ನವದೆಹಲಿ: ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವಿನ ಅಪವಿತ್ರ ಸಂಬಂಧದ ಬಗ್ಗೆ ಕೇಳಿರುತ್ತೇವೆ. ಆದರೆ, ಕೇರಳದ ತಿರುವನಂತಪುರದ ಈ ಲವ್ ಸ್ಟೋರಿ ರಾಜಕಾರಣಿ ಮತ್ತು ಐಎಎಸ್ ಅಧಿಕಾರಿ ನಡುವಿನ ಪವಿತ್ರ ವೈವಾಹಿಕ ಸಂಬಂಧದ ಬಗ್ಗೆ ತಿಳಿಸುತ್ತದೆ.
ತುಂಬಾ ಅಪರೂಪದ ಪ್ರಕರಣ ಇದಾಗಿದೆ.
ಕೇರಳ ಕೇಡರ್ನ ಐಎಸ್ಎಸ್ ಅಧಿಕಾರಿ ದಿವ್ಯಾ ಎಸ್ ಐಯ್ಯರ್ ಮತ್ತು ಕಾಂಗ್ರೆಸ್ ನಾಯಕ ಕೆ.ಎಸ್. ಶಬರಿನಾಥನ್ ಲವ್ ಸ್ಟೋರಿ ಬಹಳ ವಿಶೇಷವಾಗಿದೆ. ವರದಿಗಳ ಪ್ರಕಾರ, ತಿರುವನಂತಪುರಂನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭೇಟಿಯಾದ ನಂತರ ದಿವ್ಯಾ ಮತ್ತು ಶಬರಿನಾಥನ್ ನಡುವೆ ಪ್ರೀತಿ ಅರಳಿತು. ಇಬ್ಬರು 2017 ರಲ್ಲಿ ವಿವಾಹವಾದರು ಮತ್ತು ದಂಪತಿಗೆ ಓರ್ವ ಗಂಡು ಮಗು ಇದ್ದಾನೆ. ಇಬ್ಬರ ಮದುವೆ ಆ ಸಮಯದಲ್ಲಿ ರಾಜ್ಯದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿತ್ತು.
ಮಾಧ್ಯಮ ಸಂದರ್ಶನದಲ್ಲಿ ತಮ್ಮ ಮೊದಲ ಭೇಟಿಯ ಕುರಿತು ಮಾತನಾಡಿರುವ ದಿವ್ಯಾ, ನಾನು ಮೊದಲು ಕೆಲವು ಅಧಿಕೃತ ಕೆಲಸದ ಉದ್ದೇಶಗಳಿಗಾಗಿ ತಿರುವನಂತಪುರಂನಲ್ಲಿರುವ ಕಲೆಕ್ಟರೇಟ್ ಕಾನ್ಫರೆನ್ಸ್ ಹಾಲ್ ಆವರಣದಲ್ಲಿ ಶಬರಿ ಅವರನ್ನು ಭೇಟಿಯಾಗಿದ್ದೆ. ಆದರೆ, ಅ ಭೇಟಿಯಲ್ಲಿ ವಿಶೇಷವೇನೂ ಇರಲಿಲ್ಲ. ನಂತರ, ನಾನು ನಡೆಸಿದ ವೈದ್ಯಕೀಯ ಶಿಬಿರದ ಸಮಯದಲ್ಲಿ, ಅವರು ತಮ್ಮ ಕ್ಷೇತ್ರದ ಕೊಟ್ಟೂರು ಗಿರಿಜನರಿಗೆ ಇರುವ ಕೆಲವು ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಚರ್ಚಿಸಲು ನನಗೆ ಫೋನ್ ಮಾಡಿದರು. ಈ ಸಂಭಾಷಣೆಯ ನಂತರ, ನಾವು ಸ್ನೇಹಿತರಾದೆವು ಮತ್ತು ನಮ್ಮ ಸಾಮಾನ್ಯ ಆಸಕ್ತಿಗಳನ್ನು ಅರಿತುಕೊಳ್ಳಲು ಪ್ರಾರಂಭಿಸಿದೆವು. ನಮ್ಮ ಪರಸ್ಪರ ಆಸಕ್ತಿಗಳು ಮತ್ತು ಸ್ನೇಹವು ನಾವು ಒಬ್ಬರಿಗೊಬ್ಬರು ಜೊತೆಯಾಗಲು ಹೇಳಿ ಮಾಡಿಸಿದಂತಿದೆ ಎಂಬುದನ್ನು ಅರ್ಥ ಮಾಡಿಸಿತು. ನಂತರ ಇಬ್ಬರು ಪ್ರೀತಿಸಲು ಶುರು ಮಾಡಿದೆವು ಮತ್ತು ಮದುವೆ ಆದೆವು ಎಂದು ತಿಳಿಸಿದರು.
ಅಂದಹಾಗೆ ದಿವ್ಯಾ ಮೊದಲು ವೈದ್ಯೆಯಾಗಿದ್ದರು. ಆ ಬಳಿಕ ಯುಪಿಎಸ್ಸಿ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿದ್ದಾರೆ. ಅಲ್ಲದೆ, ತರಬೇತಿ ಪಡೆದ ಕ್ಲಾಸಿಕಲ್ ಡಾನ್ಸರ್ ಮತ್ತು ನಟಿಯು ಹೌದು. ಕೊಟ್ಟಾಯಂ ಮತ್ತು ತಿರುವನಂತಪುರಂನಲ್ಲಿ ತಮ್ಮ ವೃತ್ತಿಜೀವನದ ಸಮಯದಲ್ಲಿ ಈಗಾಗಲೇ ಜನರ ಹೃದಯವನ್ನು ಗೆದ್ದಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗದ ಪ್ರಚಾರಕ್ಕಾಗಿ ಅವರ ಹಾಡುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸಿಸಲ್ಪಟ್ಟವು.
ಕೆಎಸ್ ಶಬರಿನಾಥನ್ ಅವರು ಕೇರಳ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದಾರೆ. ಅವರು 2015 ರಿಂದ 2021 ರವರೆಗೆ ಅರುವಿಕ್ಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ಅವರು ಯುವ ಕಾಂಗ್ರೆಸ್ನ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಅಸೆಂಬ್ಲಿ ಸ್ಪೀಕರ್ ಆಗಿದ್ದ ತಮ್ಮ ತಂದೆ ಜಿ.ಕಾರ್ತಿಕೇಯನ್ 2015 ರಲ್ಲಿ ನಿಧನರಾದ ನಂತರ ಶಬರಿನಾಥನ್ ರಾಜಕೀಯ ಪ್ರವೇಶಿಸಿದರು. ಗಮನಾರ್ಹವೆಂದರೆ, ಶಬರಿನಾಧನ್ ಅವರು ತನ್ನ ತಂದೆ ಐದು ಬಾರಿ ಪ್ರತಿನಿಧಿಸಿದ್ದ ಅರುವಿಕರ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಮುಖ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯನ್ನು ತೊರೆದರು.


