ನವದೆಹಲಿ: ಸೇನಾ ಮೇಲಾಧಿಕಾರಿ ನೀಡಿದ ಕಾನೂನುಬದ್ಧ ಆದೇಶವನ್ನು ಧಾರ್ಮಿಕ ಕಾರಣ ನೀಡಿ ಪಾಲಿಸದೆ, ಸೇನಾ ಶಿಸ್ತಿಗೆ ಧಕ್ಕೆ ತಂದ ಲೆಫ್ಟಿನೆಂಟ್ ಸ್ಯಾಮ್ಯುಯೆಲ್ ಕಮಲೇಶನ್ ಅವರ ಅಮಾನತು ಆದೇಶವನ್ನು ಭಾರತದ ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಮಿಲಿಟರಿಯಲ್ಲಿ ಇಂತಹ ಅಧಿಕಾರಿಗಳು ಸೇವೆಗೆ "ಅರ್ಹರಲ್ಲ" ಎಂಬ ಕಠಿಣ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.
3ನೇ ಅಶ್ವದಳ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಕಮಲೇಶನ್ ಅವರಿಗೆ, ದೇವಸ್ಥಾನದ ಗರ್ಭಗುಡಿಗೆ ಪೂಜೆಗಾಗಿ ಪ್ರವೇಶಿಸಲು ಹಿರಿಯ ಅಧಿಕಾರಿ ಆದೇಶಿಸಿದ್ದರು. ಆದರೆ, ತನ್ನ ಕ್ರಿಶ್ಚಿಯನ್ ಧಾರ್ಮಿಕ ನಂಬಿಕೆಗಳನ್ನು ಉಲ್ಲೇಖಿಸಿ, ಅವರು ಈ ಆದೇಶ ಪಾಲಿಸಲು ನಿರಾಕರಿಸಿದ್ದರು. "ಏಕದೇವತಾ ನಂಬಿಕೆಗೆ ಧಕ್ಕೆ" ಆಗುತ್ತದೆ ಎಂದು ಅವರು ವಾದಿಸಿದ್ದರು. ಈ ವರ್ತನೆಯನ್ನು ಸೇನೆ ಗಂಭೀರ ಅಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿ, ಅವರಿಗೆ ಅಮಾನತು ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟ್‌ಗೆ ಹೋದರೂ, ಹೈಕೋರ್ಟ್ ಕೂಡ ಸೇನೆಯ ನಿರ್ಧಾರವೇ ಸರಿಯೆಂದು ತೀರ್ಪು ನೀಡಿತ್ತು. ಕಾನೂನುಬದ್ಧ ಮಿಲಿಟರಿ ಆದೇಶಕ್ಕಿಂತ ಧರ್ಮವನ್ನು ಮೇಲುಗೈ ಮಾಡುವುದು "ಸ್ಪಷ್ಟವಾದ ಅಶಿಸ್ತಿನ ನಡವಳಿಕೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ನಂತರ ಕಮಲೇಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಹೇಳಿ, ಅಧಿಕಾರಿಯ ವರ್ತನೆಯನ್ನು "ಅತ್ಯಂತ ಘೋರ ಅಶಿಸ್ತಿನ" ಎಂದು ಕಟುವಾಗಿ ಟೀಕಿಸಿತು.
ಧಾರ್ಮಿಕ ಸಮಾರಂಭಗಳ ಸಂದರ್ಭದಲ್ಲಿ ಮಾತ್ರ ದೇವಸ್ಥಾನ ಅಥವಾ ಗುರುದ್ವಾರ ಪ್ರವೇಶಿಸಲು ನಿರಾಕರಿಸಿದ್ದೇನೆ ಎಂಬ ಕಮಲೇಶನ್ ಅವರ ವಾದದ ಮೇಲೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಗಾಚಿ, "ಕ್ರಿಶ್ಚಿಯನ್ ನಂಬಿಕೆಯಲ್ಲಿ ಇತರ ಧಾರ್ಮಿಕ ಸ್ಥಳ ಪ್ರವೇಶಿಸುವುದನ್ನು ಎಲ್ಲಿ ನಿರ್ಬಂಧಿಸಲಾಗಿದೆ?" ಎಂದು ಪ್ರಶ್ನಿಸಿದರು.
ಸೈನಿಕರ ಧಾರ್ಮಿಕ ಭಾವನೆಗಳನ್ನು ಗೌರವಿಸಲು ವಿಫಲರಾದ ಕಮಲೇಶನ್ ಅವರನ್ನು ಗುರಿಯಾಗಿಸಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್, "ನೀವು 100 ವಿಷಯಗಳಲ್ಲಿ ಅತ್ಯುತ್ತಮರಾಗಿರಬಹುದು; ಆದರೆ ಜಾತ್ಯಾತೀತತೆ ಮತ್ತು ಧರ್ಮಾತೀತ ಸಿದ್ಧಾಂತಗಳನ್ನು ಪಾಲಿಸುವ ಭಾರತೀಯ ಸೇನೆಗೆ ನೀವು ಅರ್ಹರಲ್ಲ" ಎಂದು ಕಠಿಣ ಟೀಕೆ ಮಾಡಿದರು. ಅಂತಿಮವಾಗಿ, ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಭದ್ರಪಡಿಸಿತು.

