ನವದೆಹಲಿ: ಗರ್ಭಿಣಿ ಸೊಸೆ ಕುಸುಮ್ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಅತ್ತೆ ಶಕುಂತಲಾ ದೇವಿ ಅವರಿಗೆ ಜೈಲುಶಿಕ್ಷೆ ವಿಧಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
'ಇಂಥ ಹೆಚ್ಚಿನ ಪ್ರಕರಣಗಳಲ್ಲಿ ಅನಗತ್ಯವಾಗಿ ಅತ್ತೆ ಅಥವಾ ಗಂಡನ ಕುಟುಂಬದ ಮೇಲೆ ಆರೋಪ ಹೊರಿಸಲಾಗುತ್ತದೆ.
ಆದರೆ, ಈ ಪ್ರಕರಣದಲ್ಲಿ ಅನಗತ್ಯವಾಗಿ ಯಾರು ಮೇಲೂ ಆರೋಪ ಹೊರಿಸಲಾಗಿಲ್ಲ' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರು ಈ ಬಗ್ಗೆ ಏ.25ರಂದು ತೀರ್ಪು ನೀಡಿದ್ದಾರೆ. 2018ರಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ 70 ವರ್ಷದ ಶಕುಂತಲಾ ದೇವಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಆಕೆ ಮೇಲಿದ್ದ ವರದಕ್ಷಿಣೆ ಪ್ರಕರಣವನ್ನು ಕೈಬಿಟ್ಟಿದ್ದ ಹೈಕೋರ್ಟ್, ಸೊಸೆಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ವಿಚಾರಕ್ಕೆ ಶಿಕ್ಷೆ ವಿಧಿಸಿತ್ತು. ಆಕೆಯ ವಯಸ್ಸನ್ನು ಗಮನದಲ್ಲಿ ಇರಿಸಿಕೊಂಡು ಶಕುಂತಲಾ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆತ್ಮಹತ್ಯೆ ಘಟನೆಯು 1998ರ ಮೇ 4ರಂದು ನಡೆದಿತ್ತು.
ಅತ್ತೆಯು ₹25 ಸಾವಿರ ಮತ್ತು ಬಂಗಾರ ಸರವೊಂದನ್ನು ಕೇಳುತ್ತಿದ್ದಾರೆ ಎಂದು ಕುಸಮ್ ಅವರು ತವರು ಮನೆಗೆ ತೆರಳಿದ್ದರು. ವರದಕ್ಷಿಣೆ ವಿಚಾರವನ್ನು ಸರಿಪಡಿಸುವುದಾಗಿ ಪೋಷಕರ ಭರವಸೆ ನೀಡಿದ ಬಳಿಕವೇ ಕುಸುಮ್ ಅವರು ಗಂಡನ ಮನೆಗೆ ವಾಪಸಾಗಿದ್ದರು. ಶಕುಂಕಲಾ ದೇವಿ ಅವರು ವರದಕ್ಷಿಣೆ ಕುರಿತು ಪದೇ ಪದೇ ಮಾತಿನ ಮೂಲಕ ಕಿರುಕುಳ ನೀಡುತ್ತಲೇ ಇದ್ದರು ಎನ್ನುವ ಎಲ್ಲ ವಿಚಾರಗಳು ಎಎಫ್‌ಐಆರ್ ಸೇರಿದಂತೆ ಪುರಾವೆಗಳ ಮೂಲಕವೂ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

