HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಮಚಿಕೆ-17-ಬರಹ:ಶ್ರೀವತ್ಸ ಜೋಶಿ-ವಾಶಿಂಗ್ಟನ್ ಡಿ.ಸಿ

*
 ಮೂರು ಟಿಪ್ಪಣಿಗಳು ಇಲ್ಲಿವೆ.
೧. ಪ್ರಕೃತಿಯ ಮೇಲೆ ಅತ್ಯಾಚಾರ, ಪತ್ರಿಕೆಗಳಲ್ಲಿ!
ಸ್ವಚ್ಛ ಭಾಷೆ ಕಲಿಕೆಯಲ್ಲಿ ಸಹಪಾಠಿಯಾಗಿರುವ ಸಾವಿತ್ರಿ ಮಂಗಳೂರು ಅವರು ಕನ್ನಡ ಪತ್ರಿಕೆಗಳಲ್ಲಿನ ತಲೆಬರಹಗಳ ಬಗ್ಗೆ ವಿಭಿನ್ನ ರೀತಿಯದೊಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಹೀಗೆ-
“ಎಲ್ಲರಿಗೂ ಗೊತ್ತಿದೆ. ಮಳೆ ಬರುವಾಗ ನಾವು ಎದುರಿಸುವ ಸಮಸ್ಯೆಗಳಿಗೆ ಪ್ರಕೃತಿಯ ಮೇಲೆ ಎಸಗುತ್ತಿರುವ ನಮ್ಮ ದೌರ್ಜನ್ಯಗಳೇ ಕಾರಣ ಎಂದು. ಆದರೂ ಒಂದೆರಡು ಮಳೆ ಬಿತ್ತೋ ಇಲ್ಲವೋ, ನಮ್ಮ ದೃಶ್ಯ  ಹಾಗೂ ಪತ್ರಿಕಾ ಮಾಧ್ಯಮಗಳು ಮಳೆಯನ್ನು ಹೀಗಳೆಯುವಂತೆ ದೊಡ್ಡ ದೊಡ್ಡ ತಲೆಬರಹದಡಿ ಸುದ್ದಿ ಪ್ರಕಟಿಸುತ್ತವೆ. ಇವತ್ತು ಕೂಡ ಪ್ರಖ್ಯಾತ ಪತ್ರಿಕೆಗಳೂ ಹೀಗೇ ಮಾಡಿವೆ. 'ಮಳೆಯ ಆರ್ಭಟ', ‘ವರುಣನ  ಅಟ್ಟಹಾಸ'...  ಏನಿದು ಶಬ್ದಗಳ ಬಳಕೆ! ಮನುಷ್ಯರ ಅಟ್ಟಹಾಸದಿಂದ ಮಳೆ ಕಷ್ಟ ಅನುಭವಿಸ್ತಿದೆ. ಅನಾಹುತಗಳಿಗೆ ಮಳೆ ಕಾರಣವಲ್ಲ. ಶಬ್ದ ಬಳಕೆಯ ಪರಿಣಾಮದ ಬಗ್ಗೆ ಸಂಬಂಧಿತರು ಯೋಚಿಸಲಿ. ಬಯಸಿ ಬಯಸಿ ಆಸೆಪಟ್ಟ ಬಳಿಕ ಒಂದಿಷ್ಟು ಜೀವಜಲ ಹನಿಯುತ್ತಿದೆ. ಮಳೆ ಬಗ್ಗೆ ಪ್ರೀತಿ ಗೌರವ ಕಾಳಜಿ ತುಡಿತ ಇರಲಿ. ಬೈಯುವ ರೀತಿಯ ಬರಹ, ಹೇಳಿಕೆಗಳು ತರವಲ್ಲ!"
