ಕಾಸರಗೋಡು: 'ವನ್ಯಜೀವಿಗಳು ಮಾತ್ರವಲ್ಲ, ಮನುಷ್ಯರೂ ಬದುಕಬೇಕು' ಎಂಬ ಘೋಷಣೆಯೊಂದಿಗೆ ಆಗಸ್ಟ್ 15 ರಿಂದ ವೆಳ್ಳರಿಕುಂಡ್‍ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಕೃಷಿಕ ಸ್ವರಾಜ್ ಸತ್ಯಾಗ್ರಹದ ಪ್ರಚಾರಾರ್ಥ ರಾಜ್ಯ ಮಟ್ಟದಲ್ಲಿ ವಾಹನ ಪ್ರಚಾರ ಜಾಥಾ ನ. 7ರಂದು ಮಧ್ಯಾಹ್ನ 3 ಗಂಟೆಗೆ ವೆಲ್ಲರಿಕುಂಡ್‍ನಿಂದ ಆರಂಭಗೊಳ್ಳಲಿದೆ. ಎಲ್ಲಾ ಜಿಲ್ಲೆಗಳಲ್ಲಿ ಜಾಥಾಕ್ಕೆ ಸ್ವಾಗತ ಏರ್ಪಡಿಸಲಾಗಿದೆ. ಅನಿರ್ಧಿಷ್ಟಾವಧಿ ಮುಷ್ಕರ ನಡೆಯುತ್ತಿರುವ ವೆಳ್ಳರಿಕುಂಡಿನ ಪ್ರತಿಭಟನಾ ಚಪ್ಪರದಿಂದ ಆರಂಭಗೊಳ್ಳುವ ಯಾತ್ರೆ ನ. 15ರಂದು ತಿರುವನಂತಪುರದಲ್ಲಿ ಸಂಪನ್ನಗೊಳ್ಳಲಿದೆ.
ತಿರುವನಂತಪುರದ ಸೆಕ್ರೆಟೇರಿಯೆಟ್ ವಠಾರದಲ್ಲಿ ನ. 15ರಂದುಬೆಳಗ್ಗೆ 10ಕ್ಕೆ ನಡೆಯುವ ಪ್ರತಿಭಟನಾ ಧರಣಿ ಹಾಗೂ ನಿರಾಹಾರ ಸತ್ಯಾಗ್ರಹವನ್ನು ಕಿಸಾನ್ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಚೌಧರಿ ಹರ್ಪಾಲ್ ಸಿಂಗ್ ಉದ್ಘಾಟಿಸುವರು. ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಘ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರವಿದತ್ ಸಿಂಗ್ ಅಧ್ಯಕ್ಷತೆ ವಹಿಸುವರು. ಭಾರತೀಯ ವಿವಿಧ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಪಾಲ್ಗೊಳ್ಳುವರು.
ಸುಮಾರು ಮೂರು ತಿಂಗಳಿನಿಂದ ನಡೆಯುತ್ತಿರುವ ರೈತರ ಸ್ವರಾಜ್ ಸತ್ಯಾಗ್ರಹವನ್ನು ರಾಜ್ಯವ್ಯಾಪಕವಾಗಿ ಪ್ರಚಾರ ನಡೆಸುವ ನಿಟ್ಟಿನಲ್ಲಿ ಪ್ರಚಾರ ಜಾಥಾ ಆಯೋಜಿಸಿರುವುದಾಗಿ ಕೃಷಿಕ ಸ್ವರಾಜ್ ಸತ್ಯಾಗ್ರಹ ಸಮಿತಿ ಅಧ್ಯಕ್ಷ ಸನ್ನಿ ಪ್ಯಾಕಾಟ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.

