ಪೆರ್ಲ: ವಿಶೇಷ ಹಣ್ಣುಗಳು ಸೇರಿದಂತೆ ಆಧುನಿಕ ಕೃಷ್ಯುತ್ಪನ್ನಗಳನ್ನು ಬೆಳೆಯುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಒದಗಿಸಿಕೊಡುತ್ತಿದ್ದು, ಇದರ ಪ್ರಯೋಜನ ಪಡೆಯಲು ಕೃಷಿಕರು ಮುಂದೆ ಬರಬೇಕು ಎಂಬುದಾಗಿ ಕೇರಳ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಡಾ. ಡಿ. ಸಜಿತ್‍ಬಾಬು ಐಎಎಸ್ ತಿಳಿಸಿದ್ದಾರೆ.
ಅವರು ಕೇರಳ ಸರ್ಕಾರದ ವಾರ್ಷಿಕ ಅಭಿವೃದ್ಧಿ ಯೋಜನೆ-2025-26ರನ್ವಯ ಸಹಕಾರಿ ಇಲಾಖೆ ಜಾರಿಗೆ ತಂದಿರುವ 'ತೋಟಗಾರಿಕಾ ಹಬ್' ಮೂಲಕ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಪಳ್ಳಕ್ಕಾನದ ಸುಮಾರು ಐದು ಎಕರೆ ವಿಸ್ತೀರ್ಣದಲ್ಲಿ ಆರಂಭಿಸಲಾಗಿರುವ ರಂಬೂಟನ್ ಹಣ್ಣಿನ ಕೃಷಿಗಾಗಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶೇಷ ಹಣ್ಣುಗಳನ್ನು ಬೆಳೆಸುವ ನಿಟ್ಟಿನಲ್ಲಿ ತೋಟಗಾರಿಕಾ ಹಬ್ ಮೂಲಕ 30ಕೋಟಿ ರೂ. ಮೀಸಲಿರಿಸಲಾಗಿದೆ. ಇದರಲ್ಲಿ ರಂಬೂಟನ್ ಕೃಷಿಗೂ ಆದ್ಯತೆನೀಡಲಾಗಿದ್ದು, ಸಹಾಯಧನ ಒದಗಿಸಲಿದೆ. ಒಂದು ಎಕರೆ ವಿಸ್ತೀರ್ಣದಲ್ಲಿ ಬೆಳೆಸುವ ಒಟ್ಟು ಮೊತ್ತದ ಶೇ. 15ರಷ್ಟು ಮಾತ್ರ ಕೃಷಿಕರು ಯಾ ಸಂಸ್ಥೆ ಭರಿಸಬೇಕಾಗಿದ್ದು, ಉಳಿದ ಮೊತ್ತ ಸರ್ಕಾರ ನೀಡಲಿದೆ. ಇನ್ನು ಬಂಜರು ಭೂಮಿಯಲ್ಲಿ ಕೃಷಿ ನಡೆಸುವ 'ಪ್ಲಾಂಟ್-ಓಪರೇಟ್-ಟ್ರಾನ್ಸ್‍ಫರ್'(ಪಿ.ಓ.ಟಿ)ಯೋಜನೆಯೂ ಜಾರಿಯಲ್ಲಿದ್ದು, ಕೃಷಿಕರ ಪಾಳು ಭೂಮಿಯಲ್ಲಿ ಸರ್ಕಾರವೇ ಖುದ್ದು ಕೃಷಿ ನಡೆಸಿ, ಹದಿನೈದು ವರ್ಷಗಳ ನಂತರ ಕೃಷಿಕರಿಗೆ ಹಸ್ತಾಂತರಿಸುವ ಯೋಜನೆ ಇದಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 95ಸಾವಿರ ಹೆಕ್ಟರ್ ಭೂಮಿ ಪಾಳುಬಿದ್ದಿರುವ ಬಗ್ಗೆ ಲೆಕ್ಕಾಚಾರ ತಿಳಿಸುತ್ತಿದ್ದು, ಈ ಜಾಗವನ್ನು ಕೃಷಿಯೋಗ್ಯಗೊಳಿಸಿದಲ್ಲಿ ಉತ್ತಮ ಆದಾಯ ಕಂಡುಕೊಳ್ಳಲು ಸಾಧ್ಯವಾಗಲಿರುವುದಾಗಿ ತಿಳಿಸಿದರು.
ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ಅಧ್ಯಕ್ಷೆ ಶ್ಯಾಮಲಾ ಆರ್. ಪತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕೇರಳ ಬ್ಯಾಂಕ್ ನಿರ್ದೇಶಕ ಸಾಬು ಅಬ್ರಹಾಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಹಕಾರಿ ಇಲಾಖೆ ಜಂಟಿ ನಿಬಂಧಕ ವಿ.ಚಂದ್ರನ್, ಸಹಾಯಕ ನಿಬಂಧಕರಾದ ರವೀಂದ್ರ ಎ, ಜಯಚಂದ್ರನ್ ಎ, ಸರ್ಕಲ್ ಕೋಓಪರೇಟಿವ್ ಅಧ್ಯಕ್ಷ ಕೆ.ಆರ್ ಜಯಾನಂದ, ಸಹಕಾರಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕನ್ ಜೆ, ಇನ್ಸ್‍ಪೆಕ್ಟರ್ ಬೈಜುರಾಜ್ ಉಪಸ್ಥಿತರಿದ್ದರು. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಪ್ರಭಾಕರ ಕೆ.ಪಿ ಸ್ವಾಗತಿಸಿದರು. ಸಿಬ್ಬಂದಿ ಸುರೇಶ್ ಕುತ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಎನ್. ವಂದಿಸಿದರು. ಈ ಸಂದರ್ಭ ರಿಜಿಸ್ಟ್ರಾರ್ ಡಾ. ಡಿ. ಸಜಿತ್‍ಬಾಬು ಐಎಎಸ್, ಪ್ರಗತಿಪರ ಕೃಷಿಕ ವಿಶ್ವೇಶ್ವರ ಭಟ್ ಹಾಗೂ ಕೃಷಿಗಾಗಿ ಜಾಗ ಒದಗಿಸಿಕೊಟ್ಟ ಶ್ರೀಧರ ಭಟ್ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಐದು ಎಕರೆ ವಿಸ್ತೀರ್ಣದಲ್ಲಿ ಸುಮಾರು ನಾಲ್ನೂರು ರಂಬೂಟನ್ ಸಸಿಗಳನ್ನು ನೆಡಲಾಗಿದೆ.


