ನವದೆಹಲಿ: ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು ಇನ್ನಷ್ಟು ಹೆಚ್ಚು ಮಾಡಲು ಅವಕಾಶ ಕಲ್ಪಿಸುವ ಬಗೆಯಲ್ಲಿ ನಿಯಮಗಳಿಗೆ ಬದಲಾವಣೆ ತರುವ ಪ್ರಸ್ತಾವವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಾರ್ವಜನಿಕರ ಮುಂದಿರಿಸಿದೆ.
ಈ ನಿಯಮಗಳು ಜಾರಿಗೆ ಬಂದಲ್ಲಿ ಹೆಚ್ಚಿನ ಎಥೆನಾಲ್ ಮಿಶ್ರಣದ ಹಾಗೂ ಸಂಪೂರ್ಣವಾಗಿ ಜೈವಿಕ ಇಂಧನ ಬಳಸುವ ವಾಹನಗಳನ್ನು ಎಲ್ಲ ವರ್ಗಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ಸಿಗಲಿದೆ.
ಕೇಂದ್ರ ಮೋಟಾರು ವಾಹನಗಳ ನಿಯಮ - 1989ಕ್ಕೆ ತಿದ್ದುಪಡಿ ತರಲು ಸಚಿವಾಲಯ ಉದ್ದೇಶಿಸಿದೆ. ಇ85 (ಪೆಟ್ರೋಲ್ನಲ್ಲಿ ಶೇ 85ರಷ್ಟು ಎಥೆನಾಲ್ ಮಿಶ್ರಣ) ಮತ್ತು ಇ100 (ಪೂರ್ತಿಯಾಗಿ ಎಥೆನಾಲ್ ಬಳಕೆ) ಹಾಗೂ ಬಿ100 ಜೈವಿಕ ಡೀಸೆಲ್ ಬಳಸುವ ವಾಹನಗಳನ್ನು ವ್ಯಾಪಕವಾಗಿ ಬಳಕೆಗೆ ತರಲು ಈ ತಿದ್ದುಪಡಿಗಳು ಅವಕಾಶ ಕಲ್ಪಿಸುತ್ತವೆ.
ದೇಶದಲ್ಲಿ ಇ20 ಪೆಟ್ರೋಲ್ ಬಳಕೆ ಈಗಾಗಲೇ ಜಾರಿಗೆ ಬಂದಿದೆ. ಹೊಸ ಪ್ರಸ್ತಾವಿತ ನಿಯಮಗಳ ಬಗ್ಗೆ ಸಚಿವಾಲಯವು ಸಾರ್ವಜನಿಕರಿಂದ ಸಲಹೆ, ಆಕ್ಷೇಪ ಆಹ್ವಾನಿಸಿದೆ.

