ಕಾಸರಗೋಡು: ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ ವಿದ್ಯುತ್ ಅಡುಗೆ ಗುರಿಯಾಗಿರಿಸಿಕೊಂಡು 'ಆಂಗನ್ ಜ್ಯೋತಿ' ಯೋಜನೆಯನ್ನು ಜಿಲ್ಲೆಯ 11 ಪಂಚಾಯತ್‍ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಕಾರ್ಬನ್ ಹೊರಸೂಸುವಿಕೆಯನ್ನು ಕಡಿತಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಅಂಗನವಾಡಿಗಳಲ್ಲಿ ವಿದ್ಯುತ್ ಅಡುಗೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಜನತೆಯ ಮೂಲಕ ನೆಟ್ ಜೀರೋ ಕಾರ್ಬನ್ ಎಮಿಷನ್ ಎಂಬ ಅಭಿಯಾನದ ಅಂಗವಾಗಿ ರಾಜ್ಯ ಎನರ್ಜಿ ಮ್ಯಾನೇಜ್ ಮೆಂಟಿನ ನೆರವಿನೊಂದಿಗೆ ಆಂಗನ್ ಜ್ಯೋತಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ವಲಿಯಪರಂಬ್, ತೃಕರಿಪೂರ್, ಪಿಲಿಕ್ಕೋಡ್, ಚೆರುವತ್ತೂರು, ಕಿನಾನೂರು-ಕರಿಂತಳಂ, ಬೇಡಡ್ಕ, ಮಡಿಕೈ, ಪುಲ್ಲೂರು-ಪೆರಿಯ, ಮುಳಿಯಾರ್, ದೇಲಂಪಾಡಿ, ಪುತ್ತಿಗೆ ಗ್ರಾಮ ಪಂಚಾಯಿತಿಗಳನ್ನು ಪ್ರಸಕ್ತ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಈ ಪಂಚಾಯಿತಿಗಳಲ್ಲಿರುವ ಅಂಗನವಾಡಿಗಳನ್ನು ಕೇಂದ್ರೀಕರಿಸಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುವುದು. ಮೊದಲ ಹಂತದಲ್ಲಿ ವಿದ್ಯುತ್ ಒಲೆಯನ್ನೊಳಗೊಂಡ ಅಡುಗೆ ಕೊಠಡಿಯನ್ನಾಗಿ ಪರಿವರ್ತಿಸಲು ಸಲಕರಣೆಗಳನ್ನು ಒದಗಿಸಲಾಗುವುದು. ಅಂಗನವಾಡಿಗಳಲ್ಲಿ ಇಂಡಕ್ಷನ್ ಕುಕ್ಕರ್‍ಗಳು, ಅನುಬಂಧ ಪಾತ್ರೆಗಳು, ಇಂಧನ ದಕ್ಷ ಬಿ.ಎಲ್.ಡಿ.ಸಿ ಫ್ಯಾನುಗಳು, ರೀಚಾರ್ಜ್ ಪಾಯಿಂಟ್ ಮುಂತಾದವುಗಳನ್ನು ಅಳವಡಿಸಲಾಗುವುದು. ನವಕೇರಳ ಕ್ರಿಯಾ ಯೋಜನೆಯಯನ್ವಯ ಆಯ್ಕೆ ಮಾಡಲಾದ ಹನ್ನೊಂದು ಪಂಚಾಯಿತಿಗಳಲ್ಲಿ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ. ಈ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಅಂಗನವಾಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಕಾರ್ಬನ್ ಹೊರಸೂಸುವಿಕೆಯ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಮನೆಗಳ ಕಾರ್ಬನ್ ಹೊರಸೂಸುವಿಕೆಯ ಲೆಕ್ಕಾಚಾರ ಮಾಡಲು ಸಮೀಕ್ಷೆಯನ್ನೂ ಪ್ರಾರಂಭಿಸಲಾಗಿದೆ. ಮುಂದಿನ ಹಂತದಲ್ಲಿ ಆಯ್ದ ಸರ್ಕಾರಿ ಸಂಸ್ಥೆಗಳಲ್ಲಿ ಸೌರಶಕ್ತಿ ಪಾನಲ್ ಅಳವಡಿಸಲಾಗುವುದು ಎಂದು ನವಕೇರಳ ಕ್ರಿಯಾ ಯೋಜನೆ ಜಿಲ್ಲಾ ಕೋರ್ಡಿನೇಟರ್ ಕೆ.ಬಾಲಕೃಷ್ಣನ್ ತಿಳಿಸಿದ್ದಾರೆ.


