ಕಾಸರಗೋಡು: ಧಾರ್ಮಿಕ ವಿಧಿವಿಧಾನದ ಸಮಯದಲ್ಲಿ ತೆಯ್ಯಂ ಹೊಡೆದು ಯುವಕ ಕುಸಿದು ಬಿದ್ದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನ ನೀಲೇಶ್ವರದಲ್ಲಿ ತೆಯ್ಯಂ ಮರದ ಗುರಾಣಿಯಿಂದ ತಲೆಗೆ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ನೀಲೇಶ್ವರದ ರೈಲ್ವೆ ರಸ್ತೆ ಮೇಲ್ಸೇತುವೆಯ ಬಳಿಯ ಪಲ್ಲಿಕ್ಕರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದಲ್ಲಿ ಪೂಮಾರುತನ್ ದೇವರ 'ವೆಲ್ಲಟ್ಟಂ' ಆಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ತೆಯ್ಯಂ ವೇಷಧಾರಿ ಮಾರ್ಗ ಮಧ್ಯೆ ನಿಂತಿದ್ದ ವ್ಯಕ್ತಿಯೊಂದಿಗೆ ಗಲಾಟೆಯಾಗಿದ್ದು, ಈ ವೇಳೆ ತೆಯ್ಯಂ ವೇಷಧಾರಿ ಗುರಾಣಿಯಿಂದ ಬಡಿದಿದ್ದಾರೆ. ಈ ವೇಳೆ ಯುವಕ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಯುವಕನನ್ನು ಆರೈಕೆ ಮಾಡಿದ್ದು, ಈ ವೇಳೆ ಅದೃಷ್ಟವಶಾತ್ ಯುವಕ ಅಪಾಯದಿಂದ ಪಾರಾಗಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಧಾರ್ಮಿಕ ವಿಧಿವಿಧಾನದ ರೂಪವಾದ ತೆಯ್ಯಂನಲ್ಲಿ, ಕಲಾವಿದ ಸಾಂಪ್ರದಾಯಿಕವಾಗಿ ಒಂದು ಕೈಯಲ್ಲಿ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ಮರದ ಗುರಾಣಿಯನ್ನು ಹಿಡಿದಿರುತ್ತಾರೆ. ಪ್ರದರ್ಶನವು ಗುರಾಣಿಯನ್ನು ತಿರುಗಿಸುವುದು ಮತ್ತು ಕತ್ತಿಯನ್ನು ಲಯಬದ್ಧವಾಗಿ ಬೀಸುವುದು ಸೇರಿದಂತೆ ಹುರುಪಿನ ಚಲನೆಗಳಿಂದ ಗುರುತಿಸಲ್ಪಟ್ಟಿದ್ದಾಗಿರುತ್ತದೆ.
ಸಾಂಪ್ರದಾಯಿಕ ಅಭ್ಯಾಸದ ಭಾಗವಾಗಿ, ತೆಯ್ಯಂ ಕಲಾವಿದ ದೇವಾಲಯಕ್ಕೆ ಸಂಬಂಧಿಸಿದ ಧಾರ್ಮಿಕ ಸಹಾಯಕರಾದ 'ವಲ್ಯಕರ್'ಗಳನ್ನು ಮತ್ತು ಕೆಲವೊಮ್ಮೆ ಗುರಾಣಿಯೊಂದಿಗೆ ನೋಡುಗರನ್ನು ಸಹ ಹೊಡೆಯುತ್ತಾನೆ. 'ವಲ್ಯಕರ್'ಗಳು ಸಾಮಾನ್ಯವಾಗಿ ಕಲಾವಿದನ ಸುತ್ತಲೂ ಒಟ್ಟುಗೂಡುತ್ತಾರೆ, ಹೊಡೆತಗಳನ್ನು ಸ್ವೀಕರಿಸಲು ಮತ್ತು ಆಚರಣೆಯ ತೀವ್ರತೆಯನ್ನು ಹೆಚ್ಚಿಸಲು ಕೂಗುತ್ತಾರೆ ಮತ್ತು ಒತ್ತಾಯಿಸುತ್ತಾರೆ ಎಂದು ನಿವಾಸಿಗಳು ಹೇಹೇಳಿದರು.
ಆದರೆ, ಶನಿವಾರದ ಪ್ರದರ್ಶನದ ಸಮಯದಲ್ಲಿ, ಪೂಮಾರುತನ್ ತೆಯ್ಯಂ ಹಿಡಿದಿದ್ದ ಮರದ ಗುರಾಣಿ ನಿವಾಸಿ ಮನು ಎಂಬುವವ ತಲೆಗೆ ಬಡಿದು ಗಾಯಗೊಳಿಸಿತು. ಮನು ತಕ್ಷಣವೇ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡರು. ಇತರ ಭಕ್ತರು 'ವೆಲ್ಲಟ್ಟಂ' ನಿಲ್ಲಿಸಿ ರಕ್ಷಣಾ ಪ್ರಯತ್ನಗಳನ್ನು ಪ್ರಾರಂಭಿಸಿದರು.

