HEALTH TIPS

ಮಾಧ್ಯಮ ಸಂಸ್ಥೆಗಳಾದ CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧಿಸಿದ ಟ್ರಂಪ್; ಕಾರಣವೇನು?

ವಾಷಿಂಗ್ಟನ್:  ಮಾಧ್ಯಮ ಸಂಸ್ಥೆಗಳು ಕಾಲ್ಪನಿಕ ಕಥೆಗಳು ಮತ್ತು ಸುಳ್ಳು ಮಾಹಿತಿಯನು ವರದಿ ಮಾಡುತ್ತಿವೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶ್ವೇತಭವನ ಪ್ರವೇಶಿಸದಂತೆ ಪ್ರಮುಖ ಸುದ್ದಿವಾಹಿನಿಗಳಿಗೆ ಹೊಸ ನಿಷೇಧ ಹೇರಿದ್ದಾರೆ.


ಸಿಎನ್‌ಎನ್ (CNN), ಎಂಎಸ್ ನೌ (MS NOW) ಮತ್ತು ಪೊಲಿಟಿಕೋ (Politico) ಮಾಧ್ಯಮ ಸಂಸ್ಥೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಶ್ವೇತಭವನ ಪ್ರವೇಶ ನಿಷೇಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಅವರು, ತಮ್ಮ ಆಡಳಿತದ ಕುರಿತ ಮಾಧ್ಯಮಗಳ ವರದಿಗಾರಿಕೆಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಸಿಎನ್‌ಎನ್, ಎಂಎಸ್ ನೌ ಮತ್ತು ಪೊಲಿಟಿಕೋಗಳನ್ನು ಶ್ವೇತಭವನದಿಂದ ತಕ್ಷಣದಿಂದಲೇ ನಿಷೇಧಿಸುತ್ತಿರುವುದಾಗಿ ಹೆಮ್ಮೆಯಿಂದ ಘೋಷಿಸುತ್ತಿದ್ದೇನೆ. ಅವು ಸದಾ ಫೇಕ್ ನ್ಯೂಸ್ ವರದಿ ಮಾಡುತ್ತಿರುವುದೇ ಇದಕ್ಕೆ ಕಾರಣ" ಎಂದು ಅವರು ಬರೆದುಕೊಂಡಿದ್ದಾರೆ.

"ಅಮೆರಿಕದ ಅಧ್ಯಕ್ಷರು, ಟ್ರಂಪ್ ಆಡಳಿತ ಅಥವಾ ಅಮೆರಿಕದ ಬಗ್ಗೆ ವರದಿ ಮಾಡುವಾಗ ಮಾಧ್ಯಮ ಸಂಸ್ಥೆಗಳು ಸತತವಾಗಿ ಕಾಲ್ಪನಿಕ ಕಥೆಗಳು ಮತ್ತು ಸುಳ್ಳುಗಳನ್ನು ಪ್ರಕಟಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇತರ ಫೇಕ್ ನ್ಯೂಸ್ ಮಾಧ್ಯಮಗಳ ಮೇಲೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ಮುಂದಿನ ದಿನಗಳಲ್ಲಿ ಕ್ರಮ ಎದುರಿಸಲಿರುವ ಇತರ ಮಾಧ್ಯಮ ಸಂಸ್ಥೆಗಳು ಯಾವುವು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, 'ದಿ ನ್ಯೂಯಾರ್ಕ್ ಟೈಮ್ಸ್' ಮತ್ತು 'ದಿ ವಾಷಿಂಗ್ಟನ್ ಪೋಸ್ಟ್' ಸಂಸ್ಥೆಗಳನ್ನು 'ಫೇಕ್ ನ್ಯೂಸ್' ಎಂದು ಕರೆದಿದ್ದಾರೆ.

ಈ ಮಾಧ್ಯಮ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ನಕಾರಾತ್ಮಕ ಸುದ್ದಿಗಳನ್ನು ಬರೆಯುತ್ತವೆ ಎಂದು ಆರೋಪಿಸಿರುವ ಅವರು, ಫೇಕ್ ನ್ಯೂಸ್ ಓದಿ ಓದಿ ಬೇಸರವಾಗಿದೆ. ರಿಪಬ್ಲಿಕನ್ನರು ಮತ್ತು ರಿಪಬ್ಲಿಕನ್ ಆಡಳಿತದ ವರ್ಚಸ್ಸನ್ನು ಕುಗ್ಗಿಸುವ ಉದ್ದೇಶದಿಂದಲೇ ಅವರು ಉದ್ದೇಶಪೂರ್ವಕವಾಗಿ ನಕಾರಾತ್ಮಕ ಸುದ್ದಿಗಳನ್ನು ಬರೆಯುತ್ತಾರೆ. ವಾಸ್ತವದಲ್ಲಿ ನಾವು ಅತ್ಯುತ್ತಮ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈಗಲೇ ಕ್ರಮ ಕೈಗೊಳ್ಳಲು ಕಾರಣವೇನು ಎಂದು ಕೇಳಿದಾಗ, ಈ ಸುದ್ದಿ ಸಂಸ್ಥೆಗಳು ಸತತವಾಗಿ ನಡೆಸಿಕೊಂಡು ಬಂದಿರುವ ವರದಿಗಾರಿಕೆಯ ಒಟ್ಟಾರೆ ಪರಿಣಾಮದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

"ಟ್ರಂಪ್ ಅವರ ಈ ನಿರ್ಧಾರವನ್ನು ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ" ಎಂದು ಅಲ್ ಜಝೀರಾದ ಅಲಾನ್ ಫಿಶರ್ ತಿಳಿಸಿದ್ದಾರೆ.

"ಅಮೆರಿಕದ ಸಂವಿಧಾನದ ಮೊದಲ ತಿದ್ದುಪಡಿ ಸರ್ಕಾರ ಇಂತಹ ಪ್ರವೇಶ ನಿರ್ಬಂಧ ಹೇರುವುದನ್ನು ತಡೆಯುತ್ತದೆ. ಈ ಹಿಂದೆಯೂ ಅಧ್ಯಕ್ಷರು ಮಾಧ್ಯಮಗಳ ವರದಿಯ ಬಗ್ಗೆ ಕೋಪಗೊಂಡ ಉದಾಹರಣೆಗಳಿವೆ. ಆದರೆ ಪ್ರತಿ ಬಾರಿಯೂ ಇದು ತಪ್ಪು ಸಂದೇಶ ರವಾನಿಸುತ್ತದೆ ಎಂದು ಅವರಿಗೆ ತಿಳಿಸಲಾಗಿತ್ತು" ಎಂದು ಫಿಶರ್ ವಿವರಿಸಿದ್ದಾರೆ.

ಸಿಎನ್‌ಎನ್, ಪೊಲಿಟಿಕೋ ಪ್ರತಿಕ್ರಿಯೆ:

ಟ್ರಂಪ್ ಅವರ ಈ ನಿರ್ಧಾರವನ್ನು ಖಂಡಿಸಿರುವ ಸಿಎನ್‌ಎನ್, ತನ್ನ ಶ್ವೇತಭವನದ ವರದಿಗಾರರ ತಂಡ ಹಾಗೂ ಅವರ ನ್ಯಾಯಯುತ ಮತ್ತು ನಿಖರ ವರದಿಗಾರಿಕೆಯನ್ನು ಸಮರ್ಥಿಸಿಕೊಂಡಿದೆ.

"ಸರ್ಕಾರದ ಹಸ್ತಕ್ಷೇಪವಿಲ್ಲದೆ ಮುಕ್ತವಾಗಿ ವರದಿ ಮಾಡುವ ಹಕ್ಕನ್ನು ನಮಗೆ ಅಮೆರಿಕದ ಸಂವಿಧಾನ ನೀಡಿದೆ. ಈ ನಿಷೇಧ ಜಾರಿಯಾದರೆ, ಅದು ಸಂವಿಧಾನಬದ್ಧ ಮೂಲಭೂತ ಹಕ್ಕಿನ ಮೇಲಿನ ಕಾನೂನುಬಾಹಿರ ದಾಳಿಯಾಗುತ್ತದೆ" ಎಂದು ಸಿಎನ್‌ಎನ್ ವಕ್ತಾರರು ಅಲ್ ಜಝೀರಾಗೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲಿಟಿಕೋ, ನಾವು ಪ್ರಸ್ತುತ ಶ್ವೇತಭವನ ಹಾಗೂ ಭವಿಷ್ಯದ ಆಡಳಿತಗಳ ಕುರಿತು ನ್ಯಾಯಯುತವಾಗಿ ವರದಿ ಮಾಡುವುದನ್ನು ಮುಂದುವರಿಸುತ್ತೇವೆ. ನಮ್ಮ ಮೊದಲ ತಿದ್ದುಪಡಿಯ ಹಕ್ಕುಗಳನ್ನು ನಿರ್ಬಂಧಿಸುವ ಯಾವುದೇ ಯತ್ನದ ವಿರುದ್ಧ ನಾವು ಬಲವಾಗಿ ಹೋರಾಡುತ್ತೇವೆ" ಎಂದು ಸ್ಪಷ್ಟಪಡಿಸಿದೆ.

ಜೊತೆಗೆ, ಪೊಲಿಟಿಕೋ ಸರ್ಕಾರದ ಸಬ್ಸಿಡಿ ಪಡೆದಿದೆ ಎಂಬ ಟ್ರಂಪ್ ಅವರ ಪ್ರತ್ಯೇಕ ಆರೋಪವನ್ನು ಸುಳ್ಳು ಎಂದು ತಳ್ಳಿಹಾಕಿದೆ.

ಎಂಎಸ್ ನೌ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries