HEALTH TIPS

ಟರ್ಕಿ ಸೆಲೆಬಿಯ ಅನುಮತಿ ರದ್ದು ಪ್ರಕರಣ | ಮುನ್ನೆಚ್ಚರಿಕೆಯ ಅಗತ್ಯವಿಲ್ಲ: ಕೇಂದ್ರ

ನವದೆಹಲಿ: 'ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ಯಾವುದೇ ಮುನ್ನೆಚ್ಚರಿಕೆ ನೀಡದೆ ಸೆಲೆಬಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸುವ ಹಕ್ಕು ಸರ್ಕಾರಕ್ಕಿದೆ' ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಗುರುವಾರ ಹೇಳಿದೆ.

ಟರ್ಕಿಯ ಕಂಪನಿ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾದ ಭದ್ರತಾ ಅನುಮತಿಯನ್ನು ರದ್ದುಗೊಳಿಸಿ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್‌) ಮೇ 15ರಂದು ಆದೇಶಿಸಿತ್ತು.

ಮುಂಬೈ, ದೆಹಲಿ, ಕೊಚ್ಚಿ, ಕಣ್ಣೂರು, ಬೆಂಗಳೂರು, ಹೈದರಾಬಾದ್, ಗೋವಾ, ಅಹಮದಾಬಾದ್ ಮತ್ತು ಚೆನ್ನೈನ ವಿಮಾನ ನಿಲ್ದಾಣಗಳಲ್ಲಿ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಕಾರ್ಯ ನಿರ್ವಹಿಸುತ್ತಿದೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ 'ಆಪರೇಷನ್ ಸಿಂಧೂರ' ಅಡಿಯಲ್ಲಿ ಭಾರತವು ಇತ್ತೀಚೆಗೆ ನಡೆಸಿದ ದಾಳಿಯನ್ನು ಟರ್ಕಿ ಖಂಡಿಸಿತ್ತು. ಪಾಕಿಸ್ತಾನವು ಭಾರಿ ಪ್ರಮಾಣದಲ್ಲಿ ಟರ್ಕಿಯ ಡ್ರೋನ್‌ಗಳನ್ನು ಭಾರತದ ವಿರುದ್ಧ ಬಳಸಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಟರ್ಕಿಯ ಕಾಫಿ, ಜಾಮ್‌ ಮತ್ತು ಚಾಕೊಲೇಟ್‌ಗಳನ್ನು ಖರೀದಿಸಲು ವರ್ತಕರು ಬಹಿಷ್ಕರಿಸಿದ್ದಾರೆ. ಜತೆಗೆ ಟರ್ಕಿಯ ಪ್ರವಾಸೋದ್ಯಮಕ್ಕೂ ಭಾರತದ ಬಹಿಷ್ಕಾರದ ಬಿಸಿ ತಟ್ಟಿದೆ.

ಯಾವುದೇ ಮುನ್ನೆಚ್ಚರಿಕೆ ನೀಡದೆ ತನಗೆ ನೀಡಿದ ಅನುಮತಿಯನ್ನು ರದ್ದುಪಡಿಸಲಾಗಿದೆ. ಜತೆಗೆ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಯಾವುದೇ ವಿವರಣೆ ನೀಡಿಲ್ಲ. ಹೀಗಾಗಿ ತನಗೆ ನೀಡಿದ ಅನುಮತಿಯನ್ನು ಮುಂದುವರಿಸಲು ಆದೇಶಿಸುವಂತೆ ಕೋರಿ ಸೆಲೆಬಿ ಕಂಪನಿಯು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಕಂಪನಿಯೊಂದಿಗೆ ಯಾವುದೇ ಕಾರಣ ಹಂಚಿಕೊಳ್ಳುವ ಅಗತ್ಯವಿಲ್ಲ. ರಾಷ್ಟ್ರೀಯ ಭದ್ರತೆಯ ವಿಷಯ ಕುರಿತ ಕೆಲ ಪ್ರಕರಣಗಳಲ್ಲಿ ನ್ಯಾಯಸಮ್ಮತೆಯ ಅಗತ್ಯವನ್ನು ಮೀರಲು ಅವಕಾಶವಿದೆ. ಜತೆಗೆ, ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸುವ ಅಗತ್ಯವಿಲ್ಲ' ಎಂದು ಪೀಠಕ್ಕೆ ತಿಳಿಸಿದರು.

ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ತುಷಾರ್ ಮೆಹ್ತಾ, 'ವಿಮಾನ ನಿಲ್ದಾಣದಲ್ಲಿ ನಿರ್ವಹಣೆ ಮಾಡುವ ಸೆಲೆಬಿ ಕಂಪನಿಯು ಅಲ್ಲಿನ ಸಂಪೂರ್ಣ ಮಾಹಿತಿ, ಪ್ರಯಾಣಿಕರ ದಾಖಲೆ ಮತ್ತು ಕೆಲ ಅತಿ ಗಣ್ಯ ವ್ಯಕ್ತಿಗಳ ಚಲನವಲನದ ಮಾಹಿತಿ ಹೊಂದಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ' ಎಂದು ವಿವರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಕೆಲ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠದಲ್ಲಿದ್ದ ನ್ಯಾ. ಸಚಿನ್ ದತ್ತ ಅವರಿಗೆ ನೀಡಲಾಯಿತು. ಪ್ರಕರಣದ ಮುಂದಿನ ವಿಚಾರಣೆ ನಾಳೆಗೆ (ಮೇ 23) ಮುಂದೂಡಿ ನ್ಯಾಯಾಲಯ ಆದೇಶಿಸಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್, 'ಸೆಲೆಬಿ ವಿಷಯಕ್ಕೆ ಸಂಬಂಧಿಸಿದಂತೆ ಟರ್ಕಿ ರಾಯಭಾರ ಕಚೇರಿಯೊಂದಿಗೆ ನವದೆಹಲಿ ಚರ್ಚಿಸುತ್ತಿದೆ' ಎಂದಿದ್ದಾರೆ.

'ತನಗೆ ನೀಡಿದ ಅನುಮತಿ ರದ್ದತಿಯಿಂದ 3,791 ನೌಕರರ ಜೀವನದ ಮೇಲೆ ಪರಿಣಾಮ ಬೀರಲಿದೆ. ಮತ್ತು ಹೂಡಿಕೆದಾರರ ಹಿತಾಸಕ್ತಿಯೂ ಇದರಲ್ಲಿ ಅಡಗಿದೆ' ಎಂದು ಸೆಲೆಬಿ ವಾದಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries