ಡೆಸೆಂಬರ್ 19 ಅನ್ನು ಭಾರತದ ಇತಿಹಾಸದಲ್ಲಿ ಒಂದು ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಇದೇ ದಿನ 1961ರಂದು ಭಾರತೀಯ ಸೇನೆ ಪೋರ್ಚುಗೀಸರ ಪ್ರಭುತ್ವದಲ್ಲಿದ್ದ ಗೋವಾವನ್ನು ವಶಪಡಿಸಿಕೊಂಡ ದಿನವಾಗಿದೆ. ಅದರಂತೆ ಪ್ರತೀ ವರ್ಷ ಡಿಸೆಂಬರ್ 19ರಂದು ಗೋವಾ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ದಿನದ ಮಹತ್ವ
200 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟೀಷರು 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ತೆರಳಿದರು. ಆದರೆ, ಗೋವಾ, ಡಿಯು ಹಾಗೂ ದಮನ್ ಪ್ರದೇಶಗಳಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಇವುಗಳು ಪೋರ್ಚುಗೀಸರ ವಶದಲ್ಲಿದ್ದು, ಇವುಗಳನ್ನು ಬಿಟ್ಟುಕೊಡಲು ಪೋರ್ಚುಗೀಸರು ನಿರಾಕರಿಸಿದ್ದರು.
ಆ ಕಾರಣದಿಂದಾಗಿ ಭಾರತ ಸರ್ಕಾರ ಗೋವಾದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕಾಯಿತು. ಆದರೂ ಪ್ರಯೋಜನವಾಗಲಿಲ್ಲ. ಹಲವು ಮಾತುಕತೆಗಳ ನಂತರವೂ ಗೋವಾಗೆ ಸ್ವಾತಂತ್ರ್ಯ ನೀಡಲು ಪೋರ್ಚುಗೀಸ್ ಗವರ್ನರ್ ಜನರಲ್ ವಾಸಾಲೊ ಡಾ ಸಿಲ್ವಾ ಸಿದ್ಧವಿರಲಿಲ್ಲ. ಇದರಿಂದ ಭಾರತ ಸರ್ಕಾರವು ಸೇನೆ ಕಳಿಸಿ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಲು ನಿರ್ಧರಿಸಿತು.
ಅದರಂತೆ ಭಾರತದ ಭೂ ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳು 1961ರ ಡಿಸೆಂಬರ್ 17ರಂದು ಗೋವಾದ ಮೇಲೆ ಆಕ್ರಮಣ ಮಾಡಿ, ಪೋರ್ಚುಗೀಸರ ಯುದ್ದ ನೌಕೆಗಳನ್ನು ನಾಶ ಮಾಡಿ, ಗೋವಾವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡವು. ಈ ಆಪರೇಷನ್ ವಿಜಯ್ ಅನ್ನು ಯಾವುದೇ ರಕ್ತಪಾತವಿಲ್ಲದೆ ನಡೆಸಲಾಯಿತು ಎಂಬುದು ವಿಶೇಷ.
ಕೊನೆಗೆ ಪೋರ್ಚುಗೀಸರ ಗವರ್ನರ್ ಜನರಲ್ ವಾಸಾಲೊ ಡಾ ಸಿಲ್ವಾ ಡಿಸೆಂಬರ್ 18ರಂದು ಭಾರತೀಯ ಸೈನ್ಯದ ಬ್ರಿಗೆಡಿಯರ್ ಕೆ.ಎಸ್.ಧಿಲ್ಲನ್ ಅವರ ಮುಂದೆ ಶರಣಾಗತಿ ಪತ್ರ ಬರೆದು ಗೋವಾವನ್ನು ಭಾರತ ಸರ್ಕಾರಕ್ಕೆ ಅರ್ಪಿಸಿದನು. ಈ ಹಿನ್ನೆಲೆಯಲ್ಲಿ ಭಾರತ ಇತಿಹಾಸದಲ್ಲಿ ಗೋವಾ ವಿಮೋಚನಾ ದಿನ ಬಹಳ ವಿಶೇಷವಾಗಿದೆ.
ಡಿಸೆಂಬರ್ 16 ರಂದು ಪ್ರಾರಂಭಗೊಂಡ ಭಾರತೀಯ ಸೇನೆಯ 'ಆಪರೇಷನ್ ವಿಜಯ್' ಕಾರ್ಯಾಚರಣೆಯು ಡಿಸೆಂಬರ್ 19ರಂದು ಮುಕ್ತಾಯಗೊಂಡಿತು. ಮೂರು ದಿನಗಳ ನಂತರ ಅಂದರೆ, 1961ರ ಡಿಸೆಂಬರ್ 19 ರಂದು ಗೋವಾ ಅಂತಿಮವಾಗಿ ಭಾರತದ ಭಾಗವಾಯಿತು.
451 ವರ್ಷಗಳ ವಸಾಹತುಶಾಹಿ ಆಳ್ವಿಕೆ ಅಂತ್ಯ
ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಆರಂಭವಾಗಿದ್ದು 1510ರಲ್ಲಿ, ಅಫೊನ್ಸೊ ಡಿ ಅಲ್ಬುಕರ್ಕ್ ಈ ಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಶತಮಾನಗಳ ಕಾಲ ಗೋವಾ ರಾಜ್ಯ ಏಷ್ಯಾದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯ ವಿಸ್ತರಿಸುವ ಕಾರ್ಯತಂತ್ರದ ಕೇಂದ್ರವಾಯಿತು.
ಅಂತಿಮವಾಗಿ 1961ರಲ್ಲಿ ಭಾರತೀಯ ಸೇನೆಯ ದಾಳಿಯ ಬಳಿಕ ಧೀರ್ಘಕಾಲಿನ ವಸಹಾತುಶಾಹಿ ಆಡಳಿತ ಅಂತ್ಯಗೊಂಡಿತು.

