HEALTH TIPS

ಎಎಪಿಯ ಏಳು ರಾಜ್ಯಸಭಾ ಸದಸ್ಯರ ಬಿಜೆಪಿ ವಿಲೀನಕ್ಕೆ ಸಭಾಪತಿ ರಾಧಾಕೃಷ್ಣನ್‌ ಸಮ್ಮತಿ

 ನವದೆಹಲಿ: ರಾಘವ್‌ ಚಡ್ಡಾ ಸೇರಿದಂತೆ ಎಎಪಿಯ ಏಳು ರಾಜ್ಯಸಭಾ ಸದಸ್ಯರ ಬಿಜೆಪಿ ವಿಲೀನಕ್ಕೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ಸೋಮವಾರ ಹಸಿರು ನಿಶಾನೆ ತೋರಿದ್ದಾರೆ.


ಇದರಿಂದ, ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಸದಸ್ಯರ ಬಲ ಮೇಲ್ಮನೆಯಲ್ಲಿ ಮೂರಕ್ಕೆ ಕುಸಿದಿದೆ.ಮತ್ತೊಂದೆಡೆ ಬಿಜೆಪಿ‌ ಬಲ 113ಕ್ಕೆ ಏರಿದೆ.

ಚಡ್ಡಾ ಅವರಲ್ಲದೆ ಅಶೋಕ್‌ ಮಿತ್ತಲ್‌, ಹರಭಜನ್‌ ಸಿಂಗ್, ಸಂದೀಪ್‌ ಪಾಠಕ್‌, ವಿಕ್ರಮ್‌ಜಿತ್‌ ಸಾಹ್ನಿ, ಸ್ವಾತಿ ಮಾಲಿವಾಲ್‌, ರಾಜಿಂದರ್‌ ಗುಪ್ತಾ ಬಿಜೆಪಿಯೊಂದಿಗೆ ವಿಲೀನಗೊಂಡ ಸದಸ್ಯರಾಗಿದ್ದಾರೆ. ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಈ ಏಳು ಸಂಸದರನ್ನು ಬಿಜೆಪಿ ಸದಸ್ಯರ ಪಟ್ಟಿಯಲ್ಲಿ ತೋರಿಸಲಾಗಿದೆ.

ವಿಲೀನದ ಬಳಿಕ ತಮ್ಮನ್ನು ಬಿಜೆಪಿ ಸಂಸದರು ಎಂದು ಪರಿಗಣಿಸುವಂತೆ ಏಳೂ ಸಂಸದರು ರಾಜ್ಯಸಭಾ ಸಭಾಪತಿಗೆ ಮನವಿ ಸಲ್ಲಿಸಿದ್ದರು. ಆ ಅರ್ಜಿ ಅಂಗೀಕಾರವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಸದರ ಸ್ವಾಗತಿಸಿದ ರಿಜಿಜು: ಏಳು ಸಂಸದರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಾಗತಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು, ಈ ಸಂಸದರು ತುಕ್ಡೆ-ತುಕ್ಡೆ 'ಇಂಡಿಯಾ' ಮೈತ್ರಿಕೂಟಕ್ಕೆ ವಿದಾಯ ಹೇಳಿದ್ದಾರೆ ಎಂದರು.

'ಈ ಏಳೂ ಸಂಸದರ ಬಿಜೆಪಿ ವಿಲೀನಕ್ಕೆ ರಾಜ್ಯಸಭಾ ಸಭಾಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ಸಮ್ಮತಿಸಿ ದ್ದಾರೆ. ಹೀಗಾಗಿ ಅವರೆಲ್ಲ ಈಗ ಬಿಜೆಪಿ ಸಂಸದೀಯ ಪಕ್ಷದ ಸದಸ್ಯರಾಗಿದ್ದಾರೆ' ಎಂದು ರಿಜಿಜು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ನಾನು ಬಹಳ ಸಮಯದಿಂದ ಈ ಸದಸ್ಯರನ್ನು ಗಮನಿಸಿದ್ದೇನೆ. ಅವರು ಯಾವುದೇ ನಿಂದನೀಯ ಭಾಷೆಗಳನ್ನು ಬಳಸಿಲ್ಲ. ಅಶಿಸ್ತು ವ್ಯಕ್ತಪಡಿಸಿಲ್ಲ' ಎಂದು ಹೇಳಿದ್ದಾರೆ.

ಈ ಸಂಸದರ ಬಿಜೆಪಿ ವಿಲೀನವನ್ನು ಎಎಪಿ 'ಅಸಾಂವಿಧಾನಿಕ' ಎಂದು ಕರೆದಿತ್ತು. ಅಲ್ಲದೆ ಪಕ್ಷಾಂತರದ ಆರೋಪದ ಮೇಲೆ ಈ ಏಳೂ ಸಂಸದರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಎಎಪಿ ರಾಜ್ಯಸಭಾ ಸಭಾಪತಿಗೆ ಅರ್ಜಿ ಸಲ್ಲಿಸಿತ್ತು.

ರಾಜ್ಯಸಭೆಯಲ್ಲಿ ಪಂಜಾಬ್‌ ಅನ್ನು ಪ್ರತಿನಿಧಿಸುವ ಒಟ್ಟು ಏಳು ಸಂಸದರ ಪೈಕಿ ಆರು ಮಂದಿ ಈಗ ಬಿಜೆಪಿಯಲ್ಲಿದ್ದಾರೆ. ಒಬ್ಬರು ಮಾತ್ರ ಎಎಪಿಯಲ್ಲಿ ಉಳಿದಿದ್ದಾರೆ. ದೆಹಲಿಯ ಒಟ್ಟು ಮೂವರು ಸಂಸದರಲ್ಲಿ ಈಗ ಎಎಪಿಯಲ್ಲಿ ಇಬ್ಬರು ಮತ್ತು ಬಿಜೆಪಿಯಲ್ಲಿ (ಸ್ವಾತಿ ಮಾಲಿವಾಲ್‌) ಒಬ್ಬರಿದ್ದಾರೆ.

'ಲೋಟಸ್‌ ಲೂಟಸ್‌ ಆಗಿದೆ': ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, 'ಸಭಾಪತಿ ನಿರ್ಧಾರವೇನೂ ಆಶ್ಚರ್ಯ ತರಿಸಿಲ್ಲ. ಆದರೆ ಇಷ್ಟು ತಡ ಮಾಡಿದ್ದು ಆಶ್ಚರ್ಯಕರ. ಕೆಲ ಸಂಸದರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡುತ್ತಿತ್ತು, ಅದು ನಿಲ್ಲುತ್ತದೆ ಎಂದು ಹೇಳಬಹುದು. ಅಂದರೆ ಈ ಬೆಳವಣಿಗೆಗಳಿಗೂ ಮುನ್ನ ಸರ್ಜಿಕಲ್‌ ಸ್ಟ್ರೈಕ್ ಮತ್ತು ಪೂರ್ವಭಾವಿ ಕ್ರಮ ಎರಡೂ ಆಗಿವೆ. ಲೋಟಸ್‌ (ಕಮಲವು) ಲೂಟಸ್‌ (ಲೂಟಿಕೋರ) ಆಗಿ ಪರಿವರ್ತನೆಯಾಗಿದೆ' ಎಂದು ದೂರಿದ್ದಾರೆ.

ರಾಜ್ಯಸಭೆಯಲ್ಲಿ ಬಲಾಬಲ: 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್‌ಡಿಎ ಮೈತ್ರಿ ಕೂಟ 149 ಸದಸ್ಯರನ್ನು (ಬಿಜೆಪಿ ಸೇರಿದ 7 ಸದಸ್ಯರನ್ನು ಸೇರಿ) ಹೊಂದಿದ್ದರೆ, 'ಇಂಡಿಯಾ' ಮೈತ್ರಿಕೂಟ 75 ಸದಸ್ಯರನ್ನು ಹೊಂದಿದೆ. ಮೂರನೇ ಎರಡರಷ್ಟು ಸ್ಥಾನದತ್ತ (163) ಸಾಗಲು ಎನ್‌ಡಿಎಗೆ ‌14 ಸ್ಥಾನಗಳ ಕೊರತೆಯಿದೆ. ಜೂನ್‌ ಮತ್ತು ಜುಲೈನಲ್ಲಿ ತೆರವಾಗುವ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಇನ್ನೂ ಐದು ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯನ್ನು ಎನ್‌ಡಿಎ ಹೊಂದಿದೆ.

ಎಎಪಿಯಲ್ಲಿ ವಿಷಮಯ ವಾತಾವರಣ: ರಾಘವ್‌ ಚಡ್ಡಾ‌

ನವದೆಹಲಿ (ಪಿಟಿಐ): 'ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಪಕ್ಷದಲ್ಲಿ ಕೆಲಸದ ವಾತಾವರಣ ವಿಷಕಾರಿಯಾಗಿದ್ದು, ನಾಯಕರನ್ನು ಕೆಲಸ ಮಾಡದಂತೆ ತಡೆಯಲಾಗಿದೆ' ಎಂದು ಜರಿದಿರುವ ರಾಜ್ಯಸಭಾ ಸದಸ್ಯ ರಾಘವ್‌ ಚಡ್ಡಾ, 'ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳು ತಪ್ಪು ಮಾಡಿರಬಹುದು, ಆದರೆ ಏಳೂ ಜನರು ತಪ್ಪು ಮಾಡಲು ಸಾಧ್ಯವೇ' ಎಂದು ತಮ್ಮ ಪಕ್ಷಾಂತರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, 'ಚಾರ್ಟೆಡ್‌ ಅಕೌಂಟೆಂಟ್‌ ಆಗಿ ಯಶಸ್ವಿ ವೃತ್ತಿ ಜೀವನ ನಡೆಸುತ್ತಿದ್ದ ನಾನು ರಾಜಕೀಯ ಪ್ರವೇಶಿಸಲು ವೃತ್ತಿಜೀವನ ತೊರೆದು ಎಎಪಿಯ ಸ್ಥಾಪಕ ಸದಸ್ಯನಾದೆ. ಪಕ್ಷ ನಿರ್ಮಾಣಕ್ಕೆ ತಾರುಣ್ಯದ 15 ವರ್ಷಗಳನ್ನು ಸವೆಸಿದ್ದೇನೆ. ವೃತ್ತಿಜೀವನ ರೂಪಿಸಿಕೊಳ್ಳಲಿಕ್ಕಾಗಿ ರಾಜಕೀಯಕ್ಕೆ ಬಂದವನು ನಾನಲ್ಲ' ಎಂದು ಹೇಳಿದ್ದಾರೆ.

'ಎಎಪಿಯು ಕೆಲ ಭ್ರಷ್ಟರು ಮತ್ತು ರಾಜಿ ಮಾಡಿಕೊಂಡ ಜನರ ಕೈಯಲ್ಲಿ ಸಿಲುಕಿದ್ದು, ದೇಶಕ್ಕಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಅಲ್ಲಿರುವವರು ತಮ್ಮ ಸ್ವಂತ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ಚಡ್ಡಾ ಆರೋಪಿಸಿದ್ದಾರೆ.

'ರಾಜಕೀಯ ತೊರೆಯುವ ಅಥವಾ ಅದೇ ಪಕ್ಷದಲ್ಲಿ ಉಳಿದು ಸಮಸ್ಯೆಗಳನ್ನು ಸರಿಪಡಿಸಲು ಯತ್ನಿಸುವ ಅಥವಾ ನನ್ನ ಶಕ್ತಿ ಮತ್ತು ಅನುಭವವನ್ನು ಇನ್ನೊಂದು ವೇದಿಕೆಗೆ ಕೊಂಡೊಯ್ದು ಸಕಾರಾತ್ಮಕ ರಾಜಕೀಯ ಮುಂದುವರಿಸುವ ಆಯ್ಕೆಗಳು ನನ್ನ ಮುಂದಿದ್ದವು' ಎಂದು ಅವರು ವಿವರಿಸಿದ್ದಾರೆ.

ಚಡ್ಡಾ ಅವರ ಹೇಳಿಕೆಯನ್ನು ಖಂಡಿಸಿರುವ ಎಎಪಿಯ ದೆಹಲಿ ಘಟಕದ ಮುಖ್ಯಸ್ಥ ಸೌರಭ್‌ ಭಾರದ್ವಾಜ್‌, 'ಯಾವುದೇ ಉದ್ಯೋಗಿಯು ಒಂದು ಕಂಪನಿಯನ್ನು ತೊರೆಯುವಾಗ ವೃತ್ತಿಪರ ನೀತಿ ಅನುಸರಿಸಿ, ನೋಟಿಸ್‌ ಅವಧಿ ಪೂರೈಸುತ್ತಾರೆ. ಈ ಮೂಲಕ ಅವರು ಕಂಪನಿಗೆ ಗೌರವ ಸೂಚಿಸುತ್ತಾರೆ. ಆದರೆ ಚಡ್ಡಾ ಹಾಗಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

- ಅಜಯ್‌ ಮಾಕನ್‌, ಕಾಂಗ್ರೆಸ್‌ನ ಹಿರಿಯ ನಾಯಕಎಎಪಿ ಪಕ್ಷವನ್ನು ಬಿಜೆಪಿಯ ಬಿ- ಟೀಂ ಎಂದು ಯಾವಾಗಲೂ ಹೇಳುತ್ತಿದ್ದೆವು. ಅದೀಗ ಹಣಕ್ಕಾಗಿ ರಾಜ್ಯಸಭಾ ಸ್ಥಾನಗಳನ್ನು ಬಿಟ್ಟುಕೊಟ್ಟು, ಕೋಟ್ಯಧಿಪತಿಗಳ ಪಕ್ಷವಾಗಿ ರೂಪುಗೊಂಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries