ಕಾಸರಗೋಡು: ಕೇರಳ ಮತ್ತು ಕರ್ನಾಟಕದಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ ಶಾಮೀಲಾಗಿರುವ ಇಬ್ಬರು ಮಹಿಳೆಯರನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಮಿಳ್ನಾಡು ಮಧುರೈ ನಿವಾಸಿ ಕವಿತಾ(40)ಹಾಗೂ ಮಧುರೈ ಗಾಂಧಿನಗರದ ಕಸ್ತೂರಿ(36)ಬಂಧಿತರು.
ಪ್ರಯಾಣಿಕರಿಂದ ತುಂಬಿಕೊಂಡಿರುವ ಬಸ್‍ಗಳಿಗೆ ಏರಿ ಮಹಿಳಾ ಪ್ರಯಾಣಿಕರು ಮತ್ತು ಮಕ್ಕಳ ಕತ್ತಿನಿಂದ ಚಿನ್ನದ ಸರ ಎಗರಿಸುವ ತಂಡ ಇದಾಗಿದೆ. ಹೊಸದುರ್ಗದಲ್ಲಿ ಬಸ್ ಪ್ರಯಾಣದ ಮಧ್ಯೆ ಲಕ್ಷ್ಮೀ ಎಂಬ ಪ್ರಯಾಣಿಕೆಯ ಕತ್ತಿನಿಂದ ಎರಡು ಪವನಿನ ಚಿನ್ನದ ಸರ ಕಸಿದ ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿದೆ. ಬಸ್ಸಿನ ಸಿಸಿ ಟಿವಿ ದೃಶ್ಯಾವಳಿ ತಪಾಸಣೆ ನಡೆಸಿದಾಗ ಕಳ್ಳಿಯರ ಬಗ್ಗೆ ಮಾಹಿತಿ ಲಭಿಸಿದೆ. ಈ ಇಬ್ಬರೂ ಮಹಿಳೆಯರು ಪ್ರಯಾಣಿಕರ ದಟ್ಟಣೆಯಿಂದ ಕೂಡಿದ ಬಸ್‍ಗಳಲ್ಲಿ ಸಂಚರಿಸುತ್ತಿರುವ ದೃಶ್ಯಾವಳಿ ಸಿಸಿ ಕ್ಯಾಮರಾ ಅಳವಡಿಸಿರುವ ಬಸ್‍ಗಳಿಂದ ಲಭ್ಯವಾಗಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಕಣ್ಣೂರು, ಮಣ್ಣಾರ್‍ಕಾಡ್, ತಿರೂರಂಗಾಡಿ, ವಡಗರ, ಕೊಯಿಲಾಂಡಿ, ತಲಶ್ಯೇರಿ, ಕೂತುಪರಂಬ ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಕೇಸು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

