ಜಮಾಲ್ಪುರ: ಸ್ವಾತಂತ್ರ್ಯಾನಂತರ ಎಲ್ಲ ಚುನಾವಣೆಗಳಲ್ಲೂ ಮತ ಚಲಾಯಿಸಿದ ದಾಖಲೆ ಹೊಂದಿರುವ 104 ವರ್ಷದ ಎಸ್. ಕೆ. ಇಬ್ರಾಹಿಂ ಬುಧವಾರ ಮತ್ತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಫೆಬ್ರುವರಿ 28ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ ಇವರ ಹೆಸರನ್ನು ನ್ಯಾಯನಿರ್ಣಯ ವರ್ಗದಡಿ ಇರಿಸಲಾಗಿತ್ತು.
2002ರ ಮತಪಟ್ಟಿಯಲ್ಲಿ ಇವರ ಹೆಸರು ಎಸ್. ಕೆ. ಇಬ್ರಾಹಿಂ ಎಂದಿದ್ದರೆ, 2025ರಲ್ಲಿ ಇಬ್ರಾಹಿಂ ಎಸ್. ಕೆ. ಎಂದು ದಾಖಲಾಗಿತ್ತು. ಆದರೆ ಕೆಲ ದಿನಗಳ ಗೊಂದಲದ ಬಳಿಕ, ಅವರ ಹೆಸರು ಮೊದಲ ಪೂರಕ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಈ ವಿಳಂಬದ ಕಾರಣದಿಂದಾಗಿ 85 ವರ್ಷ ಮೇಲ್ಪಟ್ಟವರಿಗೆ ಚುನಾವಣಾ ಆಯೋಗ ವ್ಯವಸ್ಥೆ ಮಾಡಿರುವ ಮನೆಯಿಂದೇ ಮತ ಚಲಾಯಿಸುವ ಸೌಲಭ್ಯ ಅವರಿಗೆ ದಕ್ಕಲಿಲ್ಲ.
ಆದರೆ ಇಬ್ರಾಹಿಂ ಈ ಬಾರಿಯೂ ಮತ ಚಲಾಯಿಸುವುದಾಗಿ ಪಟ್ಟು ಹಿಡಿದಿದ್ದರು. ಇವರ ಅಹವಾಲು ಪೂರ್ವ ಬುರ್ದ್ವಾನ್ ಜಿಲ್ಲಾಡಳಿತಕ್ಕೂ ತಲುಪಿತು. ಕೊನೆಗೆ ಜಿಲ್ಲಾಡಳಿತ ಇವರಿಗೆ ಮತಗಟ್ಟೆಗೆ ಬರಲು ಅನುವಾಗುವಂತೆ ವಾಹನ ಮತ್ತು ಗಾಲಿಕುರ್ಚಿಯ ಸೌಲಭ್ಯ ಕಲ್ಪಿಸಿಕೊಟ್ಟಿತು.
ವಾಹನದಲ್ಲಿ ಅವರನ್ನು ಕರೆತಂದು, ಗಾಲಿಕುರ್ಚಿಯಲ್ಲಿ ಜಮಾಲ್ಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಯಿತು. ಮಗ ಎಸ್. ಕೆ. ಬಗ್ಬುಲ್ ಇಸ್ಲಾಂ ಅವರ ಸಹಾಯದೊಂದಿಗೆ ಇಬ್ರಾಹಿಂ ಮತ ಚಲಾಯಿಸಿದರು.
"ಮತ ಚಲಾಯಿಸಲು ಸಾಧ್ಯವಾಗಿದ್ದಕ್ಕೆ ಅತೀವ ಸಂತಸವಾಗುತ್ತಿದೆ. ಮತದಾರರ ಪಟ್ಟಿಯಿಂದ ದಿಢೀರನೇ ನನ್ನ ಹೆಸರು ಏಕೆ ಮಾಯವಾಯಿತು ಎಂದು ನನಗೆ ತಿಳಿಯದು; ಆದರೆ ನಾನು ಅಧಿಕೃತ ಮತದಾರ. ಬತ್ರೀಷ್ಬಿಗಾ ಗ್ರಾಮದಲ್ಲಿ ಹುಟ್ಟಿದವನು," ಎಂದು ಇಬ್ರಾಹಿಂ ಮತ ಚಲಾಯಿಸಿದ ಬಳಿಕ ಹೇಳಿದರು.
"ಸಂದೇಹಾಸ್ಪದ ಮತದಾರ" ಎಂಬ ಚುನಾವಣಾ ಆಯೋಗದ ವಿವರಣೆ ಇವರನ್ನು ಹಾಗೂ ಕುಟುಂಬವನ್ನು ಆತಂಕಕ್ಕೆ ತಳ್ಳಿತ್ತು. ಅಂತಿಮ ಮತಪಟ್ಟಿ ಪ್ರಕಟಣೆ ಬಳಿಕ ಸುದ್ದಿಗಾರರು ಅವರನ್ನು ಸಂಪರ್ಕಿಸಿದಾಗ, "100 ವರ್ಷಕ್ಕಿಂತ ಹೆಚ್ಚು ಬದುಕುವುದು ಅಪರಾಧವೇ?" ಎಂದು ಮರು ಪ್ರಶ್ನೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ದಾಖಲೆಗಳ ಪರಿಶೀಲನೆ ಬಳಿಕ ಪೂರಕ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗಿತ್ತು.

