HEALTH TIPS

ಟ್ರಂಪ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಸಮೀಪದಲ್ಲೇ ಹಾರಿದ ಪ್ರಯಾಣಿಕರ ವಿಮಾನ; ತನಿಖೆ ಆರಂಭ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕರೆದೊಯ್ಯುತ್ತಿದ್ದ ಅಧ್ಯಕ್ಷೀಯ ಹೆಲಿಕಾಪ್ಟರ್ ಮರೀನ್ ಒನ್ ಮತ್ತು ಅಮೆರಿಕನ್ ಏರ್‌ಲೈನ್ಸ್‌ನ ಪ್ರಯಾಣಿಕರ ವಿಮಾನ ವಾಷಿಂಗ್ಟನ್‌ನಲ್ಲಿ ಪರಸ್ಪರ ಅತ್ಯಂತ ಸಮೀಪದಲ್ಲಿ ಹಾರಿದ ಘಟನೆ ನಡೆದಿದೆ. ನಿಗದಿತ ಸುರಕ್ಷತಾ ಅಂತರ ಪಾಲನೆಯಾಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ಆರಂಭಿಸಿದೆ. 


ಆದರೆ, ಅಧ್ಯಕ್ಷ ಟ್ರಂಪ್ ಯಾವುದೇ ಹಂತದಲ್ಲೂ ಅಪಾಯದಲ್ಲಿರಲಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಆಗಸ್ಟ್‌ 4ರಂದು ಶ್ವೇತಭವನದಿಂದ ಟ್ರಂಪ್‌ ಅವರಿದ್ದ ಮರೀನ್ ಒನ್ ಹೆಲಿಕಾಪ್ಟರ್ ಆಂಡ್ರ್ಯೂಸ್ ವಾಯುಪಡೆ ನೆಲೆಯತ್ತ ತೆರಳುತ್ತಿತ್ತು. ಇದೇ ವೇಳೆ ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕನ್ ಏರ್‌ಲೈನ್ಸ್‌ನ ಪ್ರಾದೇಶಿಕ ಪ್ರಯಾಣಿಕರ ವಿಮಾನ ಹಾರಾಟ ಆರಂಭಿಸಿತ್ತು. ಈ ವೇಳೆ ಎರಡೂ ವಿಮಾನಗಳ ನಡುವಿನ ಅಂತರ ಒಂದು ಮೈಲಿಗಿಂತ ಕಡಿಮೆಯಾಗಿತ್ತು ಎಂದು ವರದಿಯಾಗಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ವಾಯು ಸಂಚಾರ ನಿಯಂತ್ರಕರ ನಡುವಿನ ಸಂವಹನದ ದೋಷದಿಂದ ಈ ಘಟನೆ ಸಂಭವಿಸಿದೆ.

ಈ ಕುರಿತು NTSB ತನಿಖೆ ಆರಂಭಿಸಿದ್ದು, ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಾಣಿಜ್ಯ ವಿಮಾನ ಮತ್ತು ಮರೀನ್ ಒನ್ ನಡುವೆ ನಿಗದಿತ ಸುರಕ್ಷತಾ ಅಂತರ ಪಾಲನೆಯಾಗದ ಕುರಿತು ಪರಿಶೀಲನೆ ನಡೆಸುತ್ತಿದೆ.

ಶ್ವೇತಭವನದ ವಕ್ತಾರ ಕುಶ್ ದೇಸಾಯಿ, "ಮರೀನ್ ಒನ್ ಅನ್ನು ವಿಶ್ವದ ಅತ್ಯುತ್ತಮ ಪೈಲಟ್‌ಗಳು ಹಾರಿಸುತ್ತಾರೆ. ಅಧ್ಯಕ್ಷರು ಯಾವುದೇ ಸಮಯದಲ್ಲೂ ಅಪಾಯದಲ್ಲಿರಲಿಲ್ಲ" ಎಂದು ತಿಳಿಸಿದ್ದಾರೆ.

ಫೆಡರಲ್ ಏವಿಯೇಷನ್ ಆಡಳಿತ (FAA) ಕೂಡ, ಘಟನೆ ಸಂಭವಿಸಿದ ವೇಳೆ ವಾಯು ಸಂಚಾರ ನಿಯಂತ್ರಕರು ಎರಡೂ ವಿಮಾನಗಳ ಪೈಲಟ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಿದೆ.

"ಅಧ್ಯಕ್ಷರು ಯಾವುದೇ ಅಪಾಯಕ್ಕೆ ಒಳಗಾಗಿಲ್ಲ. ತನಿಖೆ ಮುಂದುವರಿದಿದ್ದು, ಅದರ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು FAA ತಿಳಿಸಿದೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಸುರಕ್ಷತಾ ನಿಯಮಗಳಂತೆ ಎರಡು ವಿಮಾನಗಳ ನಡುವೆ ಕನಿಷ್ಠ 1.5 ಮೈಲುಗಳಷ್ಟು ಅಡ್ಡ ಅಂತರ ಹಾಗೂ 500 ಅಡಿ ಲಂಬ ಅಂತರ ಇರಬೇಕು.

ಘಟನೆ ಮಧ್ಯಾಹ್ನ ಸುಮಾರು 2.30ಕ್ಕೆ ನಡೆದಿದೆ. ಆ ವೇಳೆ ಎನ್ವಾಯ್ ಏರ್ ಸಂಸ್ಥೆ ಅಮೆರಿಕನ್ ಏರ್‌ಲೈನ್ಸ್ ಪರವಾಗಿ ನಿರ್ವಹಿಸುತ್ತಿದ್ದ ಎಂಬ್ರೇರ್ E-170 ವಿಮಾನ ಟೇಕ್‌ಆಫ್ ಆಗುತ್ತಿತ್ತು. ಮರೀನ್ ಒನ್ ಆಂಡ್ರ್ಯೂಸ್ ವಾಯುಪಡೆ ನೆಲೆಗೆ ತೆರಳುತ್ತಿದ್ದು, ಅಲ್ಲಿಂದ ಟ್ರಂಪ್ ಕ್ಯಾಲಿಫೋರ್ನಿಯಾಗೆ ತೆರಳಲು ಅಧ್ಯಕ್ಷೀಯ ವಿಮಾನವನ್ನು ಏರಿದ್ದರು.

ಈ ಕುರಿತು ಅಮೆರಿಕನ್ ಏರ್‌ಲೈನ್ಸ್ ಮತ್ತು ಮರೀನ್ ಒನ್ ಕಾರ್ಯಾಚರಣೆ ನಡೆಸುವ ಅಮೆರಿಕದ ಮೆರೈನ್ ಕಾರ್ಪ್ಸ್ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ.

ಜನವರಿ 2025ರಲ್ಲಿ ಇದೇ ವಿಮಾನ ನಿಲ್ದಾಣದ ಸಮೀಪ ಪ್ರಯಾಣಿಕರ ವಿಮಾನ ಮತ್ತು ಅಮೆರಿಕ ಸೇನೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ 67 ಮಂದಿ ಮೃತಪಟ್ಟಿದ್ದರು. ಆ ಘಟನೆಯ ಬಳಿಕ FAA ಅಲ್ಲಿನ ವಾಯುಪ್ರದೇಶದಲ್ಲಿ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿತ್ತು.

ಆದರೆ, ಅಮೆರಿಕದ ಮೆರೈನ್ ಕಾರ್ಪ್ಸ್ ಈ ಘಟನೆಯನ್ನು "ನಿಕಟ ಅಪಾಯ" ಎಂದು ಬಣ್ಣಿಸುವುದನ್ನು ತಳ್ಳಿಹಾಕಿದೆ.

"ಇದು ಮರೀನ್ ಒನ್‌ನ ವಾಡಿಕೆಯ ಹಾರಾಟವಾಗಿತ್ತು. ನಿಯಂತ್ರಣ ಗೋಪುರವು ಹೆಲಿಕಾಪ್ಟರ್ ಸಿಬ್ಬಂದಿಯನ್ನು ತಡೆಯಲಿಲ್ಲ, ಕಾಯುವಂತೆ ಸೂಚಿಸಲಿಲ್ಲ ಅಥವಾ ಹಾರಾಟದ ಮಾರ್ಗ ಬದಲಾಯಿಸುವಂತೆ ಆದೇಶಿಸಲಿಲ್ಲ" ಎಂದು ಮೆರೈನ್ ಕಾರ್ಪ್ಸ್ ವಕ್ತಾರ ಕ್ಯಾಪ್ಟನ್ ಜಾಕೋಬ್ ಸಗ್ ತಿಳಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries