ತಿರುವನಂತಪುರಂ: ಸಂಸತ್ತಿನಲ್ಲಿ ಮಂಡನೆಯಾಗಿರುವ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ-2026 (ಎಫ್ಸಿಆರ್ಎ) ಸಮಾಜದ ಒಂದು ವರ್ಗದ ಜನರಲ್ಲಿ ಅಭದ್ರತೆಯನ್ನು ಸೃಷ್ಟಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಈ ಮಸೂದೆಯು ದೇಶದಾದ್ಯಂತ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವವನ್ನು ಸೃಷ್ಟಿಸಿದೆ.
ಅವರ ಆತಂಕವನ್ನು ನಿವಾರಿಸುವ ಪ್ರಯತ್ನ ಕೇಂದ್ರ ಸರ್ಕಾರದ ಕಡೆಯಿಂದ ಆಗಬೇಕಿತ್ತು. ಆದರೆ, ಅಂತಹ ಪ್ರಯತ್ನ ಆಗುತ್ತಿಲ್ಲ' ಎಂದು ದೂರಿದರು.
ವಿದೇಶಿ ದೇಣಿ ನಿಯಂತ್ರಣ ತಿದ್ದುಪಡಿ ಮಸೂದೆ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪತ್ರ ಬರೆದಿದ್ದರು. ಮರುದಿನವೇ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಇಂತಹ ಕ್ರಮಗಳು ದೇಶದ ಒಂದು ವರ್ಗದ ಜನರಲ್ಲಿ ಆತಂಕ, ಅಭದ್ರತೆಯನ್ನು ಸೃಷ್ಟಿಸುತ್ತವೆ. ಇದರಿಂದ ದೇಶಕ್ಕೆ ಯಾವ ರೀತಿಯಲ್ಲೂ ಒಳಿತಾಗುವುದಿಲ್ಲ ಎಂದು ಹೇಳಿದ್ದಾರೆ.
'ಕಾಂಗ್ರೆಸ್ ಪಕ್ಷವು ಈ ವಿಷಯದಲ್ಲಿ ಸರಿಯಾದ ನಿಲುವು ತಳೆದಿಲ್ಲ. ಮಸೂದೆಗೆ ಸಂಬಂಧಿಸಿದಂತೆ ತನ್ನ ನಿಲುವು ಏನು ಎಂಬುದನ್ನು ಈ ಹಳೆಯ (ಕಾಂಗ್ರೆಸ್) ಪಕ್ಷ ಬಹಿರಂಗಪಡಿಸಿಲ್ಲ. ಅದು ಮೃದು ಹಿಂದುತ್ವವನ್ನು ಅಪ್ಪಿಕೊಂಡಿದೆ' ಎಂದು ಟೀಕಿಸಿದ್ದಾರೆ.