ಸಾವಿತ್ರಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ನಿಜಕ್ಕೂ ಚಿಂತನಾರ್ಹವಾದುದು. ಪತ್ರಿಕೆಗಳು ತಲೆಬರಹಗಳನ್ನು ಕೊಡುವಾಗ ಕೆಲವು ಸಿದ್ಧಮಾದರಿಗಳನ್ನು ಅನುಸರಿಸುತ್ತವೆ, ಅಲ್ಲಿ ಔಚಿತ್ಯಪ್ರಜ್ಞೆ ಇರುವುದಿಲ್ಲ,  ಗಾಂಭೀರ್ಯವೂ ಇರುವುದಿಲ್ಲ. ಉತ್ತರಭಾರತ ಅಥವಾ ಉತ್ತರಕರ್ನಾಟಕದಲ್ಲೇನಾದರೂ ಪ್ರಕೃತಿವಿಕೋಪ ಆಯ್ತು ಅಂತಿಟ್ಕೊಳ್ಳಿ, ಮಾರನೆಯ ದಿನ ಒಂದು ಪತ್ರಿಕೆಯಲ್ಲಾದರೂ "ಉತ್ತರ ತತ್ತರ" ಎಂಬ ಪದಪುಂಜ ಕಾಣಿಸಿಕೊಳ್ಳಲೇಬೇಕು! ಅಷ್ಟರಮಟ್ಟಿಗೆ ಕ್ಲೀಷೆ ಆಗಿಹೋಗಿವೆ ಅಂತಹ ಕೆಲವು ಪದಬಳಕೆಗಳು. ಇನ್ನೊಂದು ಅಂಥದ್ದೇ overuse ಆಗಿರುವುದು "ಎಲ್ಲರ ಚಿತ್ತ   ...ನತ್ತ" ಎಂಬ ತಲೆಬರಹ. ಮತ್ತೆ, ಇತ್ತೀಚಿನ "ಪರಮೂ ಗರಂ", "ಗೌಡರ ಗುಟುರು", ಗುನ್ನ-ಗೂಸಾ ಇತ್ಯಾದಿ. ಗುಟುರು ದೊಡ್ಡದಾದರೆ ಗುಡುಗು. ಮತ್ತೂ ದೊಡ್ಡದಾದರೆ ಘರ್ಜನೆ ಎಂದು ಕೂಡ ಬರೆಯುತ್ತಾರೆ (ಘರ್ಜನೆ ತಪ್ಪು, ಗರ್ಜನೆ ಸರಿ, ಆ ವಿಚಾರ ಇಲ್ಲಿ ಅಪ್ರಸ್ತುತ). ಒಟ್ಟಾರೆಯಾಗಿ ಶಬ್ದಮಾಲಿನ್ಯ. ವಸ್ತುಸ್ಥಿತಿಯನ್ನು ಸಮಚಿತ್ತದಿಂದ ಮತ್ತು ಸ್ಪಷ್ಟತೆ-ನಿಖರತೆಗಳಿಂದ ತಿಳಿಸಿ ಜವಾಬ್ದಾರಿ ಮೆರೆಯಬೇಕಿದ್ದ ಮಾಧ್ಯಮಗಳು ಇಂದು ಅದನ್ನು ಸಂಪೂರ್ಣ ಮರೆತಿವೆ. ಈಗೇನಿದ್ದರೂ ಅಬ್ಬರ ಆರ್ಭಟಗಳದೇ ದರಬಾರು. ರೋಚಕತೆ ಭಯೋತ್ಪಾದನೆಗಳೇ ಮುಖ್ಯ. ಎಲ್ಲಿಯವರೆಗೆಂದರೆ ಸುದ್ದಿವಾಹಿನಿಗಳ ನಿರೂಪಕರು ತಂತಮ್ಮ ಮನೆಗಳಲ್ಲೂ ಅಥವಾ ಯಾವುದಾದರೂ ಸಮಾರಂಭಗಳಲ್ಲಿ ಪಾಲ್ಗೊಂಡರೆ ಅಲ್ಲಿ ಬಂಧುಮಿತ್ರರೊಂದಿಗೂ ಅದೇ ಕರಾಳ ವಿಕಾರ ಧ್ವನಿಯಲ್ಲಿ ಮಾತಾಡ್ತಾರೇನೋ ಎಂದು "ಎಲ್ಲೋ ಒಂದ್ಕಡೆ" [😛] ಅನುಮಾನ ಬರುವಷ್ಟು ಕೆಟ್ಟುಹೋಗಿದೆ ನಮ್ಮ ಈಗಿನ ಮಾಧ್ಯಮಗಳ ವಾಕ್-ವೈಖರಿ.
====
೨. ಮಾನ್ಸೂನ್ ಮಳೆಮಾರುತ ಮತ್ತು ಪಾವೆಂ ಆಚಾರ್ಯರ ವಿಶ್ಲೇಷಣೆ
“ಹಿಂಗಾರು ಮತ್ತು ಮುಂಗಾರು ಮಳೆಗೆ ನಾವೀಗ ಇಂಗ್ಲಿಷ್‌ನ Monsoon ಪದವನ್ನು ಹೆಚ್ಚುಹೆಚ್ಚಾಗಿ ಬಳಸುತ್ತಿದ್ದೇವೆ. ಅದು ವಾಸ್ತವಿಕವಾಗಿ ಇಂಗ್ಲಿಷ್ ಪದವೇ ಅಲ್ಲ. ಇಂಗ್ಲೀಷಿನವರು ಪೋರ್ಚುಗೀಸರ ಮೋನ್‌ಶಾಂವ್ (moncao) ಪದವನ್ನು ತಮ್ಮ ನಾಲಗೆಗೆ ಸರಿಹೊಂದಿಸಿಕೊಂಡದ್ದು. ಪೋರ್ಚುಗೀಸರು ಮಲಯಿ ಭಾಷೆಯಿಂದ ಮೂಸಿಮ್ ಎಂದಿದ್ದದ್ದನ್ನು ತಮ್ಮ ನಾಲಗೆಗೆ ಅಳವಡಿಸಿಕೊಂಡದ್ದು. ಮಲಯಿ ಭಾಷೆಗೆ ಅರಬ್ಬಿಯ ‘ಮೊಸಿಮ್’ನಿಂದ ಬಂದದ್ದು. ಹಿಂದೀಯಲ್ಲಿ ಅದೇ ಮೌಸಮ್ ಆದದ್ದು. ಅರಬ್ಬಿಯಲ್ಲಿ ‘ಮೊಸಿಮ್’ ಎಂದರೆ ಕಾಲಕಾಲಕ್ಕೆ ಅಥವಾ ಋತುಮಾನಕ್ಕೆ ಅನುಸಾರವಾದದ್ದು ಎಂದರ್ಥ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ನೈಋತ್ಯದಿಂದ, ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಈಶಾನ್ಯದಿಂದ ಪ್ರತಿ ವರ್ಷ ಬೀಸುವ ಹಿಂದೂ ಸಾಗರದ ಗಾಳಿಗಳ ಗುಂಟ ಅರಬರು ಶತಮಾನಗಳ ಕಾಲದಿಂದ ಅರಬ್ಬಿ ಸಮುದ್ರವನ್ನು ಹಡಗುಗಳಲ್ಲಿ ಅಡ್ಡಹಾಯ್ದು ಭಾರತದ ಪಶ್ಚಿಮ ಕರಾವಳಿ ಮತ್ತು ಮಲಯ ಮೊದಲಾದ ಪೂರ್ವದೇಶಗಳೊಡನೆ ವ್ಯಾಪಾರ ನಡೆಸುತ್ತ ಇದ್ದರು. ಈ ಗಾಳಿಗಳ ಗುಂಟ ಸಾಗಿದರೆ ಕರಾವಳಿಯ ಗುಂಟ ಬರುವುದಕ್ಕಿಂತ ನೂರಾರು ಮೈಲು ಹತ್ತಿರವಾಗುತ್ತಿತ್ತು. ಪೋರ್ಚುಗೀಸರು ಆಫ್ರಿಕದ ಕೇಪ್ ಆಫ್ ಗುಡ್ ಹೋಪನ್ನು ಸುತ್ತುವರಿದು ಭಾರತ ಮತ್ತು ಪೂರ್ವ ಏಷ್ಯಾದ ದೇಶಗಳಿಗೆ ಬರಲು ಹವಣಿಸಿದಾಗ ಅವರಿಗೆ ಈ ಗಾಳಿಗಳ ಗುಟ್ಟು ತಿಳಿಯಿತು. ಮಲಯದಲ್ಲಿ ಅವರು ಈ ಗಾಳಿಗಳ ಅರಬ್ಬಿ ಹೆಸರನ್ನು ಹೆಕ್ಕಿಕೊಂಡರು."
ಇದಿಷ್ಟು ಇತಿಹಾಸವಿದೆ ಮೊಸಿಮ್ -> ಮೂಸಿಮ್ -> ಮೋನ್‌ಶಾಂವ್ -> ಮಾನ್ಸೂನ್  ಆದದ್ದರ ಹಿಂದೆ!  
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಶ್ಲೋಕಭಾಗಗಳು
ಅ) "ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ" ಸರಿ. ಕೊನೆಯ ಪದವನ್ನು ‘ಸರ್ವದ’ ಎಂದು ತಪ್ಪಾಗಿ ಬರೆದಿರುವುದು ಬಹಳ ಕಡೆಗಳಲ್ಲಿದೆ. ಬಹುಶಃ ಉಮಾ->ಉಮ, ಪ್ರತಿಭಾ->ಪ್ರತಿಭ, ಶೈಲಜಾ->ಶೈಲಜ ಎಂದು ಮುಂತಾಗಿ ‘ಆ’ಕಾರಾಂತಗಳನ್ನು ‘ಅ’ಕಾರಾಂತ ಮಾಡುವವರ ಕೆಲಸವಿದು. ‘ಸರ್ವದಾ’ ಎಂದರೆ ಎಲ್ಲ ಕಾಲದಲ್ಲೂ, ಯಾವಾಗಲೂ ಎಂದು ಅರ್ಥ. ಸರ್ವದ ಎಂದು ಬರೆದರೆ ಆ ಅರ್ಥ ಬರುವುದಿಲ್ಲ.
ಆ) "ವಸುಧೈವ ಕುಟುಂಬಕಮ್" ಸರಿ. ವಸುಧಾ + ಏವ = ವಸುಧೈವ. ವೃದ್ಧಿಸಂಧಿ. ವಸುಧಾ ಅಂದರೆ ಭೂಮಿ. ಇಡೀ ಭೂಮಿಯೇ ನಮ್ಮ ಕುಟುಂಬ ಎಂದು ಪರಿಗಣಿಸುವುದು. ‘ವಸುದೈವ’ ಎಂದು ಬರೆದರೆ ತಪ್ಪು.
ಇ) "ಸರ್ವೇ ಜನಾಃ ಸುಖಿನೋ ಭವಂತು" ಸರಿ. ಎಲ್ಲ ಜನರೂ ಸುಖಿಗಳಾಗಲಿ ಎಂದು ಅರ್ಥ. ‘ಸರ್ವೇ ಜನೋ ಸುಖಿನೋ...’ ಎಂದು ಕೆಲವರು ಬರೆಯುತ್ತಾರೆ ಅದು ತಪ್ಪು.
ಈ) “ವಾತಾತ್ಮಜಂ ವಾನರಯೂಥ ಮುಖ್ಯಂ" ಸರಿ. ಯೂಥ ಅಂದರೆ ಗುಂಪು, ಸಮೂಹ. ವಾನರಗಳ ಗುಂಪಿನಲ್ಲಿ ಮುಖ್ಯನಾದವನು ಹನುಮ ಎಂದು ಅರ್ಥ. ತುಂಬ ಕಡೆ ‘ವಾನರಯೂತ ಮುಖ್ಯಂ’ ಎಂದು ಅಚ್ಚಾದದ್ದಿರುತ್ತದೆ.
ಉ) “ಮಾಂಗಲ್ಯಂ ತಂತುನಾನೇನ ಮಮ ಜೀವನಹೇತುನಾ| ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ ಶರದಃ ಶತಮ್" ಇದು ಶ್ಲೋಕದ ಸರಿಯಾದ ರೂಪ. “ಓ ಪ್ರೀತಿಪಾತ್ರಳೇ, ನನ್ನ ಜೀವನಹೇತುವಾಗಿರುವ, ನನ್ನ ಬದುಕಿಗೊಂದು ಮುಖ್ಯವಾದ ಕಾರಣವಾಗಿರುವ, ಈ ನೂಲಿನಿಂದ ಕುತ್ತಿಗೆಗೆ ಮಾಂಗಲ್ಯವನ್ನು ಕಟ್ಟುತ್ತೇನೆ; ನೂರು ವರ್ಷ ಚೆನ್ನಾಗಿ (ನನ್ನೊಡನೆ) ಬಾಳು!" ಎಂದು ಅರ್ಥ. ಇದರಲ್ಲಿ ‘ಬಧ್ನಾಮಿ’ ಪದವನ್ನು ಗಮನಿಸಬೇಕು. ‘ಕಟ್ಟುತ್ತೇನೆ’ ಎಂದು ಅದರ ಅರ್ಥ. ಅನೇಕರು (ಕೆಲವು ಪುರೋಹಿತರು ಸಹ!) ಅದನ್ನು "ಭದ್ರಾಣಿ" ಎಂದು ಉಚ್ಚರಿಸುತ್ತಾರೆ/ಬರೆಯುತ್ತಾರೆ. ಅದು ತಪ್ಪು.
                                                            ಬರಹ:ಶ್ರೀವತ್ಸ ಜೋಶಿ-ವಾಶಿಂಗ್ಟನ್ ಡಿ.ಸಿ
                          FEEDBACK: samarasasudhi@gmail.com
===========

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries