ಕಾಸರಗೋಡು: ಭಾರತದಲ್ಲಿ ಬಲಗೊಳ್ಳುತ್ತಿರುವ ಧರ್ಮಾಧಾರಿತ ಉಗ್ರಗಾಮಿ ಶಕ್ತಿಗಳ ವಿರುದ್ಧ ಸಮಾಜವು ಪ್ರಬಲವಾಗಿ ಪ್ರತಿಕ್ರಿಯಿಸಲು ಸಿದ್ಧವಾಗಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್ ತಿಳಿಸಿದ್ದಾರೆ.
ಅವರು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ವಿರುದ್ಧ ಬಿಜೆಪಿ ಉದುಮ ಮಂಡಲ ಸಮಿತಿಯು ಉದುಮದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಶ್ಮೀರಕ್ಕೆ ಸೀಮಿತವಾಗಿದ್ದ 370 ನೇ ವಿಧಿಯನ್ನು ಸಂವಿಧಾನದಿಂದ ತೆಗೆದುಹಾಕಿದ ನಂತರ ಶಾಂತಿಯುತವಾಗಿದ್ದ ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಯಿಂದ ಅಶಾಂತಿ ಹುಟ್ಟುಹಾಕಲು ಯತ್ನಿಸಿರುವುದು ಖಂಡನೀಯ. ಹೆಸರು ಕೇಳಿ, ಧಾರ್ಮಿಕ ಪ್ರೇರಿತವಾಗಿ ನಡೆದ ಪ್ರವಾಸಿಗರ ಹತ್ಯೆಯ ಭಯಾನಕ ಘಟನೆಯಿಂದ ಸಾವಿಗೀಡಾದವರಿಗೆ ದೇಶದ ಜನತೆ ಮರುಗುವಂತಾಗಿದೆ.
ಭಯೋತ್ಪಾದಕ ಶಕ್ತಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಠಿಣ ಕ್ರಮ ಕೈಗೊಳ್ಳುವ ಕೆಚ್ಚೆದೆಯ ಆಡಳಿತಗಾರನಾಗಿದ್ದು, ಭಯೋತ್ಪಾದಕ ಶಕ್ತಿಗಳ ವಿರುದ್ಧ ಬಲವಾದ ಕ್ರಮ ಕೈಗೊಳ್ಳುವಂತೆ ಬಾಬುರಾಜ್ ಒತ್ತಾಯಿಸಿದರು. ಮಂಡಲ ಸಮಿತಿ ಅಧ್ಯಕ್ಷೆ ಶೈನಿ ಮೋಲ್ ಶಶಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮಿತಿ ಉಪಾಧ್ಯಕ್ಷ ತಂಬಾನ್ ಆಚೇರಿ, ಎಂ.ಸದಾಶಿವನ್, ಕೆ.ಕಾತ್ರ್ಯಾಯಿನಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳು ಮುರಳೀಧರನ್ ನಾಯರ್ ಸ್ವಾಗತಿಸಿದರು. ಮತ್ತು ಪ್ರದೀಪ್ ಎಂ. ಕೂಟಕಣಿ ವಂದಿಸಿದರು.


