ನವದೆಹಲಿ: ಎಂಟು ಅಗತ್ಯ ಔಷಧಗಳ ಬೆಲೆಯನ್ನು ಏರಿಕೆ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (ಎನ್ಪಿಪಿಎ) ನಿರ್ಧರಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಮಾಣಿಕಮ್ ಟಾಗೋರ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
0
samarasasudhi
ನವೆಂಬರ್ 02, 2024
ನವದೆಹಲಿ: ಎಂಟು ಅಗತ್ಯ ಔಷಧಗಳ ಬೆಲೆಯನ್ನು ಏರಿಕೆ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (ಎನ್ಪಿಪಿಎ) ನಿರ್ಧರಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಮಾಣಿಕಮ್ ಟಾಗೋರ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಜನಸಾಮಾನ್ಯರು ಸಾಮಾನ್ಯವಾಗಿ ಬಳಸುವ 8 ಔಷಧಿಗಳ ಬೆಲೆಯನ್ನು ಶೇ 50 ರಷ್ಟು ಏರಿಕೆ ಮಾಡಲು ಎನ್ಪಿಪಿಎ ನಿರ್ಧರಿಸಿದೆ. ಈ ಸಂಬಂಧ ಟಾಗೋರ್ ಅವರು ಅಕ್ಟೋಬರ್ 25ರಂದು ಪತ್ರ ಬರೆದಿದ್ದಾರೆ.
'ಸರ್ಕಾರವು ಬೆಲೆ ಏರಿಕೆ ನಿಟ್ಟಿನಲ್ಲಿ 'ವಿಶೇಷ ಸಂದರ್ಭ' ಮತ್ತು 'ಸಾರ್ವಜನಿಕ ಹಿತಾಸಕ್ತಿ' ಎಂಬ ಕಾರಣಗಳನ್ನು ನೀಡಿದೆ. ಇಂತಹ ಮಹತ್ವದ ನಿರ್ಧಾರದ ಹಿಂದಿನ ತರ್ಕ ಏನು ಎಂಬುದನ್ನು ಸ್ಪಷ್ಟಪಡಿಸುವುದು ಮಹತ್ವದ್ದಾಗಿದೆ' ಎಂದು ಟಾಗೋರ್ ಒತ್ತಿಹೇಳಿದ್ದಾರೆ.
'ಅಸ್ತಮಾ, ಕ್ಷಯ, ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ಕಣ್ಣಿನ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳೂ ಸೇರಿದಂತೆ ಅತ್ಯಗತ್ಯವಾಗಿರುವ ಇನ್ನಷ್ಟು ಔಷಧಗಳನ್ನು ಬಳಸುವ ಲಕ್ಷಾಂತರ ನಾಗರಿಕರಿಗೆ ಈ ಬೆಲೆ ಏರಿಕೆ ಪರಿಣಾಮ ಬೀರಲಿದೆ' ಎಂದು ಪ್ರತಿಪಾದಿಸಿದ್ದಾರೆ.
ದೇಶದ ಸಾಕಷ್ಟು ರೋಗಿಗಳು ಮತ್ತು ಕುಟುಂಬಗಳು ಅಗತ್ಯ ಚಿಕಿತ್ಸೆಗಳನ್ನು ಪಡೆಯಲು ಈಗಾಗಲೇ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ ಎಂದೂ ತಿಳಿಸಿದ್ದಾರೆ.
ಔಷಧಿಗಳ ಬೆಲೆಯನ್ನು ಏಕಾಏಕಿ ಏರಿಕೆ ಮಾಡುವುದರಿಂದ, ಜನಸಾಮಾನ್ಯರಿಗೆ ಹೆಚ್ಚುವರಿಹೊರೆ ಬೀಳಲಿದೆ. ಇದು ಅವರ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಉಂಟುಮಾಡಲಿದೆ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
'ಈ ರೀತಿಯ ಬೆಲೆ ಏರಿಕೆಗೆ ಕಾರಣವಾದ ವಿಶೇಷ ಸಂದರ್ಭದ ಬಗ್ಗೆ ಹೆಚ್ಚಿನ ವಿವರಣೆ ನೀಡಬೇಕು. ಮಾತ್ರವಲ್ಲದೆ, ದರ ಏರಿಕೆಯಿಂದ ರೋಗಿಗಳು ಹಾಗೂ ಔಷಧ ಪೂರೈಕೆದಾರರ ಮೇಲೆ ಉಂಟಾಗುವ ನೈಜ ಪರಿಣಾಮಗಳನ್ನು ನಿರ್ಣಹಿಸಲು ಸ್ವತಂತ್ರ ಪರಿಶೀಲನಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸುತ್ತೇನೆ' ಎಂದಿದ್ದಾರೆ.