ನವದೆಹಲಿ: ದೆಹಲಿಯ ಏಮ್ಸ್‌ನ ನರ್ಸಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡಿರುವ ನಿಶಾ ಮೆಹ್ತಾ ಅವರು ನೇಪಾಳದ ಆರೋಗ್ಯ ಸಚಿವರಾಗಿ ನೇಮಕಗೊಂಡಿರುವ ಕುರಿತು ಏಮ್ಸ್ ಅಧಿಕೃತ ಪ್ರಕಟಣೆಯನ್ನು ಭಾನುವಾರ ಹೊರಡಿಸಿದೆ.
'ಈ ಸಾಧನೆಯು ನಮ್ಮ ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ. ಶುಷ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ನಿಶಾ ಈಗ ಪ್ರಮುಖ ನೀತಿಗಳನ್ನು ರೂಪಿಸಬಲ್ಲಂತಹ ಸ್ಥಾನಕ್ಕೆ ಏರಿದ್ದಾರೆ.
ಅವರ ಈ ಪ್ರಯಾಣವು ನರ್ಸಿಂಗ್‌ನ ವಿಸ್ತರಿಸುತ್ತಿರುವ ವ್ಯಾಪ್ತಿ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ' ಎಂದು ಏಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.
'ಏಮ್ಸ್‌ನಲ್ಲಿದ್ದ ಸಂದರ್ಭದಲ್ಲಿ ನಿಶಾ ಅವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಉತ್ತಮ ನಾಯಕತ್ವ ಗುಣಗಳನ್ನು ಹೊಂದಿದ್ದರು ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದರು. ಈ ಗುಣಗಳು ಉನ್ನತ ನಾಯಕತ್ವ ಹಾಗೂ ಸಾರ್ವಜನಿಕ ಸೇವೆಯತ್ತ ಅವರ ಹಾದಿಯನ್ನು ಸುಗಮಗೊಳಿಸಿವೆ' ಎಂದೂ ಶ್ಲಾಘಿಸಿದೆ.
2006- 2010ರ ಅವಧಿಯಲ್ಲಿ ನಿಶಾ ಅವರು ಇಲ್ಲಿ ನರ್ಸಿಂಗ್ ಪದವಿ ಕೋರ್ಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಮಾರ್ಚ್ 27ರಂದು ನಿಶಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನೇಪಾಳದ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡುವಂತೆ ಹಾಗೂ ಯಶಸ್ವಿ ಅಧಿಕಾರಾವಧಿಯನ್ನು ಹೊಂದುವಂತೆ ನಿಶಾ ಅವರಿಗೆ ಏಮ್ಸ್‌ನ ನರ್ಸಿಂಗ್ ಕಾಲೇಜು ಶುಭ ಹಾರೈಸಿದೆ.

