ಮಂಜೇಶ್ವರ: ಕತೆ ಕೇಳುವ, ಹೇಳುವ ಅಭ್ಯಾಸ ಸೃಜನಶೀಲ ಮನಸ್ಸುಗಳನ್ನು ಸೃಷ್ಟಿಸುತ್ತವೆ ಎಂದು ಶಂಪಾ ಪ್ರತಿಷ್ಠಾನ ಬೆಂಗಳೂರು ಸಂಸ್ಥಾಪಕ, ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ ಹೇಳಿದರು.
ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ವತಿಯಿಂದ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ಗುರುವಾರ ಜರುಗಿದ 'ಕಥಾ ದೀಪ್ತಿ' ಸಂಪಾದಿತ ಕಥೆಗಳು ಕೃತಿ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಹಿಂದೆ ಹೆಚ್ಚಿನ ಮಕ್ಕಳು ಕಥೆ ಹೇಳಲು ಹಿರಿಯರಿಗೆ ದುಂಬಾಳು ಬೀಳುತ್ತಿದ್ದರು. ಕಥೆ ಮುಗಿದ ಬಳಿಕ ಕೂಡ ಹೇಳುತ್ತಿದ್ದ ಕಥೆಯನ್ನು ಬೆಳೆಸಿ (ಸೃಷ್ಟಿಸಿ) ಮಕ್ಕಳಿಗೆ ಹೇಳುವ ಸಾಮಥ್ರ್ಯವನ್ನು ಹಿರಿಯರು ಹೊಂದಿದ್ದರು ಎಂದು ಅವರು ತಿಳಿಸಿದರು.
ಕತೆಗಾಗಿ ಹಟ ಹಿಡಿಯುತ್ತಿದ್ದ ಸಣ್ಣ ಮಕ್ಕಳ ಕೈಗೆ ಇಂದು ಹಿರಿಯರು ಮೊಬೈಲ್ ಕೊಟ್ಟು ಸುಮ್ಮನಾಗಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಬದುಕು ಸುಂದರಗೊಳಿಸುವುದು, ಸ್ವಾಸ್ಥ್ಯ ಸಮಾಜ ರೂಪಿಸುವುದು ಎಲ್ಲ ಸಾಹಿತ್ಯ ಪ್ರಕಾರಗಳ ಆಶಯವಾಗಿದೆ ಎಂದು ಅವರು ಹೇಳಿದರು.
ಸತ್ವಶಾಲಿ ಸಾಹಿತ್ಯ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು, ಸಾಹಿತ್ಯಕ್ಕಾಗಿ ಸಾಹಿತ್ಯ ರಚಿಸದೆ, ಸತ್ವಶಾಲಿ ಕೃತಿಗಳು ಹೆಚ್ಚು ಬರಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು, ನೂತನ 25 ಲೇಖಕರ 25 ಕತೆಗಳು ಇರುವ ನೂತನ ಕೃತಿಯು ವೈವಿಧ್ಯಮಯವಾಗಿದೆ. ಪ್ರತೀ ಕತೆಯೂ ತನ್ನದೇ ಆಗಿರುವ ಆಯಾಮ, ಸೊಬಗನ್ನು ಒಳಗೊಂಡಿದೆ ಎಂದರು.
ಕಾಸರಗೋಡಿನ ಲೇಖಕರು ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಕವಿ ಕಿಞ್ಞಣ್ಣ ರೈ, ಎಂ.ವ್ಯಾಸ, ಕೆ.ಟಿ.ಶ್ರೀಧರ್, ಶಶಿ ಭಾಟಿಯಾ ಮುಂತಾದ ಮಹತ್ವದ ಲೇಖಕರನ್ನು ಕಾಸರಗೋಡು ಜಿಲ್ಲೆಯಲ್ಲಿ ಗುರುತಿಸಬಹುದು ಎಂದು ಹೇಳಿದರು.
ಸಾಹಿತಿ ಮಧುರಕಾನನ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್. ಮೂಡಿತ್ತಾಯ ಮುಖ್ಯ ಅತಿಯಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ವ್ಯಂಗ್ಯಚಿತ್ರಕಾರ ವೆಂಕಟ್ ಭಟ್ ಎಡನೀರು ಸ್ವಾಗತಿಸಿದರು. ಸವಿಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಕಾಂತಾವರ ಕನ್ನಡ ಸಂಘದ ಕಾಂತಾವರ ಸಾಹಿತ್ಯ ಪುರಸ್ಕಾರ ಪಡೆದ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರನ್ನು ಸನ್ಮಾನಿಸಲಾಯಿತು. ಹರ್ಷಿತಾ ಪೆರ್ಲ ಪ್ರಾರ್ಥನೆ ಹಾಡಿದರು. ಪ್ರೇಮಾ ಉದಯಕುಮಾರ್ ವಂದಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ಮತ್ತು ಪವಿತ್ರಾ ದಿನೇಶ್ ಕೊಕ್ಕಡ ನಿರೂಪಿಸಿದರು.

.jpg)
.jpg)
.jpg)
