HEALTH TIPS

ಭಾನುವಾರ ವಾರದ ರಜೆ ಹೇಗೆ ಬಂತು? ಇದರ ಹಿಂದಿದೆ ಒಬ್ಬ ಕಾರ್ಮಿಕ ನಾಯಕನ ಹೋರಾಟ

ಭಾನುವಾರ ಎಂದರೆ ಹೆಚ್ಚಿನವರಿಗೆ ಆರಾಮ್‌ ಮಾಡಲು, ವಿಶ್ರಾಂತಿ ಪಡೆಯಲು ಒಂದು ದಿನ. ಕಾರಣ ಅಂದು ವಾರದ ರಜೆ. ಇಂದು ಬಹುತೇಕ ಉದ್ಯೋಗಿಗಳಿಗೆ ಭಾನುವಾರವೇ ಸಾಮಾನ್ಯ ರಜಾದಿನ. ಬೆಳಗ್ಗೆ ತಡವಾಗಿ ಏಳುವುದು, ಕುಟುಂಬದ ಜೊತೆ ಸಮಯ ಕಳೆಯುವುದು, ಬಾಕಿ ಕೆಲಸಗಳನ್ನು ಮುಗಿಸುವುದು ಅಥವಾ ಸೋಮವಾರದ ಕೆಲಸಕ್ಕೆ ಸಿದ್ಧವಾಗುವುದು.

ಹೀಗೆ ಭಾನುವಾರದ ರಜೆ ನಮ್ಮ ಬದುಕಿನ ಸಹಜ ಭಾಗವಾಗಿಬಿಟ್ಟಿದೆ.

ಆದರೆ ಭಾರತದಲ್ಲಿ ಭಾನುವಾರ ರಜಾದಿನ ಅಂತ ಯಾವಾಗ ಶುರುವಾಯ್ತು? ಇಲ್ಲಿನ ಕಾರ್ಮಿಕರಿಗೆ ವಾರಕ್ಕೊಮ್ಮೆ ರಜೆ ಎನ್ನುವ ಹಕ್ಕು ಮೊದಲೇ ಇತ್ತೇ? ನೋಡುತ್ತ ಹೋದರೆ, ಇದರ ಹಿಂದೆ ಒಂದು ಹೋರಾಟವೇ ಇದ್ದುದು ತಿಳಿಯುತ್ತದೆ. ಇಂದಿನ ಈ ಸಾಮಾನ್ಯ ರಜೆಯ ಹಿಂದೆ 19ನೇ ಶತಮಾನದ ಕಾರ್ಮಿಕರ ಹೋರಾಟದ ಒಂದು ಮಹತ್ವದ ಅಧ್ಯಾಯವಿದೆ. ಆ ಹೋರಾಟದ ಪ್ರಮುಖ ಮುಖವಾಗಿದ್ದವರು ನಾರಾಯಣ ಮೇಘಾಜಿ ಲೋಖಂಡೆ.

ಭಾನುವಾರದ ರಜೆಗಾಗಿ ಹೋರಾಡಿದ ಲೋಖಂಡೆ

1848ರಲ್ಲಿ ಜನಿಸಿದ ನಾರಾಯಣ ಮೇಘಾಜಿ ಲೋಖಂಡೆ ಅವರನ್ನು ಭಾರತದ ಆರಂಭಿಕ ಕಾರ್ಮಿಕ ಚಳವಳಿಯ ಪ್ರಮುಖ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಪ್ರಧಾನಮಂತ್ರಿ ಕಚೇರಿಯ ಅಧಿಕೃತ ದಾಖಲೆಯಲ್ಲೂ ಅವರನ್ನು ಭಾರತದ ಕಾರ್ಮಿಕ ಸಂಘಟನೆ ಚಳವಳಿಯ ಪ್ರಮುಖ ಪಿತಾಮಹರಲ್ಲಿ ಒಬ್ಬರೆಂದು ಸ್ಮರಿಸಲಾಗಿದೆ. 1884ರಲ್ಲಿ ಅವರು ಸ್ಥಾಪಿಸಿದ ಮಿಲ್ ಹ್ಯಾಂಡ್ಸ್ ಅಸೋಸಿಯೇಷನ್ ಕಾರ್ಮಿಕರ ಬೇಡಿಕೆಗಳನ್ನು ಸಂಘಟಿತವಾಗಿ ಮುಂದಿಡುವ ಪ್ರಮುಖ ವೇದಿಕೆಯಾಯಿತು.

