು ಅಧಿಸೂಚನೆ ಹೊರಡಿಸಿದೆ.
'ಒಂದು ದೇಶ-ಒಂದು ಸಮಯ' ಉಪಕ್ರಮದ ಭಾಗ ಇದಾಗಿದ್ದು, ಗೆಜೆಟ್ ಅಧಿಸೂಚನೆ ಹೊರಡಿಸಿದ 180 ದಿನಗಳ ನಂತರ ಜಾರಿಗೆ ಬರಲಿದೆ.ಹೊಸ ಚೌಕಟ್ಟಿನ ಅಡಿಯಲ್ಲಿ ವಿದೇಶಿ ಕಾಲಮಾನವನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚಿಸಿದ್ದರೆ, ವೈಜ್ಞಾನಿಕ ಸಂಶೋಧನೆ, ಖಗೋಳಶಾಸ್ತ್ರಕ್ಕೆ ಪರ್ಯಾಯ ಮೂಲಗಳನ್ನು ಅನುಮೋದಿಸಿದ್ದರೆ ಮಾತ್ರ ಉಲ್ಲೇಖಿಸಬಹುದು. ಉಳಿದ ಎಲ್ಲ ಕಡೆಗಳಲ್ಲಿ ಐಎಸ್‌ಟಿ ಹೊರತುಪಡಿಸಿ, ಇತರೆ ಕಾಲಮಾನವನ್ನು ಉಲ್ಲೇಖಿ ಸುವುದನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ.

