ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಮುಂದುವರಿದಿರುವ ಕಾರಣ ದೇಶದಲ್ಲಿ ತೈಲ, ಇಂಧನ ಹಾಗೂ ಗೊಬ್ಬರದ ಸಂಗ್ರಹದ ಕುರಿತು ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ, ಹಿರಿಯ ಸಚಿವರನ್ನೊಳಗೊಂಡ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೈಗಾರಿಕೆಗಳು ಮತ್ತು ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಜಾಗತಿಕ ಬೆಳವಣಿಗೆಗಳನ್ನು ಪರಿಶೀಲಿಸುತ್ತಿದೆ. ದೇಶದಲ್ಲಿ ಇಂಧನ ಕೊರತೆಯಾಗದಂತೆ ನೋಡಿಕೊಳ್ಳುವುದು ಮತ್ತು ತೈಲ ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವುದು ಈ ಸಭೆಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ಜಗತ್ತಿನಾದ್ಯಂತ ಇಂಧನ ಕೊರತೆ ಉಂಟಾಗಿದೆ. ಭಾರತವು ಶಾಂತಿ ಹಾಗೂ ತಾಳ್ಮೆಯಿಂದ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ನಮ್ಮ ಸರ್ಕಾರವು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಅವರು ಮಾ.12ರಂದು ಹೇಳಿದ್ದರು.
ಇರಾನ್ ಯುದ್ಧ ಆರಂಭವಾದ ಬಳಿಕ ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ, ಯುಎಇ, ಕತಾರ್, ಬಹರೇನ್, ಕುವೈತ್, ಜೋರ್ಡಾನ್, ಫ್ರಾನ್ಸ್, ಇಸ್ರೇಲ್, ಇರಾನ್ ಸೇರಿದಂತೆ ಹಲವು ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಫೆ.28ರಂದು ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ಮಾಡಿದ ನಂತರ ಸಂಘರ್ಷ ಆರಂಭವಾಗಿದೆ. ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಿರುವುದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂಧನ ಕೊರತೆ ಉಂಟಾಗಿದೆ.