ಅದು ಬ್ರಿಟಿಷರ ಕಾಲ. ಮುಂಬೈನ ಹತ್ತಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ದೀರ್ಘ ಕೆಲಸದ ಅವಧಿ, ಕಡಿಮೆ ವೇತನ, ವಿಶ್ರಾಂತಿಯ ಕೊರತೆ ಮತ್ತು ಅಪಘಾತಗಳ ಸಂದರ್ಭದಲ್ಲಿ ಯಾವುದೇ ಸಮರ್ಪಕ ಭದ್ರತೆ ಇಲ್ಲದಂತಹ ಸಮಸ್ಯೆಗಳಿದ್ದವು. ಕಾರ್ಮಿಕರು ಹಲವು ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿಯೂ ಇತ್ತು.

ಇಂತಹ ಸಂದರ್ಭದಲ್ಲಿ ಲೋಖಂಡೆ ಮುಂದಿಟ್ಟ ಬೇಡಿಕೆಗಳಲ್ಲಿ ಇಂದು ನಮಗೆ ಅತ್ಯಂತ ಸಾಮಾನ್ಯವಾಗಿ ಕಾಣಿಸುವ ಕೆಲವು ಹಕ್ಕುಗಳೂ ಇದ್ದವು.

- ವಾರಕ್ಕೊಂದು ಪೂರ್ಣ ದಿನ ರಜೆ.

- ಮಧ್ಯಾಹ್ನ ಅರ್ಧ ಗಂಟೆಯ ವಿಶ್ರಾಂತಿ.

- ಕೆಲಸದ ಸಮಯವನ್ನು ನಿಗದಿಪಡಿಸುವುದು.

- ತಿಂಗಳ 15ರೊಳಗೆ ವೇತನ ಪಾವತಿ.

- ಕೆಲಸದ ವೇಳೆ ಗಾಯಗೊಂಡ ಕಾರ್ಮಿಕರಿಗೆ ಪರಿಹಾರ ಮತ್ತು ರಕ್ಷಣೆ.

1884ರಲ್ಲಿ ಸುಮಾರು 5,500 ಕಾರ್ಮಿಕರ ಸಹಿಗಳಿದ್ದ ಮನವಿಯನ್ನು ಕಾರ್ಖಾನೆ ಆಯೋಗದ ಮುಂದೆ ಸಲ್ಲಿಸಲಾಯಿತು. ಅದರಲ್ಲೇ ಪ್ರತಿಯೊಬ್ಬ ಗಿರಣಿ ಕಾರ್ಮಿಕನಿಗೂ ಪ್ರತಿ ಭಾನುವಾರ ಒಂದು ಪೂರ್ಣ ದಿನದ ವಿಶ್ರಾಂತಿ ನೀಡಬೇಕು ಎಂಬ ಬೇಡಿಕೆಯೂ ಇತ್ತು.

ಏಳು ದಿನ ಕೆಲಸ, ಒಂದು ದಿನವೂ ರಜೆ ಇಲ್ಲ

ಇಂದು ವಾರಕ್ಕೆ ಐದು ಅಥವಾ ಆರು ದಿನ ಕೆಲಸ ಮಾಡುವುದು ಸಹಜವೆನಿಸುತ್ತದೆ. ಆದರೆ ಆಗ ಕಾರ್ಮಿಕರಿಗೆ ವಾರದ ಒಂದು ದಿನವನ್ನಾದರೂ ತಮ್ಮ ಕುಟುಂಬದ ಜೊತೆ ಕಳೆಯುವ ಅವಕಾಶ ಇರಲಿಲ್ಲ. ಇಲ್ಲಿಯೇ ಲೋಖಂಡೆಯ ಹೋರಾಟದ ಮಹತ್ವ ಅರ್ಥವಾಗುತ್ತದೆ. ಅವರು ʼಕಾರ್ಮಿಕನಿಗೂ ಕೆಲಸದ ಹೊರತಾಗಿ ಬದುಕು ಇದೆʼ ಎಂಬ ಮೂಲಭೂತ ವಿಚಾರವನ್ನು ಮುಂದಿಟ್ಟರು.

ಕಾರ್ಮಿಕನಿಗೆ ಊಟಕ್ಕೆ ಸಮಯ ಬೇಕು. ದೇಹಕ್ಕೆ ವಿಶ್ರಾಂತಿ ಬೇಕು. ಕುಟುಂಬದ ಜೊತೆ ಸಮಯ ಕಳೆಯಬೇಕು. ಕೆಲಸದ ವೇಳೆ ಗಾಯವಾದರೆ ರಕ್ಷಣೆ ಬೇಕು. ಮಾಡಿದ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ವೇತನ ಸಿಗಬೇಕು ಎಂದು ಪ್ರತಿಪದಿಸಿದರು. ಈ ಬೇಡಿಕೆಗಳು ಇಂದು ಸಾಮಾನ್ಯ ಉದ್ಯೋಗ ಹಕ್ಕುಗಳು. ಆದರೆ 19ನೇ ಶತಮಾನದ ಕೈಗಾರಿಕಾ ಭಾರತದಲ್ಲಿ ಅವು ಬಹಳ ದೊಡ್ಡ ಬೇಡಿಕೆಗಳಾಗಿದ್ದವು.

1890ರ ಆ ಸಭೆ

1884ರಲ್ಲಿ ಬೇಡಿಕೆಗಳನ್ನು ಮುಂದಿಟ್ಟರೂ ತಕ್ಷಣವೇ ಎಲ್ಲವೂ ಬದಲಾಗಲಿಲ್ಲ. ಹೋರಾಟ ಮುಂದುವರಿಯಿತು. 1890ರ ಏಪ್ರಿಲ್ 24ರಂದು ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್ ಮೈದಾನದಲ್ಲಿ ಲೋಖಂಡೆ ನೇತೃತ್ವದಲ್ಲಿ ನಡೆದ ಬೃಹತ್ ಕಾರ್ಮಿಕರ ಸಭೆಯಲ್ಲಿ ಸುಮಾರು 10,000 ಕಾರ್ಮಿಕರು ಭಾಗವಹಿಸಿದ್ದರು ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ವಾರದ ರಜೆ, ಕೆಲಸದ ಅವಧಿ ಕಡಿತ, ಮಧ್ಯಾಹ್ನದ ವಿರಾಮ ಮತ್ತು ಕೆಲಸದ ವೇಳೆ ಗಾಯಗೊಂಡವರಿಗೆ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳು ಮತ್ತೆ ಮುಂದಿಡಲಾಯಿತು.

ಈ ಸಂಘಟಿತ ಒತ್ತಡದ ನಂತರ 1890ರ ಜೂನ್ 10ರಂದು ಮುಂಬೈನ ಗಿರಣಿ ಮಾಲೀಕರ ಸಂಘಟನೆ ಭಾನುವಾರವನ್ನು ವಾರದ ರಜೆಯ ದಿನವಾಗಿ ಸ್ವೀಕರಿಸಿತು ಎಂಬ ದಾಖಲೆಗಳಿವೆ. ಇದನ್ನು ಭಾರತದ ಕಾರ್ಮಿಕ ಚಳವಳಿಯ ಆರಂಭಿಕ ಪ್ರಮುಖ ವಿಜಯಗಳಲ್ಲಿ ಒಂದಾಗಿ ಇತಿಹಾಸದಲ್ಲಿ ಗುರುತಿಸಲಾಗಿದೆ.

ಆದರೆ, ಅದು ತಕ್ಷಣವೇ ಇಡೀ ಭಾರತಕ್ಕೆ ಭಾನುವಾರದ ಸಾರ್ವತ್ರಿಕ ರಜೆ ಕಾನೂನಾಗಿ ಜಾರಿಯಾಗಲಿಲ್ಲ. ಆ ದಿನ ಆದ ನಿರ್ಧಾರ ಮುಂಬೈನ ಗಿರಣಿ ಕಾರ್ಮಿಕರ ಹೋರಾಟಕ್ಕೆ ಸಂಬಂಧಿಸಿದ್ದು. ನಂತರದ ಕಾರ್ಮಿಕ ಕಾನೂನುಗಳು ವಾರದ ವಿಶ್ರಾಂತಿ ಸೇರಿದಂತೆ ಹಲವು ಹಕ್ಕುಗಳನ್ನು ಕ್ರಮೇಣ ಕಾನೂನುಬದ್ಧಗೊಳಿಸಿದವು.

1881ರ ಕಾರ್ಖಾನೆ ಕಾಯ್ದೆ

ಲೋಖಂಡೆಯ ಹೋರಾಟ ನಡೆಯುತ್ತಿದ್ದ ಅವಧಿಯಲ್ಲಿ ಕಾರ್ಮಿಕ ಕಾನೂನುಗಳೂ ನಿಧಾನವಾಗಿ ರೂಪುಗೊಳ್ಳುತ್ತಿದ್ದವು. 1881ರ ಮೊದಲ ಕಾರ್ಖಾನೆ ಕಾಯ್ದೆ ಭಾರತದಲ್ಲಿ ಕಾರ್ಖಾನೆ ಕಾರ್ಮಿಕರ ಪರಿಸ್ಥಿತಿಯನ್ನು ನಿಯಂತ್ರಿಸುವ ಆರಂಭಿಕ ಪ್ರಮುಖ ಕಾನೂನು. ಆದರೆ ಅದರ ರಕ್ಷಣೆಗಳು ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಕೆಲಸದ ಪರಿಸ್ಥಿತಿಗಳತ್ತ ಹೆಚ್ಚು ಕೇಂದ್ರೀಕೃತವಾಗಿದ್ದವು. ನಂತರ 1891ರ ಕಾರ್ಖಾನೆ ಕಾಯ್ದೆ ಕೆಲಸದ ಅವಧಿ ಮತ್ತು ಕಾರ್ಮಿಕರ ಪರಿಸ್ಥಿತಿಗಳ ಮೇಲೆ ಮತ್ತಷ್ಟು ನಿಯಂತ್ರಣ ತಂದಿತು.

ಅಂದರೆ, ಲೋಖಂಡೆಯ ಹೋರಾಟ ಮತ್ತು ಕಾರ್ಮಿಕರ ಸಂಘಟಿತ ಒತ್ತಡ ನಡೆದ ಕಾಲದಲ್ಲೇ ಕಾರ್ಮಿಕ ಕಾನೂನುಗಳ ಬೆಳವಣಿಗೆಯೂ ನಡೆಯುತ್ತಿತ್ತು. ಪ್ರಧಾನಮಂತ್ರಿ ಕಚೇರಿಯ ದಾಖಲೆಯ ಪ್ರಕಾರ, ಲೋಖಂಡೆಯ ಚಟುವಟಿಕೆಗಳ ಹಿನ್ನೆಲೆಯಲ್ಲಿ 1890ರಲ್ಲಿ ರಚಿಸಲಾದ ಫ್ಯಾಕ್ಟರಿ ಲೇಬರ್ ಕಮಿಷನ್‌ನಲ್ಲಿ ಅವರನ್ನೂ ಸದಸ್ಯರನ್ನಾಗಿ ಸೇರಿಸಲಾಗಿತ್ತು. ಆ ಪ್ರಕ್ರಿಯೆಯ ನಂತರ 1891ರ ಕಾರ್ಖಾನೆ ಕಾಯ್ದೆ ಜಾರಿಗೆ ಬಂತು.

ಭಾನುವಾರದ ರಜಾದಿನ

1890ರ ಮುಂಬೈ ಗಿರಣಿ ಹೋರಾಟದ ನಂತರ ಭಾನುವಾರದ ವಾರದ ರಜೆ ಕ್ರಮೇಣ ವಿಸ್ತಾರವಾದ ಕಾರ್ಮಿಕ ಪದ್ಧತಿಯ ಭಾಗವಾಯಿತು. ಹಲವು ದಶಕಗಳ ನಂತರ, ಸ್ವಾತಂತ್ರ್ಯೋತ್ತರ ಭಾರತದ 1948ರ ಕಾರ್ಖಾನೆ ಕಾಯ್ದೆಯ ಸೆಕ್ಷನ್ 52 ಕಾರ್ಖಾನೆ ಕಾರ್ಮಿಕರಿಗೆ ವಾರದ ರಜೆಯ ಕುರಿತು ಸ್ಪಷ್ಟ ಕಾನೂನುಬದ್ಧ ವ್ಯವಸ್ಥೆ ನೀಡಿತು. ಸಾಮಾನ್ಯವಾಗಿ ವಾರದ ಮೊದಲ ದಿನದಲ್ಲಿ ಕೆಲಸ ಮಾಡಿಸಬೇಕಾದರೆ ಸಮೀಪದ ಇನ್ನೊಂದು ದಿನ ಪೂರ್ಣ ರಜೆ ನೀಡುವಂತಹ ವ್ಯವಸ್ಥೆಯನ್ನೂ ಕಾಯ್ದೆ ಒದಗಿಸಿತು.

ಹೀಗಾಗಿ ಇಂದು ಕಾಣುವ ಭಾನುವಾರದ ರಜೆ ಒಂದು ವ್ಯಕ್ತಿಯ ಹೋರಾಟದಿಂದ ಒಂದೇ ದಿನದಲ್ಲಿ ಇಡೀ ದೇಶಕ್ಕೆ ದೊರೆತದ್ದಲ್ಲ. ಆದರೆ ಆ ಹೋರಾಟವು ವಾರದ ವಿಶ್ರಾಂತಿಯನ್ನು ಕಾರ್ಮಿಕರ ಹಕ್ಕಿನ ಪ್ರಶ್ನೆಯಾಗಿಸಿದ ಮಹತ್ವದ ಆರಂಭಿಕ ಹೆಜ್ಜೆ.

ಲೋಖಂಡೆಯ ಹೋರಾಟ ಕೇವಲ ಸಭೆ, ಮನವಿ ಮತ್ತು ಸಂಘಟನೆಗಳಿಗೆ ಸೀಮಿತವಾಗಿರಲಿಲ್ಲ. ಅವರು 'ದೀನಬಂಧು' ಪತ್ರಿಕೆಯ ಮೂಲಕ ಕಾರ್ಮಿಕರು ಮತ್ತು ರೈತರ ಸಮಸ್ಯೆಗಳನ್ನು ಸಾರ್ವಜನಿಕ ಚರ್ಚೆಗೆ ತಂದರು. ಕಾರ್ಮಿಕರ ನೋವು, ಬೇಡಿಕೆ ಮತ್ತು ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries