HEALTH TIPS

ಲಾಲು ಕುಟುಂಬದಲ್ಲಿ ಮತ್ತೊಂದು ಬಿರುಗಾಳಿ: ಹಿರಿಯ ಮಗ ತೇಜ್ RJDಯಿಂದ ಉಚ್ಚಾಟನೆ

ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಆರ್‌ಜೆಡಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ತೇಜ್ ಪ್ರತಾಪ್ ಯಾದವ್ ಅವರು ಮತ್ತೊಂದು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಮೊನ್ನೆಯಿಂದ ಬಿಹಾರ ರಾಜಕೀಯ ಹಾಗೂ ಲಾಲು ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ.

ಶುಕ್ರವಾರ ತೇಜ ಪ್ರತಾಪ್ ಯಾದವ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ, 'ನಾನು ಅನುಷ್ಕಾ ಯಾದವ್‌ ಅವರ ಜೊತೆ ಕಳೆದ 12 ವರ್ಷಗಳಿಂದ ಸಂಬಂಧದಲ್ಲಿದ್ದೇನೆ. ಇದನ್ನು ಮೊದಲೇ ಹೇಳಬೇಕೆಂದಿದ್ದೆ. ಆದರೆ ಕಾಲ ಕೂಡಿ ಬಂದಿರಲಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳುತ್ತಿರೆಂದು ಭಾವಿಸಿದ್ದೇನೆ' ಎಂದು ಹೇಳಿದ್ದರು.

ಈ ಪೋಸ್ಟ್ ನಂತರ ಸಾಮಾಜಿಕ ತಾಣಗಳಲ್ಲಿ ತೇಜ ಪ್ರತಾಪ್ ಹಾಗೂ ಅನುಷ್ಕಾ ಅವರು ಜೊತೆಯಾಗಿರುವ ಮತ್ತು ಖಾಸಗಿ ಕ್ಷಣಗಳ ಫೋಟೊ ವಿಡಿಯೊಗಳು ಹರಿದಾಡುತ್ತಿವೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಲಾಲು ಅವರು, ಮಗನನ್ನು ಪಕ್ಷದಿಂದ ಹೊರಹಾಕಿದ್ದಾರೆ.

'ತೇಜ್ ಪ್ರತಾಪ್‌ ಮಾಡಿರುವ ಕೆಲಸದಿಂದ ನನಗೆ ನೋವಾಗಿದೆ. ಅಷ್ಟೇ ಅಲ್ಲದೇ ನಮ್ಮ ಪಕ್ಷದಲ್ಲಿನ ಸಾರ್ವಜನಿಕ ಜೀವನದ ಸಿದ್ದಾಂತಕ್ಕೂ ವಿರುದ್ಧವಾಗಿದೆ. ತೇಜ್ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕಿತ್ತೊ ಹಾಗೆ ನಡೆದುಕೊಂಡಿಲ್ಲ. ಇದರಿಂದ ಪ‍ಕ್ಷ ಕಟ್ಟುವ ಕೆಲಸಕ್ಕೂ ಹಿನ್ನಡೆಯಾಗಿದೆ' ಎಂದು ನೋವು ತೋಡಿಕೊಂಡಿದ್ದಾರೆ.

'ಮಗನಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರಬಹುದು. ಆದರೆ, ಈಗ ಮಾಡಿರುವ ತಪ್ಪಿನಿಂದಾಗಿ ಅವನು ಸ್ವತಂತ್ರವಾಗಿಯೇ ಇರಬೇಕಾಗುತ್ತದೆ. ಪಕ್ಷಕ್ಕೂ ಕುಟುಂಬಕ್ಕೂ ಸಂಬಂಧವಿಲ್ಲ' ಎಂದು ಉಚ್ಚಾಟನೆ ಆದೇಶದ ಪತ್ರದಲ್ಲಿ ಲಾಲು ಹೇಳಿದ್ದಾರೆ.

ಕಳೆದ ಜೆಡಿಯು-ಆರ್‌ಜೆಡಿ ಮೈತ್ರಿ ಸರ್ಕಾರದಲ್ಲಿ ತೇಜ ಪ್ರತಾಪ್ ಯಾದವ್ ಅವರು ಬಿಹಾರದ ಅರಣ್ಯ ಸಚಿವರಾಗಿದ್ದರು. ಈಗಾಗಲೇ ಅವರು 2018 ರಲ್ಲಿ ಬಿಹಾರದ ಮಾಜಿ ಮಂತ್ರಿ ಚಂದ್ರಿಕಾ ರಾಯ್ ಅವರ ಮಗಳು ಐಶ್ವರ್ಯ ಅವರನ್ನು ಮದುವೆಯಾಗಿದ್ದರು. ಆದರೆ, ಕೆಲದಿನಗಳ ನಂತರ ಬೇರೆಬೇರೆಯಾಗಿದ್ದರು.

ಉಚ್ಚಾಟನೆ ನಂತರ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ತೇಜ್, ನನ್ನ ವಿರುದ್ಧ ಬಂದಿರುವ ಆರೋಪಗಳು ಸುಳ್ಳು. ನನ್ನ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿದೆ. ಅಲ್ಲದೇ ನನ್ನ ಅನುಷ್ಕಾ ಅವರ ಫೋಟೊಗಳು ಎಐ ಜನರೇಟೆಡ್ ಎಂದು ಹೇಳಿಕೊಂಡಿರುವುದಾಗಿ ಎನ್‌ಡಿಟಿವಿ ವೆಬ್‌ಟೈಟ್ ವರದಿ ಮಾಡಿದೆ.

ಈ ವರ್ಷಾಂತ್ಯಕ್ಕೆ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಜೆಡಿಯು-ಬಿಜೆಪಿ ಮೈತ್ರಿಕೂಟ ಹಾಗೂ ಆರ್‌ಜೆಡಿ ನಡುವೆ ಪೈಪೋಟಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries