ಬದಿಯಡ್ಕ: ಕೇರಳ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಮಾರ್ಚ್ 2025ರಲ್ಲಿ ಅತ್ಯುತ್ತಮ ಗ್ರೇಡ್‍ಗಳೊಂದಿಗೆ ವಿಜೇತರಾದ 15 ಮಂದಿ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಹಾಗೂ ಕಿರಿಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಇತ್ತೀಚೆಗೆ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ, ಅಗಲ್ಪಾಡಿಯಲ್ಲಿ ನಡೆಯಿತು. ಶಾಲಾ ಹಳೆ ವಿದ್ಯಾರ್ಥಿ ಡಾ. ಯು. ಶಂಕರನಾರಾಯಣ ಭಟ್, ರಾಮಕೃಷ್ಣ ಕೆ ಮತ್ತು ರುಕ್ಮಿಣಿ ಇವರು ಪ್ರತಿ ವರ್ಷ ಕೊಡ ಮಾಡುವ ದತ್ತಿನಿಧಿ ನಗದು ಬಹುಮಾನಗಳನ್ನು ಹಾಗೂ ಶಾಲಾ ಅಧ್ಯಾಪಕ-ಅಧ್ಯಾಪಕೇತರ ವೃಂದದವರು ಕೊಡ ಮಾಡುವ ಪ್ರಶಸ್ತಿ ಫಲಕಗಳನ್ನು ನೀಡಲಾಯಿತು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಬಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್, ಶಾಲಾ ಪ್ರಾಂಶುಪಾಲ ಸತೀಶ ವೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜಾರಾಮ್ ಭಟ್ ಎಂ ಮತ್ತು ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರಮೀಳ ಗೋಸಾಡ ಶುಭಹಾರೈಸಿದರು.
ಮುಖ್ಯೋಪಾಧ್ಯಾಯ ಗಿರೀಶ್ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಧ್ಯಾಪಕ ಸಂಘದ ಕಾರ್ಯದರ್ಶಿ ರಮ್ಯಶ್ರೀ ಎಂ ಆರ್ ವಂದಿಸಿದರು. ಹಿರಿಯ ಆಧ್ಯಾಪಿಕೆಯರಾದ ಸವಿತಾ ಎಸ್, ಜ್ಯೋತಿ ಡಿ ಹಾಗೂ ಶೀಜ ವಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಸಾಧನೆಯ ಸಾರವನ್ನು ಕಿರಿಯ ವಿದ್ಯಾರ್ಥಿಗಳಿಗೆ ತಿಳಿ ಹೇಳುವುದರೊಂದಿಗೆ ಹುರಿದುಂಬಿಸಿದರು. ಈ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯುವ ಛಲದ ಸಂಕಲ್ಪವನ್ನು ತೊಟ್ಟರು. ಹೆತ್ತವರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.


