ಕೊಚ್ಚಿ: ಕೇರಳದಲ್ಲಿ ತೈಲ ತುಂಬಿದ ಕಂಟೇನರ್‌ಗಳನ್ನು ಹೊಂದಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗು ಮುಳುಗಡೆಯಾಗಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ.
ಅಪಾಯಕಾರಿ ಪರಿಸ್ಥಿತಿಯಲ್ಲೂ ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಜಾತಾ ಹಡಗು, ಮತ್ತೆ ಮೂವರು ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎನ್‌ಎಸ್ ಸುಜಾತಾ ಸಹಾಯದಿಂದ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಸರಕು ಸಾಗಣೆ ಹಡಗಿನಿಂದ ಮತ್ತಷ್ಟು ಕಂಟೇನರ್‌ಗಳು ಸಮುದ್ರ ಪಾಲಾಗಿವೆ. ಹಡಗು ಮತ್ತಷ್ಟು ವಾಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆ ಹಡಗನ್ನು ಮೇಲೆಕ್ಕೆತ್ತಲು ಪ್ರಯತ್ನ ನಡೆಸಿತ್ತು. ಹಡಗು ಸಮೀಪದಲ್ಲೇ ಐಎನ್‌ಎಸ್ ಸುಜಾತಾ ಇದ್ದು, ಪರಿಸ್ಥಿತಿ ಮೇಲೆ ನಿಗಾ ವಹಿಸುತ್ತಿದೆ.
ಲೈಬೀರಿಯಾ ಧ್ವಜ ಹೊತ್ತಿದ್ದ ಹಡಗು ವಿಝಿಂಜಂನಿಂದ ಕೊಚ್ಚಿಗೆ ಶುಕ್ರವಾರ ಪ್ರಯಾಣಿಸಿತ್ತು. ಶನಿವಾರದಂದು ಅವಘಡ ಸಂಭವಿಸಿತ್ತು. ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಅಪಘಾತ ಸಂಭವಿಸಿದೆ.
ಹಡಗಿನಲ್ಲಿದ್ದ ಫಿಲಿಫೈನ್ಸ್‌ನ 20, ಉಕ್ರೇನ್‌ನ ಇಬ್ಬರು ಮತ್ತು ರಷ್ಯಾ ಹಾಗೂ ಜಾರ್ಜಿಯಾದ ತಲಾ ಒಬ್ಬರು ಸೇರಿದಂತೆ 24 ಸಿಬ್ಬಂದಿ ಇದ್ದರು. ಈ ಪೈಕಿ 21 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿತ್ತು.
'ಅಪಾಯಕಾರಿ ವಸ್ತು' ಹೊಂದಿರುವ ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿದ್ದು, ಅವು ದಡಕ್ಕೆ ಸೇರಬಹುದು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎಂ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿ ಕಂಟೇನರ್ ಅಥವಾ ತೈಲ ಸೋರಿಕೆ ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಲೈಬೀರಿಯಾ ಹಡಗು ಮುಳುಗಡೆ

