ನವದೆಹಲಿ: ನರೇಗಾಗೆ ಪರ್ಯಾಯವಾಗಿ ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ 'ವಿಬಿ-ಜಿ ರಾಮ್ ಜಿ' ಕಾಯ್ದೆಯು ಗ್ರಾಮ ವಿರೋಧಿ ಎಂದು ಹೇಳಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 20 ವರ್ಷಗಳ ನರೇಗಾ ಯೋಜನೆಯನ್ನು ಮೋದಿ ಸರ್ಕಾರವು ಒಂದೇ ದಿನದಲ್ಲಿ ನಾಶ ಮಾಡಿದೆ ಎಂದು ಕಿಡಿಕಾರಿದ್ದಾರೆ.
'ವಿಬಿ-ಜಿ ರಾಮ್ ಜಿ' ಕಾಯ್ದೆಯು ನರೇಗಾ ಕಾಯ್ದೆಯ ಪರಿಷ್ಕರಣೆಯಲ್ಲ ಎಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್, 'ಮೋದಿ ಸರ್ಕಾರವು 20 ವರ್ಷಗಳ ನರೇಗಾ ಕಾಯ್ದೆಯನ್ನು ಒಂದೇ ದಿನದಲ್ಲಿ ನಾಶ ಮಾಡಿದೆ' ಎಂದು ದೂರಿದ್ದಾರೆ.
ಇದು ಹಕ್ಕು ಆಧಾರಿತ, ಬೇಡಿಕೆ ಆಧಾರಿತ ಖಾತರಿಯನ್ನು ನಾಶ ಮಾಡುತ್ತದೆ. ಅದನ್ನು ದೆಹಲಿಯಿಂದ ನಿಯಂತ್ರಿಸಲ್ಪಡುವ ಯೋಜನೆಯಾಗಿ ಪರಿವರ್ತಿಸುತ್ತದೆ. ಇದು ರಾಜ್ಯ ವಿರೋಧಿ ಮತ್ತು ವಿನ್ಯಾಸದಲ್ಲೇ ಗ್ರಾಮ ವಿರೋಧಿಯಾಗಿದೆ ಎಂದಿದ್ದಾರೆ.
'ನರೇಗಾ ಮೂಲಕ ಜನರ ಶೋಷಣೆ, ವಲಸೆ ಕಡಿಮೆಯಾಯಿತು. ಕಾರ್ಮಿಕರ ವೇತನ ಹೆಚ್ಚಾಯಿತು, ಕೆಲಸದ ಪರಿಸ್ಥಿತಿಗಳು ಸುಧಾರಿಸಿದವು, ಗ್ರಾಮೀಣ ಮೂಲಸೌಕರ್ಯ ನಿರ್ಮಾಣ ಮತ್ತು ಪುನಶ್ಚೇತನ ಸಾಧ್ಯವಾಯಿತು. ಆದರೆ, ಆ ಅಭಿವೃದ್ಧಿಯನ್ನು ಕೆಡವಲು ಈ ಕಾಯ್ದೆ ಮೂಲಕ ಸರ್ಕಾರ ಪ್ರಯತ್ನಿಸುತ್ತಿದೆ'ಎಂದು ರಾಹುಲ್ ಆರೋಪಿಸಿದ್ದಾರೆ.
ನರೇಗಾದಲ್ಲಿ ನೀಡಲಾಗುತ್ತಿದ್ದ ಕೆಲಸವನ್ನು ಮಿತಿಗೊಳಿಸುವ ಮೂಲಕ ಅದನ್ನು ನಿರಾಕರಿಸಲು ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸುವ ಹೊಸ ಮಸೂದೆಯು ಗ್ರಾಮೀಣ ಬಡವರು ಹೊಂದಿದ್ದ ಒಂದು ಸಾಧನವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
'ಕೋವಿಡ್ ಸಮಯದಲ್ಲಿ ನರೇಗಾ ಎಂದರೆ ಏನೆಂದು ನಾವು ನೋಡಿದ್ದೇವೆ. ಆರ್ಥಿಕತೆಯು ಸ್ಥಗಿತಗೊಂಡು ಜೀವನೋಪಾಯಗಳು ಕುಸಿದಾಗ, ಯೋಜನೆ ಲಕ್ಷಾಂತರ ಜನರು ಹಸಿವು ಮತ್ತು ಸಾಲದಿಂದ ನರಳದಂತೆ ತಡೆಯಿತು' ಎಂದಿದ್ದಾರೆ.
'ಉದ್ಯೋಗ ಕಾರ್ಯಕ್ರಮವನ್ನು ನೀವು ಮಿತಿಗೊಳಿಸಿದರೆ, ಮಹಿಳೆಯರು, ದಲಿತರು, ಆದಿವಾಸಿಗಳು, ಭೂರಹಿತ ಕಾರ್ಮಿಕರು ಮತ್ತು ಬಡ ಒಬಿಸಿಗಳು ಮೊದಲು ಯೋಜನೆಯ ವ್ಯಾಪ್ತಿಯಿಂದ ಹೊರಹೋಗುತ್ತಾರೆ' ಎಂದಿದ್ದಾರೆ.

