ಬದಿಯಡ್ಕ: ಮಾಲಿನ್ಯದಿಂದ ಸ್ವತಂತ್ರರಾಗಬೇಕು, ಎಲ್ಲೆಂದರಲ್ಲಿ ಮಾಲಿನ್ಯಗಳನ್ನು ಎಸೆಯಬಾರದು ಎಂಬ ಸಂದೇಶದೊಂದಿಗೆ ಬದಿಯಡ್ಕ ಗ್ರಾಮಪಂಚಾಯಿತಿ ಮಟ್ಟದ `ಹಸಿರು ನಿಬಂಧನೆಗಳ ಕಾರ್ಯಾಗಾರ'ವು ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಬದಿಯಡ್ಕ ಗ್ರಾಮಪಂಚಾಯಿತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಉದ್ಘಾಟಿಸಿ ಮಾತನಾಡಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಮಾಲಿನ್ಯಗಳಿಂದ ಅನೇಕ ರೋಗಗಳ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಿದ್ದು ಎಲ್ಲೆಂದರಲ್ಲಿ ಮಾಲಿನ್ಯಗಳನ್ನು ಎಸೆಯುವುದಕ್ಕೆ ಕಡಿವಾಣ ಹಾಕಬೇಕಾಗಿದೆ. ಜನರ ಆರೋಗ್ಯ ಜಾಗೃತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಸರ್ಕಾರವು ಹಮ್ಮಿಕೊಳ್ಳುತ್ತಿದ್ದು ಇದನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮಗೂ ನಾಡಿಗೂ ಉತ್ತಮ ಆರೋಗ್ಯಭಾಗ್ಯವನ್ನು ಒದಗಿಸಬೇಕು ಎಂದರು.
ಕುಟುಂಬಶ್ರೀ ಸಿಡಿಎಸ್ ಸಂಚಾಲಕಿ ಸುಧಾ ಜಯರಾಂ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಆರೋಗ್ಯ ಅಧಿಕಾರಿ ವಿನೋದ್ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ಬದಿಯಡ್ಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರದೀಪ್ ಸ್ವಾಗತಿಸಿ, ವಂದಿಸಿದರು. ಎಡಿಎಸ್, ಸಿಡಿಎಸ್, ಆಶಾಕಾರ್ಯಕರ್ತೆಯರು, ವಿವಿಧ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

